ಕಡೂರು: ತಾಲೂಕಿನ ಸಿಂಗಟಗೆರೆಯ ಇತಿಹಾಸ ಪ್ರಸಿದ್ಧ ಶ್ರೀಕಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ 3.25ರ ಸುಮಾರಿನಲ್ಲಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ನಾದಸ್ವರ, ವೀರಗಾಸೆ ಮುಂತಾದ ವಾದ್ಯಗಳೊಂದಿಗೆ ರಾಜ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರೀಸ್ವಾಮಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಲೋಕಕಲ್ಯಾಣಕ್ಕಾಗಿ ಹೋಮ, ಹವನಗಳು ಮುಗಿದ ನಂತರ ದೃಷ್ಟಿಪೂಜೆ ಮಾಡಿ ಸಾವಿರಾರು ಭಕ್ತರು ನಮಸ್ಕರಿಸಿ ರಥವನ್ನು ಎಳೆದರು.
ರಾಜಬೀದಿಗಳಲ್ಲಿ ರಥೋತ್ಸವ ಸಾಗುವ ಸಂದರ್ಭದಲ್ಲಿ ಭಕ್ತರು ರಥದ ಮೇಲೆ ಬಾಳೆಹಣ್ಣು ಎಸೆಯುತ್ತಿದ್ದರು. ಹರಕೆ ಹೊತ್ತ ಭಕ್ತರು ರಥದ ಸುತ್ತ ದಿಂಡು ಉರುಳುತ್ತಿದ್ದರು. ಉರುಳು ಸೇವೆ ಮಾಡುವವರು ಸ್ವಾಮಿಗೆ ತಮ್ಮ ಇಷ್ಟಾರ್ಥ ನೆರವೇರಲು ಹರಕೆ ಹೊತ್ತು ಸ್ವಾಮಿಗೆ ಮಂಗಳಾರತಿ ಮಾಡಿಸಿ ನಂತರ ಕಾಣಿಕೆ ಹಾಕಿ ನೆಲದಲ್ಲಿ ಉರುಳು ಸೇವೆ ಮಾಡಿ ಕೃತಾರ್ಥರಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇನ್ನು ಕೆಲವು ಭಕ್ತರು ರಥದ ಮುಂದೆ ಹಾಡು, ಕವಿತೆ, ಭಜನೆ ಮುಂತಾದವುಗಳನ್ನು ನಡೆಸುತ್ತಿದ್ದರೆ, ರಥದ ಸುತ್ತ ಪಾನಕದ ಗಾಡಿಗಳನ್ನು ಭಕ್ತರು ಓಡಿಸುತ್ತಿದ್ದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ. ನಾಗರಾಜಪ್ಪ ಮತ್ತು ಏಳು ಹಳ್ಳಿ ಪಿರ್ಕಾ ಗೌಡರು ಮತ್ತು ಗ್ರಾಮಸ್ಥರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.