Advertisement

ಕಡೂರು ಪುರಸಭೆ ಅತಂತ್ರ

05:14 PM Jun 01, 2019 | Naveen |

ಕಡೂರು: ಕಡೂರು ಪುರಸಭೆಯ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ತಲಾ 6 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್‌ 7 ವಾರ್ಡ್‌ಗಳಲ್ಲಿ ಮತ್ತು ಪಕ್ಷೇತರರು 4 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

Advertisement

ಬೆಳಗ್ಗೆ 8 ಗಂಟೆಗೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆರಂಭವಾದ ಎಣಿಕೆ ಕಾರ್ಯ ಕೇವಲ ಎರಡೂವರೆ ಗಂಟೆಯೊಳಗೆ ಯಾವುದೇ ಗೊಂದಲವಿಲ್ಲದೆ ಮುಕ್ತಾಯವಾಯಿತು.

ಉಪವಿಭಾಗಾಧಿಕಾರಿ ಬಿ. ರೂಪ, ತಹಶೀಲ್ದಾರ್‌ ಉಮೇಶ್‌, ವೃತ್ತನಿರೀಕ್ಷಕ ರಮೇಶ್‌ರಾವ್‌ ಸಂಪೂರ್ಣ ಎಣಿಕೆ ಕಾರ್ಯ ನಡೆಯುವರೆಗೆ ಮೊಕ್ಕಾಂ ಹೂಡಿದ್ದರು. ಎಣಿಕೆ ಆಗುತ್ತಿದ್ದ ವಾರ್ಡ್‌ಗಳ ವಿವಿಧ ಅಭ್ಯರ್ಥಿಗಳ ಏಜೆಂಟರನ್ನು ಮಾತ್ರ ಒಳ ಕರೆಯಲಾಗುತ್ತಿತ್ತು. ಉಳಿದವರಿಗೆ ಕಾಲೇಜು ಮೈದಾನದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಬಹುತೇಕ ಹೊಸ ಮುಖಗಳು ಪುರಸಭೆ ಪ್ರವೇಶಿಸಿದ್ದು, ಬಿಜೆಪಿ ಇದೇ ಮೊದಲ ಬಾರಿಗೆ 6 ವಾರ್ಡ್‌ಗಳಲ್ಲಿ ಜಯಗಳಿಸುವ ಮೂಲಕ ತನ್ನ ನೆಲೆಯನ್ನು ಭದ್ರಗೊಳಿಸಿಕೊಂಡಿದೆ. ಇದಕ್ಕೆ ಅಭ್ಯರ್ಥಿಗಳ ಆಯ್ಕೆ ಮತ್ತು ಶಾಸಕ ಬೆಳ್ಳಿಪ್ರಕಾಶ್‌ ಅವರ ನಾಯಕತ್ವ ಪ್ರಮುಖ ಕಾರಣ ಎಂದು ಆ ಪಕ್ಷದ ಮುಖಂಡರು ಹೇಳಿದ್ದಾರೆ.

ಕಳೆದ ಬಾರಿ ಬಿಜೆಪಿಯಿಂದ ಓರ್ವ ಸದಸ್ಯ ಹಾಗೂ ಕೆಜೆಪಿಯಿಂದ ಇಬ್ಬರು ಸದಸ್ಯರು ಆಯ್ಕೆಯಾಗಿ ನಂತರ ಬದಲಾದ ರಾಜಕೀಯ ಬದಲಾವಣೆಯಿಂದ ಕೆಜೆಪಿ-ಬಿಜೆಪಿ ಒಂದಾಗಿದ್ದರಿಂದ ಮೂರು ಸದಸ್ಯ ಬಲವು ಬಿಜೆಪಿಯದ್ದೇ ಆಗಿತ್ತು. ಇದೀಗ 6 ವಾರ್ಡ್‌ ಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿ ತನ್ನ ಸದಸ್ಯ ಬಲವನ್ನು ದುಪ್ಪಟ್ಟು ಮಾಡಿಕೊಂಡಿದೆ.

Advertisement

ಜೆಡಿಎಸ್‌ ಕಳೆದ ಬಾರಿ 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿಯೂ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್‌ 13 ವಾರ್ಡ್‌ ಗಳಲ್ಲಿ ಕಳೆದ ಬಾರಿ ಗೆದ್ದಿದ್ದರೆ, ಈ ಬಾರಿ 7 ವಾರ್ಡ್‌ಗಳಿಗೆ ಸೀಮಿತವಾಗಿದೆ. 6 ಸ್ಥಾನಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದ್ದರೆ, ಒಟ್ಟು 25 ಮಂದಿ ಪಕ್ಷೇತರರು ಈ ಬಾರಿ ಕಣದಲ್ಲಿದ್ದರು. ಅವರಲ್ಲಿ 4 ಪಕ್ಷೇತರರು ಜಯಗಳಿಸಿದ್ದಾರೆ.

ಕಾಂಗ್ರೆಸ್‌ನ ಕೆ.ಎಂ.ಮೋಹನ್‌ಕುಮಾರ್‌ ಪುನರಾಯ್ಕೆಯಾದ ಏಕೈಕ ಸದಸ್ಯರಾಗಿದ್ದರೆ, ಜೆಡಿಎಸ್‌ನ ಪದ್ಮಾಶಂಕರ್‌, ವಿಜಯಲಕ್ಷ್ಮ್ಮೀ, ಜಿ.ಸೋಮಯ್ಯ ಹಾಗೂ ಪಕ್ಷೇತರ ಅಭ್ಯರ್ಥಿ ಈರಳ್ಳಿ ರಮೇಶ್‌ ಅವರು ಪುನರಾಯ್ಕೆಯಾಗಿದ್ದಾರೆ.

ಕಣದಲ್ಲಿದ್ದ ಪ್ರಮುಖ ಅಭ್ಯರ್ಥಿಗಳಾದ ಜೆಡಿಎಸ್‌ನ ಪಂಗಲಿ ತಿಮ್ಮಯ್ಯ, ಕೆ.ಎಚ್. ಲಕ್ಕಣ್ಣ ಅವರ ಪತ್ನಿ ಲತಾ, ಪುಟ್ಟರಾಜು, ಸುರತಾಳ್‌ ಮಂಜಣ್ಣ ಅವರ ಪತ್ನಿ ಶಾಂತ, ತಿಪ್ಪೇಶ್‌ ಪತ್ನಿ ಲಕ್ಷ್ಮೀ, ಎಂ.ಜಯಮ್ಮ, ತನ್ವೀರ್‌ಅಹಮ್ಮದ್‌, ಮೀಸೆ ಕೃಷ್ಣಪ್ಪ ಅವರ ಪುತ್ರ ನಾಗೇಂದ್ರ ಪರಾಭವಗೊಂಡಿದ್ದಾರೆ.

ಕಾಂಗ್ರೆಸ್‌ನ ಹೂವಿನ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷರಾದ ಎಂ. ಮಾದಪ್ಪ, ಎನ್‌. ಬಷೀರ್‌ಸಾಬ್‌, ಕೆ.ಪಿ. ರಂಗನಾಥ್‌, ಅನ್ಸರ್‌ ಪತ್ನಿ ಜರೀನಾಬಿ ಪರಾಭವಗೊಂಡಿದ್ದರೆ, ಬಿಜೆಪಿಯ ಕೆ.ಪಿ. ರಾಘವೇಂದ್ರ, ಅರುಣ್‌ಕುಮಾರ್‌, ಗೋಪಿಕುಮಾರ್‌, ಆನಂದಮೂರ್ತಿ, ನಗರ ಘಟಕದ ಅಧ್ಯಕ್ಷ ಕೆ.ಬಿ. ಸೋಮೇಶ್‌ ಪತ್ನಿ ಪುಷ್ಪಲತಾ ಸೋತಿದ್ದಾರೆ.

7ನೇ ವಾರ್ಡ್‌ ಅತ್ಯಂತ ಪ್ರತಿಷ್ಠಿತ ವಾರ್ಡ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಶಾಸಕ ಬೆಳ್ಳಿಪ್ರಕಾಶ್‌ ಆಪ್ತ ಹಾಗೂ ಪತ್ರಕರ್ತ ಶಾಮಿಯಾನ ಚಂದ್ರು ಅವರು ತಮ್ಮ ಪತ್ನಿ ಮಂಜುಳಾ ಅವರನ್ನು ಕಣಕ್ಕಿಳಿಸಿದ್ದು, ಅವರ ವಿರುದ್ಧ ಗುತ್ತಿಗೆದಾರ ಚಂದ್ರಶೇಖರ್‌ ಪತ್ನಿ ಹಾಗೂ ಉದ್ಯಮಿ ಸುರತಾಳ್‌ ಮಂಜಣ್ಣ ಪತ್ನಿ ಸ್ಪರ್ಧಿಸಿದ್ದು ಮತದಾರರು ಮಂಜಳಾ ಅವರಿಗೆ ಆಶೀರ್ವದಿಸುವ ಮೂಲಕ ಶಾಸಕರ ಕೈ ಹಿಡಿದಿದ್ದಾರೆ. ನಾಲ್ಕು ಬಾರಿ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೆ.ವಿ. ವಾಸು ಕಳೆದ ಬಾರಿ 7ನೇ ವಾರ್ಡ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಮತ್ತೂಮ್ಮೆ ಅಗ್ನಿಪರೀಕ್ಷೆಗೆ 15ನೇ ವಾರ್ಡ್‌ನಿಂದ ಸ್ಪರ್ಧಿಸಿದ ಅವರನ್ನು ಮತದಾರ ಕೈ ಹಿಡಿಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next