Advertisement

ಕಾಸು ತರುವ ಕಾಕಡ

09:14 AM Jul 23, 2019 | Sriram |

ಕಾಕಡ ಪುಷ್ಪವನ್ನು ಬೆಳೆಯಬೇಕೆಂಬ ಯೋಚನೆ ದಾವಣಗೆರೆ ಜಿಲ್ಲೆಯ ಶ್ಯಾಗ್ಲೆ ಗ್ರಾಮದ ರಾಜನಹಳ್ಳಿಯ ಸುರೇಶ್‌ರವರ ಮನದಲ್ಲಿ ಬಹಳ ವರ್ಷಗಳಿಂದಲೂ ಇತ್ತು. ತೆಂಗಿನ ಮಧ್ಯೆ ಅಡಕೆ, ಕಾಕಡ ಬೆಳೆಯುವ ಅವರ ಪ್ರಯತ್ನ ಇತರರಿಗೆ ಮಾದರಿ. ಸಾಮಾನ್ಯವಾಗಿ ತೆಂಗಿನ ತೋಟದ ಮಧ್ಯೆ ಇತರ ಬೆಳೆಗಳನ್ನು ಬೆಳೆಯುವುದು ಕಡಿಮೆ. ತೆಂಗಿನ ಗರಿಗಳು ಬೀಳುತ್ತಿರುತ್ತವೆ, ತೋಟದೊಳಗೆ ಸರಿಯಾಗಿ ಬೆಳಕು ಬೀಳುವುದಿಲ್ಲ ಮುಂತಾದ ತೊಂದರೆಗಳು ಎದುರಾಗುವುದು ಅದಕ್ಕೆ ಕಾರಣ.

Advertisement

ತೆಂಗಿನ ಸಾಲಿನ ನಡುವೆ…
ಇವರ ಬಳಿ ಒಂದು ಎಕರೆ ಹತ್ತು ಗುಂಟೆಯಲ್ಲಿ ನೂರು ತೆಂಗಿನ ಗಿಡಗಳಿವೆ. ಮೂವತ್ತು ಆಡಿ ಅಂತರದಲ್ಲಿ ತೆಂಗಿನ ಗಿಡಗಳಿವೆ. ಎರಡು ತೆಂಗಿನ ಗಿಡಗಳ ಮಧ್ಯೆ ಒಟ್ಟು ನಾಲ್ಕು ಸಾಲುಗಳನ್ನು ಮಾಡಿಕೊಂಡಿದ್ದಾರೆ. ಒಂದು ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ಒಂಭತ್ತು ಅಡಿ ಆಂತರ ಬಿಟ್ಟು ಅಡಕೆ ಗಿಡಗಳನ್ನು ಬೆಳೆದಿದ್ದಾರೆ. ಉಳಿದ ಮೂರು ಸಾಲಿನಲ್ಲಿ ಕಾಕಡ ಪುಷ್ಪವನ್ನು ಬೆಳೆದಿದ್ದಾರೆ. ಕಾಕಡ ಸುಮಾರು ಇಪ್ಪತ್ತು ವರ್ಷಗಳವರೆಗೆ ಬದುಕುತ್ತದೆ. ನಾಲ್ಕು ವರ್ಷಗಳ ಹಿಂದೆ ಗುಲಾಬಿ ಬೆಳೆಯುವ ಪ್ರಯತ್ನವನ್ನು ಮಾಡಿದ್ದರು. ಕಾಕಡಕ್ಕೆ ಹೋಲಿಸಿದರೆ ಗುಲಾಬಿ ಗಿಡಕ್ಕೆ ಹೆಚ್ಚಿನ ಬಿಸಿಲು ಬೇಕು. ಆದ್ದರಿಂದ ನಿರೀಕ್ಷೆಯಷ್ಟು ಇಳುವರಿ ಕೈಸೇರಿರಲಿಲ್ಲ. ಕಾಕಡ ಬೆಳೆಯಲು ತಗಲುವ ಖರ್ಚು ಕಡಿಮೆ.

ಕಾಕಡ ನಾಟಿಗೆ ಜೂನ್‌, ಜುಲೈ ಸೂಕ್ತ ಸಮಯ. ಉತ್ತರಕರ್ನಾಟಕದ ಮಣ್ಣಿಗೆ ಸರಿಹೊಂದುವ ಬೆಳೆಯಿದು. ಒಂದು ಆಡಿ ಆಳ, ವಿಸ್ತೀರ್ಣದ ಗುಂಡಿ ತೆಗೆದು ನಾಟಿ ಮಾಡಬೇಕು. ನಾಟಿ ಹಂತದಲ್ಲಿ ಪ್ರತಿ ಬುಡಕ್ಕೆ ಅರ್ಧ ಬುಟ್ಟಿಯಷ್ಟು ಸಾವಯವ ಗೊಬ್ಬರವನ್ನು ನೀಡಬೇಕು. ಹದಿನೈದು ದಿನಕ್ಕೊಂದು ಭಾರಿ ನೀರು ಬಿಡಬೇಕು. ನಾಟಿ ಹಂತದಲ್ಲಿ ಎರಡು ವಾರಗಳವರೆಗೆ ನೀರು ನೀಡಬಾರದು. ಗಿಡ ಕೊಳೆಯುವ ಸಾಧ್ಯತೆಗಳಿರುತ್ತದೆ.

ಚಳಿಗಾಲದಲ್ಲಿ ಹೆಚ್ಚಿನ ಕಟಾವು
ಮೊದಲ ವರ್ಷವೇ ಚೆನ್ನಾಗಿ ಇಳುವರಿ ಸಿಕ್ಕರೂ, ಮೂರನೇ ವರ್ಷದಿಂದ ಪ್ರತಿ ದಿನ ಸರಾಸರಿ 30 ಕೆ.ಜಿ. ಹೂವು ಕಟಾವಿಗೆ ದೊರೆಯುತ್ತಿದೆ. ಪ್ರತಿ ದಿನ ಸುಮಾರು ಹದಿನೈದು ಮಂದಿ ಕೂಲಿಯಾಳುಗಳು ಕಟಾವು ಕೆಲಸವನ್ನು ಮಾಡುತ್ತಾರೆ. ಕಳೆದ ವರ್ಷ ದಿನಕ್ಕೆ 60 ಕೆ.ಜಿ.ಯಷ್ಟೂ ಇಳುವರಿಯೂ ಬಂದಿದೆಯಂತೆ. ವರ್ಷದುದ್ದಕ್ಕೂ ಹೂವು ಸಿಗುತ್ತದೆ. ಎಲ್ಲಾ ಖರ್ಚು ಕಳೆದು ಐವತ್ತು ಸಾವಿರ ರುಪಾಯಿ ತಿಂಗಳಿಗೆ ಕೈಸೇರುತ್ತದೆ. ಚಳಿಗಾಲದಲ್ಲಿ ಇಳುವರಿ ಜಾಸ್ತಿ ಇರುತ್ತದೆ. ಸರ್ವ ಋತುನಲ್ಲೂ ಮಾರುಕಟ್ಟೆ ಇದೆ.

ತೆಂಗಿನ ಗಿಡಗಳನ್ನು ನೆಡುವಾಗಲೇ ಕಾಕಡ, ಅಡಕೆ ನೆಟ್ಟರೆ ಒಳ್ಳೆಯದು. ಕಲೆ ಕೀಳುವ, ಗೊಬ್ಬರ ನೀರಾವರಿ ವ್ಯವಸ್ಥೆ ಕಲ್ಪಿಸುವುದು ಸುಲಭ.
-ಸುರೇಶ್‌

Advertisement

– ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next