Advertisement

HDK ವಿರುದ್ಧ ತಿರುಗಿಬಿದ್ದ ಕೈ ನಾಯಕರು

12:46 AM Oct 11, 2023 | Team Udayavani |

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಜೈಲಿಗೆ ಹಾಕುವ ಷರತ್ತಿನ ಮೇಲೆಯೇ ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಂತಿದೆ ಎಂದು ಕಾಂಗ್ರೆಸ್‌ ನಾಯಕರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

Advertisement

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶೀಘ್ರ ತಿಹಾರ್‌ ಜೈಲಿಗೆ ಹೋಗಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಮಂಗಳವಾರ ಮುಗಿಬಿದ್ದ ಕಾಂಗ್ರೆಸ್‌ ನಾಯಕರು, ಬಹುಶಃ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಇದೇ ಮಾತುಕತೆ ಆಗಿರಬೇಕು. ಇಂತಹದ್ದೊಂದು ಕಂಡಿಷನ್‌ ಹಾಕಿಕೊಂಡು ಮೈತ್ರಿ ಮಾಡಿಕೊಂಡಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೈತ್ರಿಗೆ ಅದೇ ಕಂಡೀಷನ್‌!
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್‌ ಅಹಮ್ಮದ್‌, ಇಷ್ಟೊಂದು ನಿಖರವಾಗಿ ಹೇಳುತ್ತಿರುವುದನ್ನು ನೋಡಿದರೆ, ನನ್ನ ಪ್ರಕಾರ ಇವರು (ಕುಮಾರಸ್ವಾಮಿ) ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸುವ ಕಂಡಿಷನ್‌ ಹಾಕಿಕೊಂಡೇ ಮೈತ್ರಿ ಮಾಡಿಕೊಂಡಿರಬೇಕು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗಿನ ಮೀಟಿಂಗ್‌ನಲ್ಲಿ ಈ ಷರತ್ತು ವಿಧಿಸಿರಬೇಕು ಎಂದು ಆರೋಪಿಸಿದರು.

ಅದಕ್ಕೂ ಮುನ್ನ ಯಾವ ಕಾರಣಕ್ಕೆ ಜೈಲಿಗೆ ಹೋಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಲಕ್ಷ್ಮಣ ಸವದಿ, ಬಹುಶಃ ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ನಾಯಕರ ಬಳಿ ಇದನ್ನೇ ಮಾತಾಡಿಕೊಂಡು ಬಂದಿರಬೇಕು. ಹಾಗಾಗಿ, ಅಷ್ಟು ನಿಖರವಾಗಿ ಹೇಳುತ್ತಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ.
ಮಾಹಿತಿ ಇರಬಹುದು

ಸಂಸದ ಡಿ.ಕೆ. ಸುರೇಶ್‌ ಮಾತನಾಡಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರಿಗೇ (ಕುಮಾರಸ್ವಾಮಿಗೆ) ಮಾಹಿತಿ ಇರಬಹುದು ಎಂದಷ್ಟೇ ಹೇಳಿದರು.

Advertisement

ಕಾಂಗ್ರೆಸ್‌ ನಾಯಕರ ಜೈಲಿಗೆ ಕಳುಹಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿ
ಚಿತ್ರದುರ್ಗ: ಜೆಡಿಎಸ್‌-ಬಿಜೆಪಿ ಮೈತ್ರಿ ಮಾಡಿಕೊಂಡಿರುವುದೇ ನಮ್ಮ ನಾಯಕರನ್ನು ಜೈಲಿಗೆ ಕಳಿಸುವುದಕ್ಕಾಗಿ ಎನ್ನುವುದು ಅವರ ಮಾತುಗಳಲ್ಲೇ ಗೊತ್ತಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ಪ್ರಪಂಚದ ಯಾವುದೇ ಸರಕಾರ ಮಾಡದ ಕ್ರಾಂತಿಕಾರಕ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿರುವುದನ್ನು ನೋಡಿ ಬಿಜೆಪಿ, ಜೆಡಿಎಸ್‌ನವರಿಗೆ ಸಹಿಸಿಕೊಳ್ಳಲಾಗದೆ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ಜನರು ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ. ಮುಖ್ಯಮಂತ್ರಿಗಳು ಕಂದಾಯ ಇಲಾಖೆಯ ಕೆಲಸಗಳು ವೇಗವಾಗಿ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ಆಶಯದೊಂದಿಗೆ ನಾನು ಕೂಡ ಎಲ್ಲ ಕಡೆ ಪ್ರವಾಸ ಮಾಡಿ ವರ್ಷಗಳಿಂದ ಬಾಕಿ ಉಳಿದಿರುವ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕೆಲಸ ಮಾಡಿಸುತ್ತಿದ್ದೇನೆ. ಹೊಸದುರ್ಗ ತಾಲೂಕು ಕಚೇರಿಯ ರೆಕಾರ್ಡ್‌ ರೂಂಗೆ ಭೇಟಿ ನೀಡಿದ್ದೆ. 50, 100 ವರ್ಷಗಳ ದಾಖಲೆಗಳು ಪುಡಿ ಪುಡಿಯಾಗುವ ಸ್ಥಿತಿಯಲ್ಲಿವೆ. ದಾಖಲೆಗಳ ಸ್ಥಿತಿ ಶೋಚನೀಯವಾಗಿದೆ. ಎಲ್ಲವನ್ನೂ ಸ್ಕಾÂನ್‌ ಮಾಡಿಸಿ ಉಳಿಸುವ ಪ್ರಯತ್ನ ಮಾಡುತ್ತೇನೆ. ಈ ವರ್ಷ ಒಂದೂವರೆ ಸಾವಿರ ಗ್ರಾಮ ಲೆಕ್ಕಿಗರು, ಒಂದು ಸಾವಿರ ಭೂ ಮಾಪಕರನ್ನು ನೇಮಕ ಮಾಡಿಕೊಂಡು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲಿದ್ದೇವೆ. 357 ಸರಕಾರಿ ಭೂಮಾಪಕರನ್ನು ನೇಮಕ ಮಾಡಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next