ಕಡೂರು: ತಾಲೂಕಿನ ಕುಪ್ಪಾಳು ಗ್ರಾಮದ ನಿವಾಸಿಗರು ರೈತರ ಪಹಣಿ ಬದಲಾವಣೆಗೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ಬಿ.ಆರ್.ರೂಪಾ ಮತ್ತು ತಹಶೀಲ್ದಾರ್ ಉಮೇಶ್ ಅವರಿಗೆ ಅನ್ನದಾತರು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆ.ಪಿ.ತೀರ್ಥೆಶ್‌ಕುಮಾರ್, ತಾಲೂಕಿನ ಕುಪ್ಪಾಳು ಗ್ರಾಮದ ಸರ್ವೆ ನಂ. 2ರಲ್ಲಿರುವ 8.29 ಗುಂಟೆ ಜಮೀನಿನಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ, ವರ್ಗದ ನಿವಾಸಿಗರು ಈ ಹಿಂದೆ ಕಂದಾಯ ಇಲಾಖೆ ಭೂಮಿಯಲ್ಲಿದ್ದರು. 1981ರಲ್ಲಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಲಾಯಿತು. ನಂತರ 1991ರಲ್ಲಿ ಪುನಃ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿ ಅಂದಿನ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಅಲ್ಲಿಂದ ಇಲ್ಲಿಯ ವರೆಗೂ ತಹಶೀಲ್ದಾರ್‌ರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪಹಣಿಯಲ್ಲಿ ಕಂದಾಯ ಎಂದು ಬದಲಾವಣೆ ಮಾಡುತ್ತಿಲ್ಲ ಎಂದು ದೂರಿದರು.
ರಾಷ್ಟ್ರೀ¿å ಹೆದ್ದಾರಿ 206 ರಸ್ತೆ ಅಗಲೀಕರಣಕ್ಕೆ ಸರ್ವೆ ನಂ. 2ರಲ್ಲಿ ಸುಮಾರು 200 ಕುಟುಂಬಗಳಿವೆ. ಇವುಗಳಲ್ಲಿ ಅಂದಾಜು 50 ಕುಟುಂಬಗಳು ರಸ್ತೆ ಅಗಲೀಕರಣಕ್ಕೆ ತುತ್ತಾಗುತ್ತಿವೆ. ಭೂ ಸ್ವಾಧೀನ ಮಾಡುತ್ತಿರುವುದರಿಂದ ನಮಗೆ ಇತ್ತ ಮನೆಯೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ. ಹೆದ್ದಾರಿ ಪ್ರಾಧಿಕಾರ ಸರ್ವೆ ನಂ. 2ರಲ್ಲಿ ಅರಣ್ಯ ಎಂದು ನಮೂದಿಸಿರುವುದರಿಂದ ಯಾವುದೇ ಪರಿಹಾರ ನೀಡಲು ಮುಂದಾಗುತ್ತಿಲ್ಲ. ಬಡವರು, ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚಾಗಿರುವ ಈ ಸರ್ವೆ ನಂ. ನಿವಾಸಿಗರಿಗೆ ಕೂಡಲೇ ಹಕ್ಕುಪತ್ರ ವಿತರಿಸಿ, ಪಹಣಿಯಲ್ಲಿ ಕಂದಾಯ ಎಂದು ಬದಲಾವಣೆ ಮಾಡಿ ಪ್ರಾಧಿಕಾರದಿಂದ ಪರಿಹಾರ ನೀಡಲು ಮುಂದಾಗಬೇಕೆಂದು ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಬಿ.ಆರ್.ರೂಪಾ, ಕಡತಗಳನ್ನು ಕೂಡಲೇ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಲ್ಲದೇ, ಹೆದ್ದಾರಿ ಪ್ರಾಧಿಕಾರಕ್ಕೆ ಎಷ್ಟು ಮನೆಗಳು ರಸ್ತೆ ಅಗಲೀಕರಣಕ್ಕೆ ಹೋಗಲಿವೆ ಎಂಬ ಮಾಹಿತಿ ಪಡೆಯಬೇಕಾಗಿದೆ. ಮಾಹಿತಿ ಪಡೆದ ನಂತರ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುಪ್ಪಾಳು ಗ್ರಾಮದ ಮುಖಂಡರಾದ ಹನುಮಂತಪ್ಪ, ಕೃಷ್ಣಪ್ಪ, ತಿಮ್ಮಪ್ಪ, ಪುಟ್ಟರಾಜ್, ಶಬಾನಾ ಬಾನು, ಸಾಹೀರಬಾನು, ವಿಜಯಲಕ್ಷ್ಮೀ, ಖಾದೀರ್ ಸಾಬ್, ಶಿವಲಿಂಗಪ್ಪ, ಫರೀದಾಬಾನು ಅತಹುಲ್ಲಾ ಮತ್ತಿತರರು ಹಾಜರಿದ್ದರು.