Advertisement
ತಾಲೂಕಿನ ಬೀರೂರು ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಹುಡುಕುವ ಉದ್ದೇಶದಿಂದ ಕಂದಾಯ ಇಲಾಖೆ, ಹುಲ್ಲೇಹಳ್ಳಿ ಗ್ರಾಪಂ ವ್ಯಾಪ್ತಿಯ ಹಂದಿಜೋಗಿಹಟ್ಟಿಯ ಸರ್ವೆ ನಂ.4ರಲ್ಲಿ 8 ಎಕರೆ ಭೂಮಿಯನ್ನು ಗುರುತಿಸಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಸರ್ವೆ ಕಾರ್ಯ ನಡೆಸದಂತೆ ತಡೆಯುವ ಯತ್ನ ಮಂಗಳವಾರ ನಡೆಯಿತು.
Related Articles
Advertisement
ಈ ವೇಳೆ ಕೆಲ ಮಹಿಳೆಯರು ಮತ್ತು ಯುವಕರು ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ನಮ್ಮ ವಿರೋಧವಿದೆ. ನಾವು ಸರ್ವೆ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದರು.
ಗ್ರಾಮಸ್ಥರಿಗೆ ಸಮಸ್ಯೆ ಬಗ್ಗೆ ಮನವಿ ಮಾಡಿದ ತರೀಕೆರೆ ಉಪವಿಭಾಗಾಕಾರಿ ರೂಪಾ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಾಗೂ ಸ್ವಚ್ಛ ಭಾರತ್ ಅಭಿಯಾನದಡಿ ಘನತ್ಯಾಜ್ಯ ವಿಲೇವಾರಿ ಸಂಸ್ಕರಣೆಗಾಗಿ ಘಟಕ ಸ್ಥಾಪಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಸದ್ಯ ಸರ್ವೆ ಮಾಡಲಷ್ಟೇ ಬಂದಿದ್ದು, ಗ್ರಾಮದ ಜನರಿಗೆ ಘಟಕದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಲ್ಲಿ ಪಟ್ಟಣದ ಹಸಿ ಕಸದ ಸಂಸ್ಕರಣ ಘಟಕ ಸ್ಥಾಪಿಸಿ, ಗೊಬ್ಬರ ಉತ್ಪಾದಿಸುವ ಕೆಲಸ ನಡೆಯಲಿದೆ. ಈ ಘಟಕದ ಸುತ್ತ ಕಾಂಪೌಂಡ್ ನಿರ್ಮಾಣವಾಗಲಿದೆ. ಆಗ ಜನರ ಆರೋಗ್ಯದ ಮೇಲೆ ಯಾವ ಕೆಟ್ಟ ಪರಿಣಾಮವೂ ಬೀರಲ್ಲ ಎಂದರು.
ಇಲ್ಲಿ ಯಾವುದೇ ಘನತ್ಯಾಜ್ಯ ವಿಲೆವಾರಿ ಘಟಕವಿಲ್ಲ. ಗ್ರಾಮದ ಆರೋಗ್ಯ ಸಂರಕ್ಷಣೆ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ನಿಮ್ಮ ಗ್ರಾಮದ ಕೆಲ ಮುಖಂಡರನ್ನು ಪರಿಸರ ಅಭಿಯಂತರರೊಂದಿಗೆ ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಸ್ಥಾಪನೆಯಾಗಿರುವ ಕಸ ವಿಲೇವಾರಿ ಘಟಕಕ್ಕೆ ಕರೆದೊಯ್ದು ವೈಜ್ಞಾನಿಕ ರೀತಿಯ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರಿಗೆ ತಮ್ಮ ಸಮಸ್ಯೆಗಳ ಕುರಿತ ಆಕ್ಷೇಪಕ್ಕೆ ಉತ್ತರಿಸಲು 10ದಿನಗಳ ಕಾಲಾವಕಾಶ ನೀಡಲಾಗಿದೆ. ಘಟಕ ನಿರ್ಮಾಣಕ್ಕೆ ಸೂಕ್ತ ಬೇರೆ ಸ್ಥಳ ಗುರುತಿಸಿಕೊಟ್ಟರೆ ಅದನ್ನು ಪರಿಶೀಲಿಸಲಾಗುವುದು. ಗ್ರಾಮದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ದೊರಕಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು.
ಸರಕಾರದ ಕೆಲಸಕ್ಕೆ ಸರಕಾರವೇ ಜಾಗ ಗುರುತಿಸಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ನಿಮಗಿದೆ. ಹಾಗಾಗಿ, ಸರಕಾರಿ ಕೆಲಸಕ್ಕೆ ಅಡ್ಡಿಪಡಿಸದಂತೆ ಗ್ರಾಮಸ್ಥರಿಗೆ ತಿಳಿಸಿದರು.
ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ನಡೆದ ಮಾತುಕತೆ ಮತ್ತು ಮನವೊಲಿಕೆಯ ನಂತರ ಅಧಿಕಾರಿಗಳು ಸರ್ವೆ ಕಾರ್ಯ ಪೂರ್ಣಗೊಳಿಸಿ ತೆರಳಿದರು.
ಈ ವೇಳೆ ಬೀರೂರು ಹೋಬಳಿ ಕಂದಾಯ ಅಧಿಕಾರಿ ಪ್ರಸನ್ನ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್, ವೃತ್ತ ನಿರೀಕ್ಷಕ ಸತ್ಯನಾರಾಯಣ್, ಪಿಎಸ್‌ಐಗಳಾದ ರಾಜಶೇಖರ್, ರಫೀಕ್, ರಾಜಕುಮಾರ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಪರಿಸರ ಅಭಿಯಂತರ ನೂರುದ್ದಿನ್, ಅಭಿಯಂತರ ಪ್ರಸನ್ನಕುಮಾರ್, ಹುಲ್ಲೇಹಳ್ಳಿ ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ಸೋಮಶೇಖರ್ ಮತ್ತು ನೂರಾರು ಗ್ರಾಮಸ್ಥರು ಹಾಜರಿದ್ದರು.