ಯಲಹಂಕ: ಇತ್ತೀಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಾಕೋಳು ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅರ್ಕಾವತಿ ನದಿ ಮಾರ್ಗದಲ್ಲಿ ಬರುವ ಹೆಸರಘಟ್ಟ ಕೆರೆಗೆ ಹೊಂದಿಕೊಂಡಿರುವ ಕಾಕೋಳು ಕೆರೆ ತುಂಬಿ 18 ವರ್ಷಗಳೇ ಕಳೆದಿದ್ದವು. ಪ್ರಸ್ತುತ ತುಂಬಿರುವ ಕೆರೆಯನ್ನು ನೋಡಲು ಪ್ರತಿ ನಿತ್ಯ ನೂರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಒಂದೂವರೆ ತಿಂಗಳಿನಿಂದ ಸತತವಾಗಿ ಬಿದ್ದ ಮಳೆಯಿಂದ ಹನಿಯೂರು ಮತ್ತು ಬೈರಾಪುರ ಕೆರೆಗಳು ತುಂಬಿ ಕೋಡಿ ಹರಿದ ನೀರು, ಸುಮಾರು 570 ಹೆಕ್ಟೇರ್ ವಿಸ್ತೀರ್ಣದ ಕಾಕೋಳು ಕೆರೆಯನ್ನು ತುಂಬಿಸಿದೆ. ಇದರಿಂದ ಸುತ್ತಮುತ್ತ ಅಂತರ ಜಲ ವೃದ್ಧಿಯಾಗುವುದಲ್ಲದೆ, ಜಾನುವಾರು ಗಳಿಗೆ ನೀರು ದೊರೆಯಲಿದೆ. ಕೆರೆ ಗೇಟ್‌ನಿಂದ ನೀರು ಹೊರಹೋಗ ದಂತೆ ಸ್ಥಳೀಯರು ಭದ್ರ ಮಾಡಿದ್ದಾರೆ. ಆದರೆ
ಕೆರೆ ಹಿಂಭಾಗದಲ್ಲಿರುವ ಭೂಮಿಯನ್ನು ಕಬಳಿಸಿರುವ ಒತ್ತುವರಿದಾರರು, ತೂಬು ಮತ್ತು ಕೋಡಿಯನ್ನು ಒಡೆದು ನೀರು ಹೊರ ಬಿಡುವ ಸಾಧ್ಯತೆಯಿದ್ದು, ಅಧಿಕಾರಿಗಳು ಒತ್ತು ವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕೆರೆ ತುಂಬಿರುವುದರಿಂದ ಸಂತೋಷವಾಗಿದೆ. ಉತ್ತಮ ಮಳೆಯಿಂದ ಈ ಭಾಗದ ಬತ್ತಿಹೋಗಿದ್ದ ಕೆರೆಗಳು ಮರುಜೀವ ಪಡೆದುಕೊಂಡಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
ಜಯರಾಮಯ್ಯ, ಬ್ಯಾತ ಗ್ರಾಮದ ರೈತ