ಮಂಗಳೂರು/ಕೈಕಂಬ: ಗುರುಪುರ ಮಠದ ಬೈಲಿನಲ್ಲಿ ಬುಧವಾರ ಐವರ ಮೇಲೆ ಹೆಜ್ಜೇನು ದಾಳಿ ಮಾಡಿದೆ.
ಬೇಬಿ ಯಾನೆ ಸರೋಜಾ (50), ಗಣೇಶ್ ಕೊಟ್ಟಾರಿ (43), ಶೋಧನ್ (47) ಅವರು ಗಂಭೀರ ಗಾಯಗೊಂಡಿದ್ದು, ಇತರ ಇಬ್ಬರು ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಬೇಬಿ ಅವರು ಮನೆಯ ಅಂಗಳದಲ್ಲಿದ್ದ ವೇಳೆ ಹೆಜ್ಜೇನು ಗುಂಪು ದಾಳಿ ಮಾಡಿದ್ದು, ಅವರು ರಸ್ತೆಗೆ ಓಡಿ ಬಂದಾಗ ನೆರವಿಗೆ ಬಂದ ಗಣೇಶ್ ಅವರ ಮೇಲೂ ದಾಳಿ ಮಾಡಿದೆ. ಹೆಜ್ಜೇನಿನಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಓಡುತ್ತಿದ್ದಾಗ ಶೋಧನ್ ನೆರವಿಗೆ ಬಂದಿದ್ದು, ಅವರೂ ದಾಳಿಗೊಳಗಾಗಿದ್ದರು. ಶೋಧನ್ ಮನೆಯೊಂದರ ಬಳಿ ಹೋಗಿ ಮೈಗೆ ನೀರು ಹಾಕಿಕೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರಲ್ಲಿ ಬೇಬಿ ಮತ್ತು ಗಣೇಶ್ ಡಿಸ್ಚಾರ್ಜ್ ಆಗಿದ್ದಾರೆ.
1 ಕಿ.ಮೀ. ದೂರ ಓಡಿದರು!
ಹೆಜ್ಜೇನಿನ ದಾಳಿಯನ್ನು ತಪ್ಪಿಸಲು ಗಣೇಶ್ ಕೊಟ್ಟಾರಿ ಸುಮಾರು 1 ಕಿ.ಮೀ. ದೂರದ ಬಂಡಸಾಲೆಯವರೆಗೆ ಓಡಿ ಬರುವ ವೇಳೆಯಲ್ಲಿ ಗಣೇಶ್ ಕೊಟ್ಟಾರಿ ಯವರಿಗೆ ಹೆಜ್ಜೇನು ತಲೆ, ಮುಖಕ್ಕೆ ದಾಳಿ ನಡೆಸಿ ಗಾಯ ಮಾಡಿದೆ.
ಬಂಡಸಾಲೆಯಲ್ಲಿ ನಿಲ್ಲಿಸಿದ್ದ ವಾಹನದಲ್ಲಿರುವ ರೈನ್‌ಕೋಟ್‌ನಿಂದ ತಲೆ ಹಾಗೂ ಮುಖವನ್ನು ಮುಚ್ಚಿಕೊಂಡು ಸುಮಾರು 15 ನಿಮಿಷಗಳ ಕಾಲ ಕುಳಿತುಕೊಂಡ ಕಾರಣ ಹೆಜ್ಜೇನಿನ ದಾಳಿಯಿಂದ ತಪ್ಪಿಸಿಕೊಂಡಿದ್ದರು. ಹೆಜ್ಜೇನು ಗುಂಪು ನಿರ್ಗಮಿಸಿದ ಬಳಿಕ ಇವರು ಎದ್ದು ಬಂದಿದ್ದರು.