Advertisement
ಜನರ ಮಧ್ಯೆ ಜನಿಸಿದರೂ ಸದಾ ಕಾಡಿನ ವಾತಾವರಣವನ್ನೇ ಬಯಸುತ್ತಿದ್ದ, ಅಲ್ಲಿಂದಲೇ ಹೊಸ ಕ್ರಾಂತಿ ಮಾಡಬೇಕು ಎಂಬ ಮಹದುದ್ದೇಶ ಹೊಂದಿ ಎಲ್ಲರಿಗೂ ಮಾದರಿಯಾಗಿದ್ದ ಅವರು, ಆದಿವಾಸಿ ಜನರ ಧ್ವನಿಯಾದವರು. ಜನರನ್ನು ದುಶ್ಚಟಗಳಿಂದ ವಿಮುಕ್ತಗೊಳಿಸುತ್ತ ಅಹಿಂಸಾ ಪರಮೋದ್ಧಾರಕ ಎನಿಸಿಕೊಂಡವರು. ಆಧ್ಯಾತ್ಮ ಚಿಂತನೆ, ವ್ಯಸನಮುಕ್ತ ಸಮಾಜ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನಿರ್ಮಾಣದ ಚಿಂತನೆಯಲ್ಲೇ ಮುಳುಗಿ ಅದೇ ಸಂದೇಶ ಸಾರುತ್ತಿದ್ದ ಚಿನ್ಮಯಸಾಗರಜೀ ತಮ್ಮ ಪೂರ್ವಾಶ್ರಮದ ಹೆಸರಿಗಿಂತ ‘ಜಂಗಲ್‌ವಾಲೆ ಬಾಬಾ’ ಎಂದೇ ಗುರುತಿಸಿಕೊಂಡವರು. ಅದರಿಂದಲೇ ಜಗದ್ವಿಖ್ಯಾತಿ ಪಡೆದವರು. ಮುನಿ ಮಹಾರಾಜರು ಆಧ್ಯಾತ್ಮಿಕ ಚಿಂತನದೊಂದಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಮಹಾರಾಜರು.
Related Articles
ಮುನಿಶ್ರೀ ಚಿನ್ಮಯಸಾಗರರ ಪೂರ್ವಾಶ್ರಮದ ಹೆಸರು ಧರಣೇಂದ್ರಕುಮಾರ ಜೈನ್. ತಂದೆ ಅಣ್ಣಪ್ಪಾ ಮೋಳೆ ಜೈನ್. ತಾಯಿ ಹೀರಾದೇವಿ ಮೋಳೆ ಜೈನ್. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳ ಗ್ರಾಮದಲ್ಲಿ 1961ರ ಆಗಸ್ಟ್ 6ರಂದು ಜನನ. ಹೈಯರ್ ಸೆಕೆಂಡರಿ ಶಿಕ್ಷಣದ ಬಳಿಕ ಮಧ್ಯಪ್ರದೇಶದ ಮುರೈನಾದ ಶ್ರೀ ಗೋಪಾಳದಾಸ ಬರೈ ಜೈನ್ ಸಂಸ್ಕೃತಿ ಸಿದ್ಧಾಂತ ಮಹಾವಿದ್ಯಾಲಯದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು. 1982ರಲ್ಲಿ ಬ್ರಹ್ಮಚರ್ಯ ವ್ರತ ಸ್ವೀಕರಿಸಿದ್ದರು. 1987ರ ಏಪ್ರಿಲ್ 9ರಂದು ಮಧ್ಯಪ್ರದೇಶದ ಅತಿಶಯಕ್ಷೇತ್ರ ಥುಬಾನಜೀಯಲ್ಲಿ ಸಂಘ ಪ್ರವೇಶವಾಯಿತು. ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಇವರ ದೀಕ್ಷಾ ಗುರು.
Advertisement
ಅರಣ್ಯ ತಪಸ್ಸಿನ ಅನುಭವ ಯಾವ ಭಯವಿಲ್ಲದೇ ಕ್ರೂರ ಪ್ರಾಣಿಗಳ ಮಧ್ಯದಲ್ಲಿಯೇ ತಪಸ್ಸು ಮಾಡಿದ ಸಂತ. ಕಾಂಕ್ರಿಟ್ ಕಾಡಿನಲ್ಲಿರುವ ಈ ಮಾನವ ಪ್ರಾಣಿಗಳಿಂದ ಭಯವಿದೆ ಎಂದು ಅವರು ಹೇಳುತ್ತಿದ್ದರು. ಪ್ರಾಣಿಗಳು ಕ್ರೂರಿಯಾದರೂ ಒಮ್ಮೆ ವಿಶ್ವಾಸ ಬಂದ ನಂತರ ಎಂದೂ ಯಾರಿಗೂ ತೊಂದರೆ ಮಾಡುವುದಿಲ್ಲ. ಆದರೆ ಮನುಷ್ಯ ಮಾತ್ರ ವಿಶ್ವಾಸ ಘಾತಿ ಎನ್ನುತ್ತಿದ್ದರು. ಮನುಷ್ಯ ತುಂಬಾ ಸ್ವಾರ್ಥಿ, ತನ್ನ ರಕ್ಷಣೆಯನ್ನು ಮಾತ್ರ ಬಯಸುತ್ತಾನೆ. ಎಲ್ಲಿಯವರೆಗೆ ಯುವಕರು ದುರ್ವ್ಯಸನಗಳನ್ನು ಸಂಪೂರ್ಣವಾಗಿ ತ್ಯಜಿಸುವುದಿಲ್ಲವೋ ಅಲ್ಲಿಯವರೆಗೆ ಅದರ ನಿರ್ಮೂಲನೆ ಅಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸಬೇಕು. ಇಂದಿನ ಯುವ ಪೀಳಿಗೆ ಮೇಲೆ ದೇಶ ರಕ್ಷಣೆಯ ದೊಡ್ಡ ಜವಾಬ್ದಾರಿ ಇದೆ. ಅದನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಸಮಾಜದ ಜವಾಬ್ದಾರಿಯೂ ಇದೆ ಎನ್ನುತ್ತಿದ್ದರು ಮುನಿಶ್ರೀಗಳು.