Advertisement

ಶುದ್ಧ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

11:43 AM Jun 27, 2019 | Naveen |

ಕಡೂರು: ಸ್ವಚ್ಛಗೊಳಿಸದ ಕುಡಿಯುವ ನೀರಿನ ಟ್ಯಾಂಕ್‌ನಿಂದ ಬಿಟ್ಟ ಕಲುಷಿತ ನೀರು ಕುಡಿದು ಗ್ರಾಮದ ಜನರಿಗೆ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪಿಸಿ, ಎಮ್ಮೆದೊಡ್ಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬುಧವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಎಮ್ಮೆದೊಡ್ಡಿ ಮುಸ್ಲಾಪುರದಹಟ್ಟಿ ಗ್ರಾಮದ ವೆಂಕಟೇಶರೆಡ್ಡಿ, ಕುಮಾರ ನಾಯ್ಕ ಮತ್ತು ಮೂರ್ತಿ ಅವರ ನೇತೃತ್ವದಲ್ಲಿ ನೂರಾರು ಮಹಿಳೆಯರು ಮತ್ತು ಯುವಕರು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಪಿಡಿಒ ಮತ್ತು ಸಿಬ್ಬಂದಿ ವರ್ಗದವರನ್ನು ಹೊರಗೆ ಕಳುಹಿಸಿ, ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಇಒ ಸ್ಥಳಕ್ಕೆ ಬರಬೇಕು. ನಮ್ಮ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

ಘಟನೆಯ ವಿವರ: ಕಳೆದ 3 ವರ್ಷಗಳಿಂದ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸದ ಕಾರಣ ಹಕ್ಕಿಗಳು ಹಾಗೂ ಪಕ್ಷಿಗಳು ಒಳಗೆ ಬಿದ್ದು ಕೊಳೆತು, ಪಾಚಿ ಕಟ್ಟಿ ನಾರುತ್ತಿದೆ. ಆದರೂ, ಇಲ್ಲಿಂದಲೇ ನೀರು ಸರಬರಾಜು ಮಾಡುತ್ತಿರುವುದರಿಂದ ಗ್ರಾಮದ ಬಹುತೇಕ ಜನರು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಕುಡಿಯುವ ನೀರಿನಿಂದ ಜ್ವರ ಬಂದಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದರಿಂದ ಗ್ರಾಮಸ್ಥರು ಬುಧವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದರು. ಪಿಡಿಒಗೆ ಅನೇಕ ಬಾರಿ ಟ್ಯಾಂಕ್‌ನಲ್ಲಿ ಪಾಚಿ ಕಟ್ಟಿರುವುದರಿಂದ ತೊಳೆಸಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನೀರುಗಂಟಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಇಂತಹ ಅಧಿಕಾರಿಗಳು ನಮ್ಮ ಗ್ರಾಮ ಪಂಚಾಯಿತಿಗೆ ಬೇಡ. ಕೂಡಲೇ ತಾಲೂಕು ಪಂಚಾಯಿತಿ ಇಒ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಗ್ರಾಮದಲ್ಲಿದ್ದ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಈಗಾಗಲೇ 8ತಿಂಗಳ ಹಿಂದೆ ಕೆಟ್ಟು ಹೋಗಿದೆ. ಅದನ್ನು ದುರಸ್ತಿ ಮಾಡಿಸದ ಕಾರಣ ಶುದ್ಧ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ದೂರಿದರು.

ಚರಂಡಿಗಳಲ್ಲಿ ಕಸ, ಕಡ್ಡಿ ತುಂಬಿಕೊಂಡು ನೀರು ಹರಿಯದೇ ದುರ್ವಾಸನೆ ಬೀರುತ್ತಿದೆ. ಆದರೂ, ಗ್ರಾಮ ಪಂಚಾಯಿತಿ ಆಡಳಿತ ಇತ್ತ ಗಮನ ಹರಿಸಿಲ್ಲ. ಅಧಿಕಾರಿಗಳು ಗ್ರಾಮಸ್ಥರ ಮಾತಿಗೆ ಕಿಂಚಿಂತೂ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದರು.

Advertisement

ಗ್ರಾಪಂ ಪಿಡಿಒ ಪ್ರತಿಕ್ರಿಯೆ: ಟ್ಯಾಂಕ್‌ ತೊಳೆಯಲು ಕಳೆದ 15ದಿನಗಳಿಂದ ವಾಟರ್‌ ಮನ್‌ ಜಿ.ಕುಮಾರ ಅವರಿಗೆ ತಿಳಿಸಿ, ನೋಟಿಸ್‌ ನೀಡಿದರೂ ಸ್ವಚ್ಛಗೊಳಿಸಲು ಮುಂದಾಗುತ್ತಿಲ್ಲ. ಕಾರಣ ಕೇಳಿದರೆ ಸುಮ್ಮನಿರುತ್ತಾರೆ. ನಾನು ಈ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಶುದ್ಧ ಗಂಗಾ ಘಟಕದ ಗ್ಲಾಸ್‌, ಕಿಟಕಿಗಳನ್ನು ಗ್ರಾಮಸ್ಥರು ಕಲ್ಲಿನಿಂದ ಒಡೆದು ಹಾಳು ಮಾಡಿದ್ದಾರೆ. ದುರಸ್ತಿಗೆ ಈಗ ಮುಂದಾಗಿದ್ದೇವೆ ಎಂದು ಗ್ರಾಪಂ ಪಿಡಿಒ ಹನುಮಯ್ಯ ಹೇಳಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಲಿಂಗಾನಾಯ್ಕ, ಗ್ರಾಪಂ ಸದಸ್ಯ ಆನಂದ, ವಿಜಿನಾಯ್ಕ, ಮುರುಗೇಶ್‌, ಗಿರಿಜಮ್ಮ, ಜಯಮ್ಮ, ಮಂಜುನಾಥ್‌, ಗ್ರಾಪಂ ಮಾಜಿ ಉಪಾಧ್ಯಕ್ಷ ಕುಮಾರನಾಯ್ಕ, ಪೆರುಮಾಳ್‌, ಪಾರ್ವತಿ ಬಾಯಿ, ಕಿರಣ್‌ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಎಮ್ಮೆದೊಡ್ಡಿ ಗ್ರಾಮಸ್ಥರು ಬುಧವಾರ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಸಂಪೂರ್ಣ ಸಮಸ್ಯೆ ಬಗೆಹರಿಸುತ್ತೇವೆ.
ಡಾ.ದೇವರಾಜ ನಾಯ್ಕ, ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next