Advertisement

ಬಂಜಾರ ಸಮುದಾಯದ ಆಕ್ರೋಶ

06:43 PM Nov 30, 2019 | Naveen |

ಕಡೂರು: ಕಲಬುರಗಿ ಜಿಲ್ಲೆಯ ಮಾದಿಹಾಳ್‌ ತಾಂಡಾದ ಸಂತ ಸೇವಾಲಾಲ್‌ ದೇವಾಲಯವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಧ್ವಂಸಗೊಳಿಸಿದೆ ಎಂದು ಆರೋಪಿಸಿ ಕಡೂರು ಬಂಜಾರ ಸಂಘ ಮತ್ತು ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

Advertisement

ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್‌ ನಾಯ್ಕ ಮತ್ತು ತಾಲೂಕು ಅಧ್ಯಕ್ಷ ದೇವರಾಜ ನಾಯ್ಕ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ ಬಂಜಾರ ಸಮಾಜದ ನೂರಾರು ಜನರು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಕಚೇರಿಗೆ ತಲುಪಿದರು. ಮೆರವಣಿಗೆಯಲ್ಲಿ ವಿಮಾನ ನಿಲ್ದಾಣ ಪ್ರಾ ಧಿಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ್‌ ನಾಯ್ಕ, ಸಂತ ಸೇವಾಲಾಲ್‌ ಬಂಜಾರ ಸಮುದಾಯದ ಆರಾಧ್ಯ ದೈವ. ಜಾಗೃತಿ ಮೂಡಿಸಿದ ಹರಿಕಾರ. ಬ್ರಿಟಿಷರ ವಿರುದ್ಧ ಹೋರಾಡಿ ಬಂಜಾರ ಸಮುದಾಯವನ್ನು ಸಂಘಟಿಸಿದ ಚತುರ. ಇಂತಹ ಮಹಾನ್‌ ಜ್ಞಾನಿಯ ದೇವಾಲಯವನ್ನು ವಿಮಾನ ನಿಲ್ದಾಣ ಪ್ರಾಧಿ ಕಾರ ವಿಮಾನ ನಿಲ್ದಾಣ ನಿರ್ಮಿಸುವಾಗ ಧ್ವಂಸ ಮಾಡಿರುವುದು ಅಕ್ಷಮ್ಯ ಎಂದು ದೂರಿದರು.

ಸಂಘದ ತಾಲೂಕು ಅಧ್ಯಕ್ಷ ದೇವರಾಜ ನಾಯ್ಕ ಮಾತನಾಡಿ, ಘಟನೆ ಕುರಿತಂತೆ ಈಗಾಗಲೇ ರಾಜ್ಯಾದ್ಯಂತ ಬಂಜಾರ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಸರಕಾರ ಈ ಕೂಡಲೇ ದೇವಾಲಯದ ಮರುನಿರ್ಮಾಣ ಮಾಡಬೇಕು ಮತ್ತು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್‌ ಹೆಸರನ್ನು ಇಡಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಉದ್ಯೋಗ ನೀಡಿ: ಸಮಾಜದ ಹಿರಿಯ ಮುಖಂಡ ಬಿ.ಟಿ.ಗಂಗಾಧರ ನಾಯ್ಕ ಮಾತನಾಡಿ, ಕಲಬುರ್ಗಿ ವಿಮಾನ ನಿಲ್ದಾಣ ನಿರ್ಮಿಸಲು ಬಂಜಾರರ ಜೀವನೋಪಾಯದ 756 ಎಕರೆ ಭೂಮಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಇದರಿಂದ ಭೂಮಿ ಕಳೆದುಕೊಂಡ ಲಂಬಾಣಿಗರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.

Advertisement

ತಾಪಂ ಸದಸ್ಯ ಆನಂದ ನಾಯ್ಕ ಮಾತನಾಡಿ, ಸೇವಾಲಾಲ್‌ ದೇವಾಲಯದ ಧ್ವಂಸಕ್ಕೆ ಪ್ರೇರಣೆ ನೀಡಿದವರು ಮತ್ತು ಭಾಗಿಯಾದವರನ್ನು ವಿರುದ್ಧ ಪೊಲೀಸರು ತಕ್ಷಣ ಬಂಧಿ ಸಬೇಕೆಂದರು. ಸಂಘದ ತಾಲೂಕು ಕಾರ್ಯದರ್ಶಿ ಚಿಕ್ಕಂಗಳ ಎಂ. ಪ್ರಕಾಶ್‌ ನಾಯ್ಕ ಮಾತನಾಡಿ, ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನದಲ್ಲಿ ಪ್ರತಿಭಟನೆ ಉಗ್ರರೂಪ ತಾಳಲಿದೆ. ಬಂದ್‌ ಕರೆ ಕೊಡುವುದಕ್ಕೂ ಸಮಾಜ ಹಿಂದೆ ಬೀಳುವುದಿಲ್ಲ, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು. ಜಿಪಂ ಸದಸ್ಯೆ ಲೋಲಾಕ್ಷಿಬಾಯಿ, ತಾಪಂ ಸದಸ್ಯೆ ಪ್ರೇಮ ಕೃಷ್ಣ ಮೂರ್ತಿ, ತಂಗಲಿ ಶ್ರೀನಿವಾಸ ನಾಯ್ಕ, ಸೋಮನ ಹಳ್ಳಿ ಕುಮಾರನಾಯ್ಕ, ವಕೀಲ ರಾಮಚಂದ್ರ ನಾಯ್ಕ, ಫ್ಲೆಕ್ಸ್‌ ಕುಮಾರ ನಾಯ್ಕ, ಕೋಡಿಹಳ್ಳಿ ಶ್ರೀನಿವಾಸ ನಾಯ್ಕ, ಎಮ್ಮೆದೊಡ್ಡಿ ರಮೇಶ್‌, ಕೃಷ್ಣನಾಯ್ಕ, ಮಂಜುನಾಥ್‌ ನಾಯ್ಕ, ಮಿಥುನ್‌ ನಾಯ್ಕ ಮುಂತಾದವರು ಹಾಜರಿದ್ದರು. ತಹಶೀಲ್ದಾರ್‌ ಉಮೇಶ್‌ ಅವರು ಮನವಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next