ಮಹಾನಗರ, ಜ. 8: ಸಾಮಾನ್ಯವಾಗಿ ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ ಹೂ ಬಿಡುವ “ಕಕ್ಕೆ’ ಮರವು ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಅವಧಿಗೂ ಮುನ್ನ ಹೂ ಬಿಟ್ಟಿದೆ.
ದ.ಕ. ಜಿಲ್ಲೆಯಲ್ಲಿ ಕಕ್ಕೆ ಮರವನ್ನು “ಕೊಂದೆ’ ಮರವೆಂದು ಕರೆಯಲಾಗುತ್ತದೆ. ಕೇರಳದಲ್ಲಿ ವಿಷು ಆಚ ರಣೆ ವೇಳೆ ಇಡೀ ಮರದಲ್ಲಿ ಸೊಗಸಾಗಿ ಕಾಣುವ ಹಳದಿ ವರ್ಣದ ಗೊಂಚಲನ್ನು ಬಿಡುವ ಕಕ್ಕೆ ಮರದ ಹೂಗಳನ್ನು ಮತ್ತು ಅದರ ಎಲೆಗಳನ್ನು ದೇವರ ಕೋಣೆಯಲ್ಲಿ ಚಿನ್ನ, ನಾಣ್ಯಗಳೊಟ್ಟಿಗೆ ಇಟ್ಟು ಪೂಜಿಸಲಾಗುತ್ತದೆ.
ಸಾಮಾನ್ಯವಾಗಿ ಮಾರ್ಚ್ ಮಾಸಾಂತ್ಯ ದಿಂದ ಎಪ್ರಿಲ್ ತಿಂಗಳ ಆರಂಭದಲ್ಲಿ ಕಕ್ಕೆ ಮರದಲ್ಲಿ ಹೂವುಗಳು ಬಿಡುತ್ತವೆ. ಈ ಮರವು ಹೂವು ಬಿಟ್ಟ ಸುಮಾರು ವಾರದಿಂದ ಹತ್ತು ದಿನಗಳೊಳಗಾಗಿ ಆ ಭಾಗದಲ್ಲಿ ಮಳೆ ಬರುವುದು ವಿಶೇಷ. ಆದರೆ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಹೂ ಬಿಡುವ ಕಕ್ಕೆ ಮರವು ವಾತಾವರಣದ ಏರುಪೇರಿನ ಪರಿಣಾಮದಿಂದಾಗಿ ಡಿಸೆಂಬರ್ ತಿಂಗಳಲ್ಲಿಯೇ ಹೂ ಬಿಡಲು ಆರಂಭಿಸಿದೆ. ಇದಕ್ಕೆ ತಕ್ಕಂತೆ ದ.ಕ. ಜಿಲ್ಲೆಯ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಈಗಾಗಲೇ ಮಳೆಯೂ ಆರಂಭವಾಗಿದೆ.
ಪರಿಸರ ನಾಶದಿಂದ ಹವಾಮಾನ ವೈಪರಿತ್ಯ :
ಕಾಡು, ಮರಗಳ ನಾಶ, ಹಲವೆಡೆ ಬಹು ಮಹಡಿ ಕಟ್ಟಡ, ಫ್ಲಾಟ್‌ಗಳು, ಕಾಂಕ್ರೀಟ್, ಇಂಟರ್‌ಲಾಕ್ ಅಳವಡಿಸಿದ ಪರಿಣಾಮ ಹಗಲು ಹೊತ್ತಿನಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದೆ. ಇದರಿಂದಾಗಿ ಹೊರಗಿನ ವಾತಾವರಣ ಬದಲಾಗಿ ಸೆಕೆಯ ಬಿಸಿ ರಾತ್ರಿ ಹೊತ್ತು ಕೂಡ ಇರುತ್ತದೆ. ಇನ್ನು, ಮಂಗಳೂರಿನ ಮಾರುಕಟ್ಟೆಗೆ ಡಿಸೆಂಬರ್ ತಿಂಗಳಲ್ಲೇ ಹಲಸು ಮಾರಾಟಕ್ಕೆ ಬಂದಿದೆ.
ಕಕ್ಕೆ ಮರಕ್ಕೆ ಆರೋಗ್ಯ ಗುಣ :
ಸಸ್ಯಶಾಸ್ತ್ರಜ್ಞ ಎಂ. ದಿನೇಶ್ ನಾಯಕ್ ಅವರು ಪ್ರತಿಕ್ರಿಯಿಸಿ, “ಕಕ್ಕೆ ಮರವನ್ನು ಇಂಗ್ಲಿಷ್‌ನಲ್ಲಿ “ಕಾಸಿಯ ಪಿಸ್ತೂಲ’ ಎಂದು, ಸಸ್ಯಶಾಸ್ತ್ರದಲ್ಲಿ “ಇಂಡಿಯನ್ ಲಬರ್ನಮ್ ಟ್ರೀ’, ಸಂಸ್ಕೃತದಲ್ಲಿ ಈ ಮರವನ್ನು “ಅರಗ್ವಧ’ ಎಂದು ಕರೆಯಲಾಗುತ್ತದೆ. ಆಯುರ್ವೇದದಲ್ಲಿ ಇದರ ಮರದ ಕೆತ್ತೆಯಿಂದ “ಧಾರಿಷ್ಟ’ ಎಂಬ ಮದ್ದನ್ನು ತಯಾರಿಸಲಾಗುತ್ತಿದ್ದು, ಇಡೀ ಮರದ ತೊಗಟೆ, ಎಲೆಗಳು, ಕೋಡು, ಬೀಜಗಳು, ಹೂವುಗಳನ್ನು ನಿತ್ರಾಣ, ಕೆಮ್ಮು, ವಾತ, ಕುಷ್ಟರೋಗ, ಶೀತ ಹೀಗೆ ಹಲವಾರು ರೋಗ ನಿವಾರಕವಾಗಿ ಉಪಯೋಗವಾಗುತ್ತದೆ’ ಎನ್ನುತ್ತಾರೆ.