ಕೊಪ್ಪಳ: ಸತತ ಬರಗಾಲಕ್ಕೆ ಬೆಂದು ಹೋಗಿರುವ ಜಿಲ್ಲೆಯ ಅನ್ನದಾತ ತುತ್ತಿನ್ನ ಚೀಲ ತುಂಬಿಸಿಕೊಳ್ಳಲು ಗೂರದ ಊರಿಗೆ ಗುಳೆ ಹೋಗುತ್ತಿದ್ದಾನೆ. ಪ್ರಸಕ್ತ ವರ್ಷವೂ ವರುಣ ದೇವನನ್ನು ನಂಬಿ ಕೃಷಿ ಚಟುವಟಿಕೆಗೆ ಅಣಿಯಾಗುತ್ತಿದ್ದಾನೆ. ಆದರೆ ರೈತರ ಲೆಕ್ಕಾಚಾರದ ಪ್ರಕಾರ ಈಗಾಗಲೇ ಮೂರು ಮಳೆಗಳು ಕೈ ಕೊಟ್ಟಿವೆ.
ಆದರೆ ಲೆಕ್ಕಾಚಾರದಲ್ಲಿ ಈಗಾಗಲೇ ಎರಡು ಮಳೆಗಳು ರೈತನ ನಿರೀಕ್ಷೆಯನ್ನು ಹುಸಿ ಮಾಡಿವೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬರಿ ಗಾಳಿ ಮಿಶ್ರಿತ ಅಲ್ಪ ಪ್ರಮಾಣದ ಮಳೆ ಸುರಿದು ರೈತರಿಗೆ ಮತ್ತೆ ನಿರಾಶೆಯ ಭಾವನೆ ಮೂಡಿಸುತ್ತಿವೆ. ಆರಂಭದ ಅಶ್ವಿನಿ ಹಾಗೂ ಭರಣಿ ಮಳೆಗಳೂ ಸಂಪೂರ್ಣ ಕೈ ಕೊಟ್ಟಿವೆ. ಇದೇ ಮಳೆಗಳಿಗೆ ರೈತ ಸಮೂಹ ಕೃಷಿ ಭೂಮಿಯನ್ನು ಹಸನ ಮಾಡಿಕೊಳ್ಳುತ್ತಾನೆ. ಆದರೆ ಸಕಾಲಕ್ಕೆ ಮಳೆ ಸುರಿಯದ ಹಿನ್ನೆಲೆಯಲ್ಲಿ ಬಿಸಿಲಿಗೆ ಕಾದ ಹೊಲವನ್ನೇ ಹಸನುಗೊಳಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ವಾಡಿಕೆಯ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಒಂದೊಮ್ಮೆ ಅತೀವ ಮಳೆಯಾದರೆ, ಮತ್ತೂಮ್ಮೆ ಕಡಿಮೆ ಮಳೆಯಾಗಿ ಭರದ ಛಾಯೆ ಆವರಿಸಿ ರೈತರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುತ್ತದೆ. 18 ವರ್ಷದಲ್ಲಿ ಬರೊಬ್ಬರಿ 12 ವರ್ಷ ಬರದ ಬಿಸಿ ಅನುಭವಿಸಿರುವ ಜಿಲ್ಲೆಯ ರೈತ ಸಮೂಹ ಕೃಷಿ ಚಟುವಟಿಕೆಯಲ್ಲಿ ತೊಡಗಲು ಹಿಂದೇಟು ಹಾಕುವಂತಾಗಿದೆ.
ಪ್ರತಿ ಮುಂಗಾರು ಪೂರ್ವದಲ್ಲಿ ಮಳೆಯ ನಿರೀಕ್ಷೆಯಲ್ಲಿಯೇ ಬಿತ್ತನೆಗೆ ಅಣಿಯಾಗುವ ರೈತರು ಬಿತ್ತನೆ ಮಾಡಿದ ಬಳಿಕ ಒಂದೊಂದೇ ಮಳೆಗಳು ಕೈ ಕೊಡುತ್ತಿರುವುದಕ್ಕೆ ಚಿಂತಾಕ್ರಾಂತರಾಗಿದ್ದಾರೆ. ಪ್ರಸಕ್ತ ವರ್ಷವೂ ಮಳೆಯ ನಿರೀಕ್ಷೆಯಲ್ಲಿಯೇ ತಮ್ಮ ಕಾರ್ಯದಲ್ಲಿ ತಲ್ಲೀನರಾಗಿದ್ದು, ವರುಣ ದೇವ ರೈತನ ಬಾಳು ಹಸನ ಮಾಡಬೇಕಿದೆ. ಸಕಾಲಕ್ಕೆ ಮಳೆಯಾದರೆ ಕೃಷಿ ಬದುಕು ಸಮದ್ಧವಾಗಲಿದೆ. ಅನ್ನದಾತನ ಬಾಳು ಬೆಳಕಾಗಲಿದೆ. ಕೃಷಿ ಇಲಾಖೆಯು ಪ್ರಸಕ್ತ ವರ್ಷದ ಬಿತ್ತನೆಯ ಗುರಿ ನಿಗದಿಪಡಿಸುತ್ತಿದೆ. ಕಳೆದ 2 ವರ್ಷದಿಂದ ಬಿತ್ತನೆ ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಮಳೆಯಾದ ತಕ್ಷಣ ರೈತರಿಗೆ ವಿತರಣೆಗೆ ಇಲಾಖೆಗಳು ಅಣಿಯಾಗುತ್ತಿವೆ.
• ಮಂಜುನಾಥ ತಳವಾರ, ರೈತ ಮಳೆ ನಿರೀಕ್ಷೆಯಲ್ಲೇ ಬಿತ್ತನೆಗೆ ಸಜ್ಜಾಗುತ್ತಿರುವ ರೈತ
Advertisement
ಪೂರ್ವಜರ ಸಂಪ್ರದಾಯದಂತೆ ಯುಗಾದಿಯ ಹಬ್ಬದ ಬಳಿಕ ರೈತ ಸಮೂಹ ಕೃಷಿ ಚಟುವಟಿಕೆಗೆ ಅಣಿಯಾಗುತ್ತದೆ. ಮುಂಗಾರು ಪೂರ್ವದ ಮಳೆಗಳು ಬಿದ್ದ ಬಳಿಕ ಭೂಮಿ ಹಸನ ಮಾಡಿಕೊಳ್ಳುವ ರೈತರು ರೋಹಿಣಿ ಮಳೆಗೆ ಬಿತ್ತನೆ ಕಾರ್ಯ ಆರಂಭಿಸುತ್ತಾರೆ.
Related Articles
Advertisement
ನಾವು ಈಗಾಗಲೇ ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಲೆಕ್ಕಾಚಾರದ ಪ್ರಕಾರ ಅಶ್ವಿನಿ ಹಾಗೂ ಭರಣಿ ಮಳೆಗಳು ಆಗಬೇಕಿತ್ತು. ಆದರೆ ಅವು ಆಗಲಿಲ್ಲ. ಸದ್ಯ 3ನೇ ಮಳೆ ಕೃತಿಕಾ ಆರಂಭವಾಗಿದೆ. ಇದರ ನಿರೀಕ್ಷೆಯಲ್ಲಿದ್ದೇವೆ. ಮುಂದೆ ರೋಹಿಣಿ ಮಳೆಯಾದರೆ ಬಿತ್ತನೆ ಕಾರ್ಯ ಆರಂಭ ಮಾಡಲಿದ್ದೇವೆ.• ಮಂಜುನಾಥ ತಳವಾರ, ರೈತ ಮಳೆ ನಿರೀಕ್ಷೆಯಲ್ಲೇ ಬಿತ್ತನೆಗೆ ಸಜ್ಜಾಗುತ್ತಿರುವ ರೈತ
ಕುಷ್ಟಗಿ: ಮಳೆರಾಯನ ಆಗಮನಕ್ಕಾಗಿ ತಾಲೂಕಿನ ರೈತರು ಮುಗಿಲಿಗೆ ಮುಖ ಮಾಡಿ ನಿಂತಿದ್ದಾರೆ. ಆದರೂ ವರುಣ ಕೃಪೆ ತೋರುತ್ತಿಲ್ಲ. ಕಳೆದ ವರ್ಷದ ಈ ಸಂದರ್ಭದಲ್ಲಿ ಭರಣಿ ಮಳೆಯಾಗಿ ಕೃಷಿ ಚಟುವಟಿಕೆಗಳು ಶುರುವಾಗಿದ್ದವು. ಆದರೆ ಈ ವರ್ಷದಲ್ಲಿ ಭರಣಿ ಮಳೆ ಅವಧಿ ಮುಗಿದರೂ ಧರೆಗೆ ಹನಿ ಮಳೆ ಬಿದ್ದಿಲ್ಲ. ಇರು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಏಪ್ರಿಲ್ 10ರಂದು ಮಳೆಯಾಗಿದ್ದು, ಬಿಟ್ಟರೆ ಕುಷ್ಟಗಿ ತಾಲೂಕಿನಲ್ಲಿ ಮಳೆರಾಯ ದರ್ಶನ ನೀಡಿಲ್ಲ. ಮಳೆಯ ನಿರೀಕ್ಷೆಯಲ್ಲೂ ಬಿತ್ತನೆಗೆ ಪೂರಕ ಚಟುವಟಿಕೆಗಳು, ಕೃಷಿ ಇಲಾಖೆ ಸಿದ್ಧತಾ ಕ್ರಮಗಳು ಸದ್ದಿಲ್ಲದೇ ನಡೆದಿವೆ. ಮಳೆಯಾಗದೇ ದಿನ ಕಳೆದಾಗ ರೈತರಲ್ಲಿ ಆತಂಕ ಹೆಚ್ಚುತ್ತಲೇ ಇದೆ.
ಕಳೆದ ಏ. 28ರಿಂದ ಆರಂಭಗೊಂಡ ಭರಣಿ ಮಳೆ ಆಗಲೇ ಇಲ್ಲ. ಮೇ 11ರಿಂದ ಕೃತಿಕಾ ಮಳೆ ಆರಂಭವಾಗಿದ್ದು, ಈ ಮಳೆ ನಿರೀಕ್ಷೆ ಮುಂದುವರಿದಿದೆ. ದಿನವೂ ಬಿರು ಬಿಸಿಲು, ಸಂಜೆಯಾದರೆ ವಾತಾವರಣ ತಂಪಾಗುತ್ತಿದ್ದು, ಮಳೆಯಾಗುತ್ತದೆಯೋ ಇಲ್ಲವೋ ಎನ್ನುವ ಅನುಮಾನ ರೈತರಲ್ಲಿ ಮೂಡಿಸಿದೆ. ಈ ವರ್ಷದಲ್ಲಿ ಮುಂಗಾರು ಪೂರ್ವ (ಅಡ್ಡ ಮಳೆ) ಮಳೆಯೂ ಉತ್ತಮವಾಗಿಲ್ಲ. ಮುಂಗಾರು ಪೂರ್ವ ಮಳೆ ಆಗಿದ್ದರೆ ಕಳೆ ಕಸ ಕಡಿಮೆಯಾಗಿ, ಮುಂದೆ ಬಿತ್ತನೆಗೆ ಅನುಕೂಲವಾಗುತ್ತದೆ ಎಂಬುದು ರೈತರ ಅಭಿಪ್ರಾಯ.
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಳೆ ನಿರೀಕ್ಷೆಯಲ್ಲೇ ರೈತರು ಈಗಾಗಲೇ ಜಮೀನು ಹದ ಗೊಳಿಸಿದ್ದು, ಬಿತ್ತನೆಗೆ ಪರಿಕರ ಸಿದ್ದಪಡಿಸಿಕೊಂಡಿದ್ದಾರೆ. ಜೂನ್ ಮೊದಲ ವಾರ ಕಳೆಯುತ್ತಿದ್ದಂತೆ ಮುಂಗಾರು ಆರಂಭವಾಗುವ ವಾಡಿಕೆ ಇದ್ದು, ಇದಕ್ಕೆ ಪೂರಕವಾಗಿ ಮೋಡ ಕವಿಯುತ್ತಿದೆಯಾದರೂ ಮಳೆಯಾಗುತ್ತಿಲ್ಲ. ಮುಂಗಾರು ಆರಂಭವಾದರೆ ಉತ್ತಮವಾಗಿಯೇ ಮಳೆಯಾಗುತ್ತದೆ ಎನ್ನುವ ಆಶಾಭಾವ ಹೊಂದಿದ್ದಾರೆ ಅನ್ನದಾತರು.
ಈಗಾಗಲೇ ಕೃಷಿ ಇಲಾಖೆ ಪ್ರಸಕ್ತ 62,575 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ 34,875 ಹೆಕ್ಟೇರ್‌ನಲ್ಲಿ ಏಕದಳ, 17,150 ಹೆಕ್ಟೇರ್‌ನಲ್ಲಿ ದ್ವಿದಳ, 14,350 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಹಾಗೂ 1,200 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಯ ಬಿತ್ತನೆ ಗುರಿ ಹೊಂದಾಗಿದೆ. ಉತ್ತಮ ಮಳೆಯಾದರೆ ಬಿತ್ತನೆ ಬೀಜ ವಿತರಣೆ ಆರಂಭಿಸಲು ಕೃಷಿ ಇಲಾಖೆ ಸನ್ನದ್ಧವಾಗಿದೆ.
ಮುಂಗಾರು ಆರಂಭಕ್ಕೂ ಮುನ್ನ ರೈತರು, ಎರಿ (ಕಪ್ಪು) ಜಮೀನು ಆಗಿದ್ದರೆ ಚೌಕಮಡಿ, ಮಸಾರಿ ಜಮೀನಿಗೆ ಇಳುಕಳಿಗೆ ಅಡ್ಡಲಾಗಿ ಬೋದು ಮಡಿ ಮಾಡಿದರೆ ಬಿದ್ದ ಮಳೆ ನೀರು ಹರಿಯದೇ ಇಂಗುತ್ತದೆ. ಇದರಿಂದ ತೇವಾಂಶದ ಪ್ರಮಾಣ ಹೆಚ್ಚಲಿದೆ.
• ವೀರಣ್ಣ ಕಮತರ,ಸಹಾಯಕ ನಿರ್ದೇಶಕ ಕೃಷಿ ಇಲಾಖೆ
• ವೀರಣ್ಣ ಕಮತರ,ಸಹಾಯಕ ನಿರ್ದೇಶಕ ಕೃಷಿ ಇಲಾಖೆ