Advertisement

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಆಂದೋಲನ: ಕೈಲಾಸ್‌ 

07:55 AM Jul 22, 2017 | Team Udayavani |

ಬೆಂಗಳೂರು: ದೇಶದಲ್ಲಿ ಇಂದಿಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೌರ್ಜನ್ಯ, ಮಕ್ಕಳ ನಾಪತ್ತೆ ಹಾಗೂ ಕಳ್ಳಸಾಗಣೆ ತಡೆಗೆ ಸದ್ಯದಲ್ಲೇ ವಿಶೇಷ ಅಭಿಯಾನ ಆರಂಭಿಸಲಾಗುವುದು ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಕೈಲಾಸ್‌ ಸತ್ಯಾರ್ಥಿ ಹೇಳಿದರು. ರಾಜ್ಯ ಸರಕಾರ ಹಮ್ಮಿಕೊಂಡಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿಯಾದ ಬಳಿಕ ಪ್ರತಿಕ್ರಿಯೆ ನೀಡಿದರು. ದೇಶದಲ್ಲಿ ಬಹಳಷ್ಟು ಹೆಣ್ಣು ಮಕ್ಕಳಿಗೆ ಮನೆಯಲ್ಲೇ ಸೂಕ್ತ ರಕ್ಷಣೆಯಿಲ್ಲದಿರುವುದು ನಿಜಕ್ಕೂ ಅವಮಾನಕರ. ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳದ ಬಹಳಷ್ಟು ಪ್ರಕರಣಗಳಲ್ಲಿ ಸಂಬಂಧಿಗಳು, ಪರಿಚಿತರೇ ಕೃತ್ಯ ಎಸಗಿರುತ್ತಾರೆ. ಆದರೆ ಕುಟುಂಬದ ಮರ್ಯಾದೆ, ಸಾಮಾಜಿಕ ಕಾರಣಗಳಿಂದಾಗಿ ಈ ಹೀನ ಕೃತ್ಯಗಳು ತೆರೆಮರೆಯಲ್ಲೇ ಸರಿದು ಹೋಗುತ್ತಿವೆ. ಪರಿಣಾಮವಾಗಿ ಹೆಣ್ಣು ಮಕ್ಕಳಿಗೆ ಮನೆ, ನೆರೆಹೊರೆ, ರಸ್ತೆ, ಶಾಲೆ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣವಿಲ್ಲದಿರುವುದು ದುರದೃಷ್ಟಕರವೆನಿಸಿದೆ ಎಂದರು.

Advertisement

ಇನ್ನೊಂದೆಡೆ ಕೆಲವು ಮತೀಯ ಶಕ್ತಿಗಳು ಮಕ್ಕಳನ್ನು ಹಿಂಸಾಚಟುವಟಿಕೆಗೆ ಬಳಸಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿ ತಲೆದೋರಿದ್ದು, ಇದನ್ನೂ ನಿಯಂತ್ರಿಸಬೇಕಾದ ಅಗತ್ಯವಿದೆ. ನಕ್ಸಲ್‌ ಪೀಡಿತ ಪ್ರದೇಶಗಳು, ಕಾಶ್ಮೀರದಲ್ಲಿ ಯುವಜನತೆಯನ್ನು ಯಾವ ರೀತಿಯಲ್ಲಿ ಹಿಂಸಾಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು.

ದಶಕಗಳ ಹಿಂದೆ ಸರಕಾರ ಹಾಗೂ ಯುನಿಸೆಫ್ ಸಿದ್ಧಪಡಿಸಿದ ವರದಿಯಲ್ಲಿ ಶೇ. 53ರಷ್ಟು ಮಕ್ಕಳು ಒಂದಲ್ಲ ಒಂದು ಬಗೆಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಉಲ್ಲೇಖೀಸಲಾಗಿತ್ತು. ನನ್ನ ಪ್ರಕಾರ ಈ ಪ್ರಮಾಣ ಸದ್ಯ ಇನ್ನಷ್ಟು ಹೆಚ್ಚಾಗಿರಬಹುದು. ಇಂತಹ ಕೃತ್ಯಗಳಿಗೆ ತ್ವರಿತವಾಗಿ ಕಡಿವಾಣ ಹಾಕಬೇಕು. ಮಕ್ಕಳ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಅವಕಾಶವಿಲ್ಲದಂತೆ ದೇಶದಲ್ಲಿ ಬೃಹತ್‌ ಪ್ರಮಾಣದಲ್ಲಿ ಆಂದೋಲನ ನಡೆಯಬೇಕಿದೆ. ಇದರ ನೇತೃತ್ವವನ್ನು ಯುವಜನತೆಯೇ ವಹಿಸಿಕೊಂಡು ಮಕ್ಕಳ ಮೇಲಿನ ದೌರ್ಜನ್ಯ ತಡೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಇದಕ್ಕೆಲ್ಲ ಕಡಿವಾಣ ಹಾಕಿ ಮಕ್ಕಳಿಗೆ ಸುರಕ್ಷಿತ, ಅಹಿಂಸಾತ್ಮಕ ವಾತಾವರಣ ನಿರ್ಮಿಸಬೇಕಿದೆ. ಈ ಕಾರ್ಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಹೊಣೆಗಾರಿಕೆಯಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ. ಇಂತಹ ಕೃತ್ಯಗಳ ಸಂಬಂಧ ಪ್ರಕರಣ ದಾಖಲಿಸುವುದು, ತ್ವರಿತ ವಿಚಾರಣೆ ನಡೆಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯು ವಂತಾಗಬೇಕು. ಜತೆಗೆ ಸಾಮಾಜಿಕ ಜಾಗೃತಿ ಹಾಗೂ ಪ್ರಜ್ಞಾವಂತಿಕೆಯನ್ನು ಮೂಡಿಸುವುದು ಮುಖ್ಯವೆನಿಸಿದೆ. ಪ್ರತಿಯೊಬ್ಬರನ್ನು ಜವಾಬ್ದಾರಿಯಿಂದ ಮೇಲ್ವಿಚಾರಣೆ ನಡೆಸುವ ಮೂಲಕ ಅಂತ್ಯ ಹಾಡಬೇಕಿದೆ ಎಂದು ಹೇಳಿದರು.

ಮಕ್ಕಳ ಮೇಲಿನ ದೌರ್ಜನ್ಯ, ನಾಪತ್ತೆ, ಕಳ್ಳ ಸಾಗಣೆ ತಡೆಗಾಗಿ ವಿಶೇಷ ಅಭಿಯಾನವನ್ನು ರೂಪಿಸಲಾಗುತ್ತಿದ್ದು, ಸದ್ಯದಲ್ಲೇ ಆರಂಭಿಸಲಾಗುವುದು. ಅದೇರೀತಿ ಕೆಲವು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಯಿತು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರ ಸ್ಪಂದನೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Advertisement

ಸಾಮಾಜಿಕ ನ್ಯಾಯ: ಜಾಗತಿಕ ವಿಚಾರ
ಕರ್ನಾಟಕ ಸರಕಾರ ಆಯೋಜಿಸಿರುವ ಡಾ|  ಬಿ.ಆರ್‌.ಅಂಬೇಡ್ಕರ್‌ ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದೇನೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಅಗತ್ಯವು ದೇಶದ ಸಮಸ್ಯೆ ಮಾತ್ರವಾಗಿರದೆ ಜಾಗತಿಕ ವಿಚಾರವಾಗಿದ್ದು, ಈ ಬಗ್ಗೆ ಗಂಭೀರ ಪ್ರಯತ್ನ ನಡೆಯಬೇಕಿದೆ. ಭಾರತ ಸಹಿತ ಜಗತ್ತಿನಾದ್ಯಂತ ನೂರಾರು ಕೋಟಿ ಮಕ್ಕಳಿಗೆ ಇಂದಿಗೂ ಸೂಕ್ತ ರಕ್ಷಣೆ ಅಗತ್ಯವಿದೆ. ಜತೆಗೆ ಶಿಕ್ಷಣ, ಪೋಷಣೆ, ಸುರಕ್ಷತೆ ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸಬೇಕಾದ ಅಗತ್ಯವಿದ್ದು, ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು.
– ಕೈಲಾಸ್‌ ಸತ್ಯಾರ್ಥಿ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಹೋರಾಟಗಾರರು

Advertisement

Udayavani is now on Telegram. Click here to join our channel and stay updated with the latest news.

Next