Advertisement

ಗಡ್ಡಿ ಜನರಿಗೆ ಮತ್ತೆ ಪ್ರವಾಹ ಭೀತಿ

12:41 PM Sep 07, 2019 | Team Udayavani |

ಕಕ್ಕೇರಾ: ಮಹಾರಾಷ್ಟ್ರದಲ್ಲಿ ವ್ಯಾಪಾಕ ಮಳೆ ಸುರಿಯುತ್ತಿರುವ ಪರಿಣಾಮ ನಾರಾಯಣಪುರ ಬಸವಸಾಗರ ಜಲಾಶಯದಿಂದ 1.50 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿಸಿದ್ದರಿಂದ ಮತ್ತೆ ನೀಲಕಂಠರಾಯನ ಗಡ್ಡಿ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.

Advertisement

ನೀಲಕಂಠರಾಯನ ಗಡ್ಡಿ ಜನರಿಗೆ ಸಂಚಾರ ಸ್ಥಗಿತಗೊಂಡು ನದಿ ಈಜುವುದು ಬಿಟ್ಟರೆ ಸಂಚಾರಕ್ಕೆ ಬೇರೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ದೈನಂದಿನ ಜೀವನಕ್ಕೆ ಬೇಕಾಗುವ ವಸ್ತುಗಳಿಗಾಗಿ ಈಜುಕಾಯಿ ಬಳಸಿ ಕೈಯಲ್ಲಿ ಪಾತ್ರೆ ಹಿಡಿದು ನದಿ ಈಜುವ ಸಾಹಸಕ್ಕೆ ಕೈ ಹಾಕುವಂತಾಗಿದೆ.

40 ಕುಟುಂಬ ಇರುವ ಅಲ್ಲಿನ ಜನರಿಗೆ ಪ್ರವಾಹ ಬಂದಾಗ ಸುಲಭವಾಗಿ ಸಂಚರಿಸಲು ಸೇತುವೆ ನಿರ್ಮಿಸಲಾಗಿತ್ತು. ಜುಲೈ ತಿಂಗಳಲ್ಲಿ ಆವರಿಸಿದ ಕೃಷ್ಣಾ ಪ್ರವಾಹ ನೀರಿನ ಹೊಡೆತಕ್ಕೆ ಹೈಡ್ರೋಪವರ್‌ ಪಾಯಿಂಟ್ ಕಂಪನಿ ನಿರ್ಮಿಸಿದ ಸೇತುವೆ ಕಳೆದ ಅಗಸ್ಟ್‌ 10ರಂದು ಸಂಪೂರ್ಣ ನೀರಲ್ಲಿ ಕೊಚ್ಚಿ ಹೋಗಿದೆ. ಸೇತುವೆ ಅವ್ಯವಸ್ಥೆ ಪರಿಣಾಮವೇ ಈಗ ಇಲ್ಲಿನ ಜನರು ಸುರಕ್ಷತೆ ಅಲ್ಲದ ನದಿ ಈಜಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.

ಪ್ರವಾಹ ಆವರಿಸಿದ್ದರಿಂದ ವಿದ್ಯುತ್‌ ಕಂಬ ಕಿತ್ತಿ ಹೋಗಿವೆ. ಹೀಗಾಗಿ ಗಡ್ಡಿಯಲ್ಲಿ ವಿದ್ಯುತ್‌ ಇಲ್ಲದೆ ಕತ್ತಲಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಪದೇ ಪದೇ ಪ್ರವಾಹ ಆತಂಕ ಪಡುವಂತಾಗಿದೆ. ಇನ್ನೂ ಸಂಚಾರ ಕಡಿತದಿಂದ ಅಲ್ಲಿನ ಸರಕಾರಿ ಶಾಲೆಗೆ ಐದು ದಿನಗಳಿಂದಲು ರಜೆ ಮುಂದುವರಿದಿದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next