ಹೊಸದಿಲ್ಲಿ: ಕರ್ನಾಟಕದ ಕೈಗಾದಲ್ಲಿ ಸ್ಥಾಪಿಸಲಾಗಿರುವ ಅಣು ವಿದ್ಯುತ್ ಸ್ಥಾವರ 1ನೇ ಘಟಕ ಸತತ ವಾಗಿ 941 ದಿನಗಳ ಕಾರ್ಯವೆಸಗುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಣು ಶಕ್ತಿ ವಿಭಾಗದ ಹಿರಿಯ ಅಧಿಕಾರಿ ಕೃಷ್ಣ ಗುಪ್ತಾ, ಇದೊಂದು ಹೆಮ್ಮೆಯ ವಿಚಾರವಾಗಿದೆ ಎಂದಿದ್ದಾರೆ. ಇದೇ ವೇಳೆ ತಾರಾಪುರ ಪರಮಾಣು ವಿದ್ಯುತ್ ಸ್ಥಾವರದ 1 ಮತ್ತು 2ನೇ ಘಟಕಗಳು ಈ ವರ್ಷ 50 ವರ್ಷಗಳನ್ನು ಪೂರೈಸಲಿವೆ ಎಂದಿದ್ದಾರೆ.
ವರ್ಷಕ್ಕೊಂದು ರಿಯಾಕ್ಟರ್
ನಾಗರಿಕ ಬಳಕೆಗೆ ಪರ ಮಾಣು ಇಂಧನವನ್ನು ಹೆಚ್ಚು ಜನಪ್ರಿಯ ಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರ ವರ್ಷಕ್ಕೊಂದು ಪರಮಾಣು ರಿಯಾಕ್ಟರ್ ಶುರು ಮಾಡಲು ಚಿಂತನೆ ನಡೆಸಿದೆ. ಈ ಚಿಂತನೆಗೆ ಪೂರಕವಾಗಿ ಬರುವ ಎಪ್ರಿಲ್‌ನಲ್ಲಿ ಗುಜರಾತ್‌ನ ಕಕ್ರಾಪಾರ್ ನಲ್ಲಿ 700 ಮೆ.ವ್ಯಾ. ಸಾಮರ್ಥ್ಯದ ಸ್ಥಾವರದ ಮೂರನೇ ಘಟಕ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಅದರ 4ನೇ ಘಟಕ 2021ರ ಮಧ್ಯಭಾಗ, ರಾಜಸ್ಥಾನದಲ್ಲಿ ನಿರ್ಮಿಸಲಾಗುತ್ತಿರುವ ಆರ್‌ಎಪಿಪಿ-7 2022ರಲ್ಲಿ ಶುರುವಾಗುವ ಸಾಧ್ಯತೆ ಇದೆ ಎಂದು ಕೃಷ್ಣ ಗುಪ್ತಾ ತಿಳಿಸಿದ್ದಾರೆ. ಸದ್ಯ ಭಾರತದಲ್ಲಿ 22 ಪರಮಾಣು ರಿಯಾಕ್ಟರ್‌ಗಳಿವೆ. ಇದರ ಜತೆಗೆ ಇನ್ನಷ್ಟು ರಿಯಾಕ್ಟರ್‌ಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.