ಕಡೂರು: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಮುಂದಾದ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳ ಜತೆ ವ್ಯಾಪಾರಸ್ಥರು ಮಾತಿನ ಚಕಮಕಿ ನಡೆಸಿದ ಕಾರಣ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಧ್ಯಾಹ್ನ ಪುರಸಭೆ ಆರೋಗ್ಯ ನಿರೀಕ್ಷಕ ಚಂದ್ರಪ್ಪ, ಪಿಎಸ್‌ಐ ಎನ್.ಸಿ.ವಿಶ್ವನಾಥ್ ಹಾಗೂ ಇತರೇ ಅಧಿಕಾರಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೆದ್ದಾರಿಯ ಎರಡೂ ಬದಿಯಲ್ಲಿ ಖಾಯಂ ಆಗಿ ನಿರ್ಮಿಸಿಕೊಂಡಿದ್ದ ಗೂಡಂಗಡಿಗಳ ತೆರವಿಗೆ ಮಂಗಳವಾರ ಮುಂದಾದರು.
ಈ ಹಂತದಲ್ಲಿ ಅಂಗಡಿಗಳ ವ್ಯಾಪಾರಸ್ಥರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಗೂಡಂಗಡಿ ಮಾಲೀಕರ ಪರವಾಗಿ ಬಂದ ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್ ಅವರು, ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಪಿಎಸ್‌ಐ ವಿಶ್ವನಾಥ್ ಮತ್ತು ಪುರಸಭೆ ಅಧಿಕಾರಿಗಳಿಗೆ ಆಗ್ರಹಿಸಿದರು.
ಈ ವೇಳೆ ಪಿಎಸ್‌ಐ ವಿಶ್ವನಾಥ್ ಮತ್ತು ಆನಂದ್ ನಡುವೆ ಕೆಲಕಾಲ ಚರ್ಚೆ ನಡೆಯಿತು. ಆಗ ತಮಗೆ ಶಾಸಕರು ಮತ್ತು ಹೆದ್ದಾರಿ ನಿಯಮಗಳ ಅನುಸಾರ ಗೂಡಂಗಡಿಗಳ ತೆರವಿಗೆ ಸೂಚನೆ ಸಿಕ್ಕಿದೆ. ಈ ಭಾಗದಲ್ಲಿ ನಿತ್ಯ ಹಲವು ಅಪಘಾತ ಪ್ರಕರಣಗಳು ನಡೆಯುತ್ತಿವೆ. ರಸ್ತೆ ಕಿಷ್ಕಿಂದೆಯಾಗಿದೆ ಎಂದು ಪಿಎಸ್‌ಐ ವಿಶ್ವನಾಥ್ ಹೇಳಿದರೆ, ಇದಕ್ಕೆ ಪ್ರತಿಯಾಗಿ ಆನಂದ್, ಬಡವರು, ಕೂಲಿ ಕಾರ್ಮಿಕರು ಒಂದು ಹೊತ್ತಿನ ತುತ್ತಿಗಾಗಿ ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಒಕ್ಕಲೆಬ್ಬಿಸಬೇಡಿ ಎಂದು ಮನವಿ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಆನಂದ್, ಯಾವುದೇ ನೋಟಿಸ್ ನೀಡದೇ ಅಮಾನುಷವಾಗಿ ಗೂಡಂಗಡಿಗಳನ್ನು ತೆರವು ಮಾಡುತ್ತಿರುವುದು ಬೇಸರದ ಸಂಗತಿ. ಎಲ್ಲರೂ ಶಾಸಕರಂತೆ ಶ್ರೀಮಂತರಾಗಿ ಜನಿಸಲು ಸಾಧ್ಯವಿಲ್ಲ. ಬಡವರೂ ಕ್ಷೇತ್ರದಲ್ಲಿ ಹುಟ್ಟಿದ್ದು, ಅವರ ಹೊಟ್ಟೆಪಾಡಿಗಾಗಿ ಗೂಡಂಗಡಿಗಳನ್ನು ಆಶ್ರಯಿಸಿಕೊಂಡಿದ್ದಾರೆ. ಏಳು ವರ್ಷ ತಾಲೂಕು ಸತತ ಬರದಿಂದ ತತ್ತರಿಸಿದೆ. ಜನರು ಕೂಲಿಗಾಗಿ ಪರದಾಡುತ್ತಿದ್ದಾರೆ ಎಂದರು.
ಮುಂದಿನ ದಿನದಲ್ಲಿ ಇದೇ ರೀತಿ ತೆರವು ಕಾರ್ಯಾಚರಣೆ ನಡೆದರೆ ಬಿದಿ ಬದಿ ವ್ಯಾಪಾರಿಗಳನ್ನು ಸಂಘಟಿಸಿಕೊಂಡು ಪುರಸಭೆ ಮತ್ತು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಂದು ಇಲಾಖೆ ಮುಂದೆಯೇ ಆಹಾರ ಪದಾರ್ಥವನ್ನು ಬೇಯಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.