ಕಕ್ಕೇರಾ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗೆ ನೀರು ಹರಿಸುವ ಕುರಿತು ನ. 17ರಂದು ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಅಂತೂ ಸರಕಾರ ನಿರ್ಧರಿಸಿದ್ದು, ಈ ಭಾಗದ ರೈತರಿಗೆ ಖುಷಿ ಮೂಡಿಸಿದೆ.
Advertisement
ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನಡೆಯಲಿದ್ದು, ಬಸವಸಾಗರ ಎಡದಂಡೆ ಹಾಗೂ ಬಲದಂಡೆ ಕಾಲುವೆ ನೀರು ನೆಚ್ಚಿಕೊಂಡ ಈ ಭಾಗದ ರೈತರು ಸಭೆ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ನೀರಾವರಿ ಸಲಹಾ ಸಮಿತಿ ನಡೆಸಿ ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹಾಗೂ ಹಾಲಿ ಶಾಸಕ ನರಸಿಂಹನಾಯಕ(ರಾಜುಗೌಡ) ಕೆಲದಿನದ ಹಿಂದೆ ಸರಕಾರಕ್ಕೆ ಒತ್ತಾಯಿಸಿದ್ದರು. ಹಾಗೇ ಈ ಭಾಗದ ಹಲವಾರು ಸಂಘಟನೆಗಳು ಕೂಡ ಸಭೆ ನಡೆಸಿ ನೀರು ಹರಿಸುವ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದವು ಎಂಬುದು ಇಲ್ಲಿ ಗಮನಾರ್ಹ ಸಂಗತಿ.
Related Articles
Advertisement
ಕಳೆದ ವರ್ಷ ಮುಂಗಾರು ಮಾತ್ರ ಬೆಳೆದ ಅನ್ನದಾತರು ಹಿಂಗಾರು ಭತ್ತ ಬೆಳೆಯದೇ ನಷ್ಟವೇ ಹೊಂದಬೇಕಾಯಿತು. ಇದರಿಂದಾಗಿ ಕೃಷಿ ಕೂಲಿಕಾರ್ಮಿಕರು ಹಾಗೂ ರೈತರು ಗುಳೆ ಹೋಗುವಂತಾಗಿತ್ತು. ಖುಷಿಯಿಂದಲೇ ಮುಂಗಾರು ಬೆಳೆದ ರೈತರಿಗೆ ಈಗ ಹಿಂಗಾರು ಭತ್ತದ ನೀರಿನ ಚಿಂತೆ ಮಾಡುವಂತಾಗಿ ಕೆಲವರು ಇನ್ನೂ ಕೂಡ ಸಸಿ ಹಾಕಿಲ್ಲ. ಕೆಲ ರೈತರು ದೇವರ ಮೇಲೆ ಬಾರ ಹಾಕಿ ಸಸಿ ಹಾಕಿದ್ದಾರೆ. ಸದ್ಯ ಕಾಲುವೆಗೆ ನೀರು ಹರಿಸುವ ಕುರಿತು ನಡೆಸುವ ಸಲಹಾ ಸಮಿತಿ ಸಭೆಯತ್ತ ರೈತರು ಚಿತ್ತ ಹರಿಸಿದ್ದಾರೆ.
ಪ್ರತಿ ಸಲ ನೀರಾವರಿ ಸಭೆಯಲ್ಲಿ ಕಾಲುವೆಗಳಿಗೆ ವಾರ ಬಂದಿ ಪದ್ಧತಿ ಪ್ರಕಾರ ನೀರು ಹರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪದೆ ಗೋಳಾಡುವಂತಾಗಿದೆ. ಅಲ್ಲದೇ ಉತ್ತಮವಾಗಿ ಯಾವುದೇ ಬೆಳೆ ಬೆಳೆಯದೆ ಬಹುತೇಕ ರೈತರು ನಷ್ಟವೇ ಎದುರಿಸಬೇಕಾಯಿತು. 2019ನೇ ಸಾಲಿಗಾದರೂ ಸಲಹಾ ಸಮಿತಿ ವಾರಬಂದಿ ಪದ್ಧತಿ ಕೈಬಿಟ್ಟು ಏಪ್ರಿಲ್ 30 ವರೆಗೂ ನೀರು ಹರಿಸಿದರೆ ಮಾತ್ರ ಅನ್ನದಾತರಿಗೆ ಉಳಿಗಾಲವಿದೆ ಎಂಬ ಕೂಗು ರೈತರಿಂದ ಕೇಳಿ ಬರುತ್ತಿದೆ. ಅದಾಗ್ಯೂ ನೀರಾವರಿ ಸಲಹಾ ಸಮಿತಿ ಮೇಲೆ ರೈತರ ಭವಿಷ್ಯ ಅಡಗಿದೆ ಎಂದು ರೈತ ಸಂಘಟನೆ ಮುಖಂಡರ ಅಭಿಪ್ರಾಯವಾಗಿದೆ.
ಈಗಾಗಲೇ ಶಹಾಪುರ, ಜೇವರ್ಗಿ, ದೇವದುರ್ಗ ಹಾಗೂ ಸುರಪುರ ಪ್ರದೇಶದ ರೈತರು ಕಾಲುವೆಗಳ ನೀರು ನಂಬಿಕೊಂಡು ಹಿಂಗಾರು ಶೇಂಗಾ ಬಿತ್ತನೆ ಮಾಡಿದ್ದಾರೆ. ಸುರಪುರ ತಾಲೂಕಿನಲ್ಲಿ 3978 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. 36620 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ನಾಟಿ ಮಾಡಲಾಗಿದೆ. 54758 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಭತ್ತ ನಾಟಿ ಸಾಧ್ಯತೆ ಇದೆ ಎನ್ನಲಾಗಿದೆ. ಹತ್ತಿ ದೀರ್ಘ ಬೆಳೆಯಾಗಿದೆ. ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವ ಕುರಿತು ಜನಪ್ರತಿನಿಧಿಗಳು ಒಳ್ಳೆಯ ನಿರ್ಣಯ ಕೈಗೊಳ್ಳಬೇಕಾಗಿದೆ ಎಂಬುದು ರೈತರ ಆಗ್ರಹ.