ಕಕ್ಕೇರಾ: ಕೃಷ್ಣಾ ನದಿ ಪ್ರವಾಹ ಆವರಿಸಿದ ನೀಲಕಂಠರಾಯನ ಗಡ್ಡಿಯಲ್ಲಿ ಉಳಿದ ಗರ್ಭಿಣಿ ಹಣಮವ್ವ ಅವರನ್ನು ಶನಿವಾರ ಸಂಜೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ನೇತೃತ್ವ ತಂಡ ನದಿಗೆ ಬೋಟ್ ಬಿಡುವ ಮೂಲಕ ಪ್ರವಾಹ ದಾಟಿಸಿತು.
ನಂತರ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ನೀಲಕಂಠರಾಯನ ಗಡ್ಡಿ ಜನರ ಸಂಚಾರಕ್ಕೆ ಸೇತುವೆ ಗುಣಮಟ್ಟತೆಯನ್ನು ಪರಿಶೀಲನೆ ನಡೆಸಿ ಸೇತುವೆ ಮೇಲೆ ಸಂಚರಿಸುವುದು ಸೂಕ್ತವೋ ಅಥವಾ ಅಪಾಯ ಎಂಬದು ಅರಿತುಕೊಂಡು ಅಲ್ಲಿನ ಜನರ ಸಂಚಾರಕ್ಕೆ ಬೋಟ್ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ಗರ್ಭಿಣಿಯನ್ನು ಕರೆತರಲಾಗಿದೆ. ಅಲ್ಲದೇ ಹೈಡ್ರೋಪವರ್ ವಿದ್ಯುತ್ ಕೇಂದ್ರದವರು ನಿರ್ಮಿಸಿದ್ದ ಸೇತುವೆ ಕಿತ್ತುಕೊಂಡು ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಇಳಿದ ನಂತರ ಹೈಡ್ರೋಪವರ್ ವಿದ್ಯುತ್ ಕೇಂದ್ರದವರು ಸೇತುವೆ ನಿರ್ಮಿಸಿಕೊಡಲಿದ್ದಾರೆ. ಈ ಬಗ್ಗೆ ಅವರಿಗೆ ಸೂಚಿಸಲಾಗಿದೆ ಎಂದರು.
ಕೃಷ್ಣಾ ನದಿಗೆ ಈಗಾಗಲೇ 4.20 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಪ್ರವಾಹ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿದೆ. ಪ್ರವಾಹ ಇಳಿಮುಖ ಆಗುವವರೆಗೂ ಕಾಯಬೇಕಿದೆ. ತುರ್ತು ಸಮಸ್ಯೆ ಆದರೆ ಬೋಟ್ ಮೂಲಕ ಅಗತ್ಯ ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.
ನೀಲಕಂಠರಾಯನ ಗಡ್ಡಿಯಿಂದ ಕರೆ ತಂದ ಗರ್ಭಿಣಿ ಹಣಮವ್ವ ಅವರನ್ನು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ ಮಾಡಿಸಿದಾಗ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಪರಿಪೂರ್ಣ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ಖಚಿತ ಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಾಣೆ, ತಹಶೀಲ್ದಾರ್ ಸುರೇಶ ಅಂಕಲಗಿ, ಪಿಎಸ್‌ಐ ಪ್ರದೀಪ್ ಬೀಸೆ, ಉಪ-ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಗ್ರಾಮಲೆಕ್ಕಾಧಿಕಾರಿ ಸಂತೋಷ ರೆಡ್ಡಿ ಹಾಗೂ ಅಗ್ನಿಶ್ಯಾಮಕ ಅಧಿಕಾರಿಗಳು ಇದ್ದರು.