ಉಳ್ಳಾಲ: ಕಾಂಗ್ರೆಸ್ ಸರಕಾರ ಆಡಳಿತದ ಬಳಿಕ ಉಳ್ಳಾಲದಲ್ಲಿ ವಿಜಯೋತ್ಸವದ ಮರುದಿನವೇ ಗೋಕಳ್ಳತನ ಆರಂಭವಾಗಿದ್ದು, ಐದು ವರ್ಷಗಳಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ 22 ಎಫ್‌ಐಆರ್‌ಗಳು ಗೋ ಕಳ್ಳರ ವಿರುದ್ಧ ದಾಖಲಾಗಿವೆ. ಇಲ್ಲಿನ ಜನಪ್ರತಿನಿಧಿಗಳ, ಕಾಂಗ್ರೆಸ್‌ನ ದ್ವಂದ್ವ ನೀತಿಯಿಂದಲೇ ಗೋಕಳ್ಳರು ರಾಜಾರೋಷವಾಗಿ ತಮ್ಮ ಕೃತ್ಯ ಮಾಡುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅಭಿಪ್ರಾಯಪಟ್ಟರು.
ಅವರು ಕೈರಂಗಳ ಪುಣ್ಯಕೋಟಿ ನಗರದಲ್ಲಿ ನಡೆಯಯುತ್ತಿರುವ ಟಿ.ಜಿ.ರಾಜಾರಾಮ ಭಟ್ಟರ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪೂರಕವಾಗಿ ಅವರ ಆರೋಗ್ಯ ಸ್ಥಿರತೆಗಾಗಿ ಕುತ್ತಾರು ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೋಪ್ರೇಮಿ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಉಳ್ಳಾಲ ಉಚ್ಚಿಲದಲ್ಲಿ ಮಯ್ಯರ ಮನೆಯ ಗೋ ಕಳವು ಮಾಡಿ ಗೋವಿನ ತಲೆ ಕೈಕಾಲುಗಳನ್ನು ತುಳಸಿಕಟ್ಟೆಯಲ್ಲಿ ಇಡುವ ಮೂಲಕ ಪ್ರಾರಂಭಗೊಂಡ ಗೋಹತ್ಯೆ ಐದು ವರ್ಷಗಳಿಂದ ನಿರಂತರವಾಗಿ ಮುಂದುವರೆದಿದೆ. ಹಿಂದೂ ಸಮಾಜಕ್ಕೆ ಸವಾಲು ಎಸೆಯುವ ಕಾರ್ಯ ಆಗುತ್ತಿದೆ. ಇಲ್ಲಿನ ಗಾಂಜಾ ಮಾಫಿಯ, ಅಕ್ರಮ ಕಸಾಯಿ ಖಾನೆ ಕಾರ್ಯನಿರ್ವಹಿಸಲು ಕೆಲವರು ಅಕ್ರಮಕ್ಕೆ ನೀಡುತ್ತಿರುವ ಬಾಹ್ಯಬೆಂಬಲ ಕಾರಣ. ಇದರ ವಿರುದ್ಧ ಹಿಂದೂ ಸಮಾಜ ಸಂಘಟಿತರಾಗಿ ಹೋರಾಟ ನಡೆಸುವ ಅಗತ್ಯ ಇದೆ ಎಂದರು.
ಆರೋಪಿಗಳ ಪತ್ತೆಯಾಗಿಲ್ಲ
ಜಿ.ಪಂ. ಮಾಜಿ ಸದಸ್ಯ ಸತೀಶ್ ಕುಂಪಲ ಮಾತನಾಡಿ, ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಿರಂತರ ಗೋಹತ್ಯೆ, ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭ ತಲಪಾಡಿಯಲ್ಲಿ ಗೋವಿನ ಮೇಲೆ ದೌರ್ಜನ್ಯ ಎಸಗಲಾಗಿದ್ದು ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ ಎಂದರು.ಚಂದ್ರಹಾಸ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ ಇದ್ದರು.
ಮೋಹನ್‌ರಾಜ್ ಕೆ.ಆರ್., ಗೋಪಾಲ ಕುತ್ತಾರ್, ಕೃಷ್ಣ ಶೆಟ್ಟಿ ತಾಮಾರ್, ಚರಣ್ ರಾಜ್, ದಯಾನಂದ ತೊಕ್ಕೊಟ್ಟು, ಜೀವನ್ ತೊಕ್ಕೊಟ್ಟು, ಗೋಪಾಲ ಇನೋಳಿ ಕೋರ್ಯ, ರವಿ ಅಸೈಗೋಳಿ, ನಾಗೇಶ್ ಕುಂಪಲ, ಬಿ.ಎನ್. ನಾರಾಯಣ ಪಾಲ್ಗೊಂಡಿದ್ದರು. ಪ್ರಶಾಂತ ಕಾಪಿಕಾಡ್, ಗೋಪಿನಾಥ ಬಗಂಬಿಲ, ಸಂಜೀವ ಶೆಟ್ಟಿ ಆಂಬ್ಲಿಮೊಗರು, ವಿಶ್ವನಾಥ ಕೊಲ್ಯ, ದೇವದಾಸ್ ಕೊಲ್ಯ, ಪವಿತ್ರಾ ಕೆರೆಬೈಲ್, ಸುರೇಶ್ ಶೆಟ್ಟಿ ಅಂಬ್ಲಿಮೊಗರು, ಪದ್ಮನಾಭ ಮರ್ಕೆದು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಗಳ ಭಾವನೆಗೆ ಧಕ್ಕೆ
ದೇಶದಲ್ಲಿ 35 ಕೋಟಿ ಜನಸಂಖ್ಯೆಯಿದ್ದಾಗ ಗೋವುಗಳ ಸಂಖ್ಯೆ 100 ಕೋಟಿ ಇತ್ತು. ಆದರೆ ಪ್ರಸ್ತುತ ದಿನಗಳಲ್ಲಿ 125 ಕೋಟಿ ಜನಸಂಖ್ಯೆಯಿದ್ದರೂ ಗೋವುಗಳ ಸಂಖ್ಯೆ 30 ಕೋಟಿಗೆ ಕುಸಿದಿದೆ. ಹಿಂದೂಗಳ ಭಾವನೆಗೆ ಧಕ್ಕೆ ಮಾಡುವ ಏಕೈಕ ಉದ್ದೇಶದಿಂದ ಗೋಹತ್ಯೆ, ಕಳ್ಳತನ ನಡೆಸಲಾಗುತ್ತಿದೆ.
–
ಶರಣ್ ಪಂಪ್‌ವೆಲ್
ವಿಶ್ವಹಿಂದೂ ಪರಿಷತ್ ವಿಭಾಗ
ಕಾರ್ಯದರ್ಶಿ