ದುಬಾೖ: ಟೆಸ್ಟ್ ಪಂದ್ಯದ ವೇಳೆ ಉದ್ದೇಶಪೂರ್ವಕವಾಗಿ ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ಅವರ ದೇಹಕ್ಕೆ ತಾಗಿಸಿದ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಅವರಿಗೆ ವಿಧಿಸಿದ್ದ ಎರಡು ಪಂದ್ಯಗಳ ನಿಷೇಧವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ನೀತಿ ಸಂಹಿತೆಯ ಮೇಲ್ಮನವಿ ಆಯುಕ್ತ ಮೈಕಲ್ ಹೆರೋನ್ ಹಿಂದೆಗೆದುಕೊಂಡಿದ್ದಾರೆ. ಇದರಿಂದಾಗಿ ರಬಾಡ ಗುರುವಾರದಿಂದ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ.
ಸೋಮವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಆರು ತಾಸುಗಳ ಸುದೀರ್ಘ ವಿಚಾರಣೆಯ ಬಳಿಕ ರಬಾಡ ಮೇಲೆ ವಿಧಿಸಲಾಗಿದ್ದ ಲೆವೆಲ್ 2 ಆರೋಪವನ್ನು ಲೆವೆಲ್ 1ಕ್ಕೆ ಇಳಿಸಲಾಯಿತು. ಇದಕ್ಕಾಗಿ ರಬಾಡ ಅವರಿಗೆ ಪಂದ್ಯ ಮೊತ್ತದ ಶೇಕಡಾ 25ರಷ್ಟು ದಂಡ ವಿಧಿಸಲಾಯಿತಲ್ಲದೇ ಒಂದು ಡಿಮೆರಿಟ್ ಅಂಕ ನೀಡಲಾಯಿತು. ಲೆವೆಲ್ 2 ಆರೋಪದಡಿ ಅವರಿಗೆ ಈ ಮೊದಲು ಮೂರು ಡಿಮೆರಿಟ್ ಅಂಕ ವಿಧಿಸಲಾಗಿತ್ತು.
ಒಂದು ಡಿಮೆರಿಟ್ ಅಂಕ ವಿಧಿಸಲಾದ ಕಾರಣ ರಬಾಡ ಅವರ ಒಟ್ಟು ಡಿಮೆರಿಟ್ ಅಂಕವು ಒಂದು ಪಂದ್ಯ ನಿಷೇಧಕ್ಕೆ ಇರಬೇಕಾದ ಅಂಕಗಳಿಗಿಂತ ಕಡಿಮೆಯಾಯಿತು. ಈ ಕಾರಣದಿಂದ ರಬಾಡ ಕೇಪ್‌ಟೌನ್‌ನಲ್ಲಿ ಆಡಲು ಸಾಧ್ಯವಾಗಿದೆ. ವಿಚಾರಣೆ ವೇಳೆ ದಕ್ಷಿಣ ಆಫ್ರಿಕಾದ ಉನ್ನತ ವಕೀಲ ಡಾಲಿ ಎಂಪೊಫು ಬಲವಾಗಿ ವಾದಿಸಿದ್ದರು. ನಾಯಕ ಪ್ಲೆಸಿಸ್ ವಿಚಾರಣೆ ವೇಳೆ ಹಾಜರಿದ್ದರು.
ಹೆರೋನ್ ಅವರ ತೀರ್ಪಿನ ಪ್ರತಿಯನ್ನು ಐಸಿಸಿ ಶೀಘ್ರ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಐಸಿಸಿಯ ನೀತಿ ಸಂಹಿತೆಯಲ್ಲಿ ದೈಹಿಕ ಸಂಪರ್ಕದ ಬಗ್ಗೆ ‘ಅಸಮರ್ಪಕ ಮತ್ತು ಉದ್ದೇಶಪೂರ್ವಕ’ ವ್ಯಾಖ್ಯಾನವು ಸ್ಮಿತ್ ಜತೆಗೆ ರಬಾಡ ಮಾಡಿರುವ ದೈಹಿಕ ಸಂಪರ್ಕಕ್ಕೆ ಹೊಂದಿಕೊಳ್ಳುತ್ತಿಲ್ಲ ಮತ್ತು ಆರೋಪದಿಂದ ತೃಪ್ತಿಯಾಗಿಲ್ಲ ಎಂದು ಹೆರೋನ್ ಹೇಳಿದರು. ನಿಷೇಧ ಹಿಂದೆಗೆದುಕೊಂಡ ನಿರ್ಧಾರವನ್ನು ಆಡಳಿತ ಮಂಡಳಿ ಒಪ್ಪಿಕೊಳ್ಳುತ್ತದೆ ಮತ್ತು ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಐಸಿಸಿ ಸಿಇಒ ಡೇವಿಡ್ ರಿಚಡ್ಸìನ್ ತಿಳಿಸಿದ್ದಾರೆ.