Advertisement
ಹೌದು, ಕೃಷ್ಣಾ ನದಿಗೆ ಗಡ್ಡಿಯ ಜನರ ಸಂಪರ್ಕಕ್ಕಾಗಿ ನಿರ್ಮಿಸಲಾದ ಹೈಡ್ರೋ ಪವರ್ ವಿದ್ಯುತ್ ಕೇಂದ್ರಕ್ಕೆ ಸಂಬಂಧಿಸಿದ ಸೇತುವೆ ನೀರಿನ ಹೊಡೆತಕ್ಕೆ ಕೊಚ್ಚಿ ಹೋದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
Related Articles
Advertisement
ಗಂಜಿ ಕೇಂದ್ರ ಸ್ಥಳಾಂತರಿಸಬೇಕಿದೆ: ನೆರೆ ಸಂತ್ರಸ್ತರಿಗೆ ಬೆಂಚಿಗಡ್ಡಿ ಗ್ರಾಮದಲ್ಲಿ ಸ್ಥಾಪಿಸಲಾದ ಗಂಜಿ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕಿದೆ. ಅದಾಗ್ಯೂ ಬೆಂಚಿಗಡ್ಡಿಗೂ ಪ್ರವಾಹ ಬಿಸಿ ತಟ್ಟಿದೆ. ಇದರಿಂದಾಗಿ ಅಲ್ಲಿನ ಜನರಿಗೂ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಕೃಷ್ಣಾ ನದಿಯ ರುದ್ರನರ್ತಕ್ಕೆ ರೈತರ ಜಮೀನುಗಳಿಗೆ ನೀರು ನುಗ್ಗಿ ಸಜ್ಜೆ, ಭತ್ತ ನಾಶವಾಗಿದ್ದು ಕಂಡು ಬಂದಿದೆ. ನದಿಗೆ ಇರುವ ವಿದ್ಯುತ್ ಪರಿವರ್ತಕ ಯಂತ್ರ ಮುಳಗಿವೆ. ಕೆಲ ರೈತರು ತಮ್ಮ ಪಂಪ್ ಸೆಟ್ ಮೋಟಾರ್ ಕಿತ್ತಿಕೊಂಡು ಮನೆಯೊಳಗೆ ಇಟ್ಟುಕೊಂಡು ರಕ್ಷಣೆ ಮಾಡಿದ್ದೇವೆ ಎನ್ನುತ್ತಾರೆ ಈ ಭಾಗದ ರೈತರು.
ತಿಂಥಣಿ ಗ್ರಾಮಕ್ಕೆ ನುಗ್ಗಿದ ಕೃಷ್ಣೆ ನೀರು: ಸುಕ್ಷೇತ್ರ ತಿಂಥಣಿ ಗ್ರಾಮಕ್ಕೂ ಕೃಷ್ಣಾ ನದಿ ನೀರು ನುಗ್ಗಿ ಬಹುತೇಕ ಮನೆಗಳಲ್ಲಿ ಹೊಕ್ಕಿವೆ. ಸಂಚಾರಕ್ಕೆ ಪರಿತಪಿಸುವುದಲ್ಲದೇ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಇನ್ನೂ ಮೌನೇಶ್ವರ ದೇವಾಲಯದ ಆವರಣದಲ್ಲಿ ಸಂಪೂರ್ಣ ನೀರು ನುಗ್ಗಿ ಅಲ್ಲಿನ ಅಂಗಡಿಮುಂಗಟ್ಟು ಒಳಗೆ ನೀರು ಹಾಯ್ದಿವೆ. ನೆರೆ ಸಂತ್ರಸ್ತರಿಗಾಗಿ 2009ರಲ್ಲಿ ಜೈವಿಕ್ ಇಂಧನ ಪಾರ್ಕ್ ಹತ್ತಿರ ನಿರ್ಮಿಸಿದ ಮನೆಗಳಿಗೆ 40ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಜಿ ಕೇಂದ್ರ ಇಲ್ಲ: ತಿಂಥಣಿ ನೆರೆ ಸಂತ್ರಸ್ತರಿಗೆ ತಿಂಥಣಿ ಗ್ರಾಮದಲ್ಲಿ ಗಂಜಿ ಕೇಂದ್ರ ಸ್ಥಾಪಿಸಬೇಕಿತ್ತು. ಆದರೆ ಇವರೆಗೂ ಗಂಜಿ ಕೇಂದ್ರ ಸ್ಥಾಪನೆಗೊಂಡಿಲ್ಲ. ಹೀಗಾಗಿ ಅಲ್ಲಿನ ಜನರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಯಾದಗಿರಿ: ಕೃಷ್ಣಾ ಪ್ರವಾಹಕ್ಕೆ ಜಮೀನುಗಳಿಗೆ ನೀರು ನುಗ್ಗಿದ್ದು, ಶಹಾಪುರ ತಾಲೂಕಿನ ಗೌಡೂರು, ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮಗಳಿಗೆ ನೀರು ನುಗ್ಗಿ ಮುಳುಗಡೆಯಾಗುವ ಭೀತಿ ಎದುರಾಗಿದೆ.
ಕೃಷ್ಣಾ ಹಿನ್ನೀರು ನುಗ್ಗುತ್ತಿದ್ದು, ಒಂದೊಂದಾಗಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಯಕ್ಷಿಂತಿ ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿದ್ದು, ಜಮೀನುಗಳಿಗೆ ಸಂಪೂರ್ಣ ನೀರು ನುಗ್ಗಿದ್ದು, ಹಿನ್ನೀರು ರಭಸದಿಂದ ಗ್ರಾಮ ಸುತ್ತುವರೆದಿದೆ. ಗ್ರಾಮಕ್ಕೆ ನೀರು ನುಗ್ಗಲು ಕೆಲವೇ ಮೀಟರ್ ಅಂತರ ಮಾತ್ರ ಬಾಕಿ ಇದೆ.
ಬಸವಸಾಗರ ಜಲಾಶಯದಿಂದ 6.25 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿರುವುದರಿಂದ ನೀರು ಸಂಪೂರ್ಣ ಗ್ರಾಮದ ಹತ್ತಿರ ತಲುಪಿವೆ. ಈಗಾಗಲೇ ಮುನ್ನೆಚ್ಚರಿಕೆಯಾಗಿ ತಾಲೂಕು ಆಡಳಿತ ಗ್ರಾಮಸ್ಥರೆಲ್ಲರನ್ನು ಹತ್ತಿಗೂಡೂರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲು ಕಾರ್ಯಪ್ರವೃತ್ತವಾಗಿದೆ.
ಗ್ರಾಮದಲ್ಲಿ ಹೆಚ್ಚಿನ ನೀರು ಬರುವ ಸುಳಿವು ಸಿಕ್ಕ ಹಿನ್ನೆಲೆ ತಹಶೀಲ್ದಾರ್ ಸಂತೋಷರಾಣಿ ಎಚ್ಚೆತ್ತು, ಸಾರಿಗೆ ಇಲಾಖೆ ಬಸ್, ಖಾಸಗಿ ಟ್ರ್ಯಾಕ್ಟರ್ ಹಾಗೂ ಇನ್ನಿತರ ವಾಹನಗಳ ಮೂಲಕ ಇಡೀ ಗ್ರಾಮವನ್ನೇ ಸ್ಥಳಾಂತರಿಸಲಾಗುತ್ತಿದೆ. ಗ್ರಾಮದ ಹೊಲದಲ್ಲಿ ಸುಮಾರು 6ಕ್ಕೂ ಹೆಚ್ಚು ಜಾನುವಾರುಗಳು ಮೇಯುತ್ತಿದ್ದ ಜಮೀನಿನ ಸುತ್ತ ನೋಡುತ್ತಲೇ ನೀರು ಆವರಿಸಿದ್ದರಿಂದ ಜಾನುವಾರುಗಳು ಅತಂತ್ರ ಸ್ಥಿತಿಯಲ್ಲಿ ಪ್ರವಾಹಕ್ಕೆ ಸಿಲುಕುವ ಭೀತಿ ಆವರಿಸಿತ್ತು. ಈ ಮಧ್ಯ ಗ್ರಾಮಸ್ಥರು ಜಾಗೃತಿ ವಹಿಸಿದ್ದರಿಂದ ಪ್ರವಾಹಕ್ಕೆ ಸಿಲುಕುತ್ತಿದ್ದ ಜಾನುವಾರುಗಳನ್ನು ರಕ್ಷಿಸಲಾಯಿತು.
ಇನ್ನೂ ಶಹಾಪೂರ ತಾಲೂಕಿನ ಗೌಡೂರ ಗ್ರಾಮದ ಸುತ್ತಲಿನ ಜಮೀನುಗಳಿಗೆ ನೀರು ಆವರಿಸಿದ್ದು, ಗ್ರಾಮದ ಹೊರವಲಯದ ಶಾಂತಮ್ಮ ಮನೆಯವರೆಗೆ ನೀರು ಬಂದಿದೆ. ಹಾಗಾಗಿ ಗೌಡೂರು ಗ್ರಾಮಕ್ಕೂ ನೀರು ನುಗ್ಗುವ ಭೀತಿ ಆವರಿಸಿದ್ದು, ಗ್ರಾಮಸ್ಥರು ಭಯ ಭೀತಗೊಂಡಿದ್ದಾರೆ. ತಮ್ಮ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆಗಳಿವೆ, ನಮ್ಮ ಅಳಲು ಯಾರು ಕೇಳುತ್ತಿಲ್ಲ. ಗ್ರಾಮದ ಸುತ್ತ ನೀರು ಬರುತ್ತಿದೆ. ಯಾವಾಗ ಏನಾಗುತ್ತದೆ ಎಂದು ತಿಳಿಯದಂತಿದೆ. ನಮ್ಮ ಜೊತೆ ಜಾನುವಾರುಗಳಿವೆ. ಅವುಗಳನ್ನೆಲ್ಲ ಬಿಟ್ಟು ನಾವು ಹೇಗೆ ಸ್ಥಳಾಂತರವಾಗಬೇಕು ಎಂದು ಮಹಿಳೆಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.