Advertisement

ಸದ್ಯದಲ್ಲಿಯೇ ಕಾಗೋಡು ತಿಮ್ಮಪ್ಪ ಆತ್ಮಚರಿತ್ರೆ ಪ್ರಕಟ: ಡಾ. ರಾಜನಂದಿನಿ

03:02 PM Apr 02, 2022 | Suhan S |

ಸಾಗರ: ಏಳು ದಶಕಗಳ ಕಾಲ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ನೊಂದವರ ಧ್ವನಿಯಾಗಿ, ಭೂಹೀನರಿಗೆ ಭೂಮಿ ನೀಡುವ ಮೂಲಕ ಎಲ್ಲ ವರ್ಗದ ಆಶಾಕಿರಣವಾಗಿ ಗುರುತಿಸಿಕೊಂಡ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆಶಯಗಳನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕಾಗೋಡು ತಿಮ್ಮಪ್ಪ ಫೌಂಡೇಶನ್ ಸ್ಥಾಪಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಾಗೋಡು ಪುತ್ರಿ ಡಾ. ರಾಜನಂದಿನಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಫೌಂಡೇಶನ್ ‘ಸಮುದಾಯದ ಪ್ರಗತಿಗಾಗಿ ದಿಟ್ಟಹೆಜ್ಜೆ’ ಘೋಷವಾಕ್ಯದಡಿ ಪ್ರಾರಂಭಗೊಂಡಿದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಆಶಯದೊಂದಿಗೆ ಕಾಗೋಡು ಕೆಲಸ ಮಾಡಿದವರು. ಅವರ ಆಶಯ ಸಮಾಜದಲ್ಲಿ ಜೀವಂತವಾಗಿರಬೇಕು. ಯುವಜನರಿಗೆ ಕಾಗೋಡು ಅವರ ಹೋರಾಟದ ಬದುಕು ಪರಿಚಯವಾಗಬೇಕು. ಈ ನಿಟ್ಟಿನಲ್ಲಿ ಕಾಗೋಡು ಜೀವನ ಕುರಿತು ಪ್ರೊ. ಹೀ.ಚಿ. ಬೋರಲಿಂಗಯ್ಯ ಅವರು ಕೃತಿಯೊಂದನ್ನು ರಚಿಸುತ್ತಿದ್ದಾರೆ. ಚಿತ್ರನಿರ್ದೇಶಕ ಸಿರಿಗಂಧ ಶ್ರೀನಿವಾಸ್‌ಮೂರ್ತಿ ಅವರು ಕಾಗೋಡು ಬದುಕಿನ ಕುರಿತು ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದ್ದಾರೆ ಎಂದರು.

ಈಗಾಗಲೇ ಫೌಂಡೇಶನ್ ವತಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ, ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಗ್ರಾಮೀಣ ಜನರ ಆರೋಗ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಫೌಂಡೇಶನ್ ಸಮೂಹಕ್ಕೆ ಹತ್ತಿರವಾದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಸಾಹಿತಿ ಪ್ರೊ. ಹೀ.ಚಿ. ಬೋರಲಿಂಗಯ್ಯ ಮಾತನಾಡಿ, ಕಾಗೋಡು ಸಾಧನೆ ಕುರಿತು ೨೦ ವರ್ಷದ ಹಿಂದೆ ಅಭಿವೃದ್ಧಿಯ ಹರಿಕಾರ ಎನ್ನುವ ಕೃತಿಯನ್ನು ನಾನು ರಚನೆ ಮಾಡಿದ್ದೇನೆ. ಚಳುವಳಿಯ ಮೂಲಕ ಹೋರಾಟದ ಬದುಕಿಗೆ ತೆರೆದುಕೊಂಡವರು ಕಾಗೋಡು ತಿಮ್ಮಪ್ಪನವರು. ಅವರ 7 ದಶಕಗಳ ರಾಜಕೀಯ, ಸಾಮಾಜಿಕ ಜೀವನವನ್ನು ದಾಖಲೀಕರಣ ಮಾಡುವ ಜೊತೆಗೆ ಯುವಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕೃತಿ ರಚನೆ ಮಾಡಲಾಗುತ್ತಿದೆ ಎಂದರು.

ಸಿರಿಗಂಧ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಕಾಗೋಡು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಅವರ ಬದ್ಧತೆ, ಸಿದ್ಧಾಂತ ಪ್ರತಿಪಾದನೆ ಅನುಕರಣೀಯವಾದದ್ದು. ಅದನ್ನು ನಾಡಿನ ಜನರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಕಿರುಚಿತ್ರವು 5, 10, 15 ಮತ್ತು 60 ನಿಮಿಷ ಸೇರಿದಂತೆ ನಾಲ್ಕು ವಿಭಾಗದಲ್ಲಿ ಇರುತ್ತದೆ. ಈ ಸಾಕ್ಷ್ಯ ಚಿತ್ರವು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಧುಮಾಲತಿ, ಎನ್.ಲಲಿತಮ್ಮ, ವೆಂಕಟೇಶ್ ಮೆಳವರಿಗೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next