Advertisement

ಮಿನಿ ಸಮರಕ್ಕೆ ತಯಾರಿ ಶುರು

11:58 AM May 07, 2019 | Naveen |

ಕಡೂರು: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಪುನಃ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದ್ದು, ಪಕ್ಷಗಳು ಮತ್ತೆ ಅಖಾಡಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳೀಯ ಪುರಸಭೆಯ 23 ವಾರ್ಡ್‌ಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ.

Advertisement

ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರ ಪರಿಶೀಲನೆ, ಮೇ 20ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 31ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಒಟ್ಟು 23 ವಾರ್ಡ್‌ಗಳಲ್ಲಿ ಈ ಬಾರಿ ಮಹಿಳೆಯರಿಗೆ ಶೇ.40ರಷ್ಟು ಮೀಸಲಾತಿ ದೊರಕಿದ್ದು, ಹೆಚ್ಚಿನ ಸ್ಥಾನ ಪಡೆದು ಪಾರುಪತ್ಯ ಮೆರೆದಿದ್ದಾರೆ. ಪುರಸಭೆಯ ಒಟ್ಟು 10 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಕಳೆದ ಬಾರಿ 6 ಸ್ಥಾನ ಮಾತ್ರ ಮಹಿಳೆಯರಿಗೆ ಮೀಸಲಾಗಿದ್ದು, ಈ ಬಾರಿ 4 ಸ್ಥಾನ ಹೆಚ್ಚಳವಾಗಿದೆ. ಮಹಿಳೆಯರು ಸೇರಿ ಒಟ್ಟು 12 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ದೊರಕಿವೆ. 5 ಸ್ಥಾನ ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.

2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ-1, ಕಾಂಗ್ರೆಸ್‌-13, ಕೆಜೆಪಿ-2, ಜೆಡಿಎಸ್‌-6, ಪಕ್ಷೇತರರು-1 ಸದಸ್ಯರು ಆಯ್ಕೆಯಾಗಿದ್ದರು. ಬಿಸಿಎಂ -ಎ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರಸ್ವತಿ ಕೃಷ್ಣಮೂರ್ತಿ, ಹಾಜರಾಬೀ ಖಾದರ್‌, ಅನಿತಾ ರಾಜಕುಮಾರ್‌ ಕಾಂಗ್ರೆಸ್‌ ಪಕ್ಷದಿಂದ ಅಧಿಕಾರ ಪಡೆದಿದ್ದರು. ನಂತರ ಬದಲಾದ ರಾಜಕೀಯ ಚಿತ್ರಣದಲ್ಲಿ ಬಿಜೆಪಿಯಿಂದ ಗೆದ್ದಿದ್ದ ರಾಜೇಶ್‌ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ ಎಂ.ಮಾದಪ್ಪ ಅಧ್ಯಕ್ಷರಾಗಿ ಆಡಳಿತಾವಧಿ ಪೂರ್ಣಗೊಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ನಾಲ್ಕು ಜನ ಅಧ್ಯಕ್ಷರು, 4 ಜನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಲೋಕಸಭೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಪ್ರಸಕ್ತ ಸಂದರ್ಭ ಮೈತ್ರಿ ಮಾಡಿಕೊಂಡರೆ ಚಿತ್ರಣವೇ ಬದಲಾಗುವ ಸಾಧ್ಯತೆಯಿದೆ.

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಎಲ್ಲರ ಕಣ್ಣು ಸಾಮಾನ್ಯ ವಾರ್ಡ್‌ಗಳತ್ತ ಬಿದ್ದಿದೆ. ಪಟ್ಟಣದಲ್ಲಿ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಹಿಡಿತ ಸಾಧಿಸಿದ ಘಟಾನುಘಟಿ ನಾಯಕರ ವಾರ್ಡ್‌ ಗಳ ಮೀಸಲಾತಿ ಬದಲಾವಣೆ ಆಗಿರುವುದರಿಂದ ಅನ್ಯ ವಾರ್ಡ್‌ಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ.

Advertisement

ಕಳೆದ ಚುನಾವಣೆಯಲ್ಲಿ ವಾರ್ಡ್‌ ನಂ.11 ರಲ್ಲಿ ಸಾಮಾನ್ಯ ವರ್ಗದ ಮೀಸಲಾತಿಯಲ್ಲಿ ಗೆಲುವು ಸಾಧಿಸಿದ್ದ ಪುರಸಭೆಯ ಅಧ್ಯಕ್ಷ ಎಂ. ಮಾದಪ್ಪ ವಾರ್ಡ್‌ ಬದಲಾಯಿಸುವ ನಿರೀಕ್ಷೆಯಿದೆ.

4ನೇ ವಾರ್ಡ್‌ನಲ್ಲಿ ಗೆದ್ದಿದ್ದ ತೋಟದ ಮನೆ ಮೋಹನ ಈಗ 1ನೇ ವಾರ್ಡ್‌ಗೆ, 5 ನೇ ವಾರ್ಡ್‌ನ ಸೋಮಶೇಖರ್‌ 3ನೇ ವಾರ್ಡ್‌ಗೆ, 12ನೇ ವಾರ್ಡ್‌ನ ಅನಿತಾ ರಾಜಕುಮಾರ್‌ 5 ಕ್ಕೆ, 23ನೇ ವಾರ್ಡ್‌ನ ಅಜಾರಾಬೀ ಖಾದರ್‌ 22ಕ್ಕೆ, 3ನೇ ವಾರ್ಡ್‌ನಿಂದ ಪಕ್ಷೇತರರಾಗಿ ಗೆಲುವು ಸಾಧಿಸುತ್ತಿರುವ ಈರಳ್ಳಿ ರಮೇಶ್‌ ಪುನಃ ಸ್ಪರ್ದೆ ನೀಡಲಿದ್ದಾರೆ. 6ನೇ ವಾರ್ಡ್‌ ನಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಭಂಡಾರಿ ಶ್ರೀನಿವಾಸ್‌ 8ನೇ ವಾರ್ಡ್‌ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಲವರಿಗೆ ಮೀಸಲಾತಿ ಬದಲಾವಣೆಯಾಗಿ ಸ್ಪರ್ಧಿಸಲು ವಾರ್ಡ್‌ಗಳಿಲ್ಲದೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಳೆದ ಬಾರಿಯ ಮೀಸಲಾತಿ ಪರಿಣಾಮ ಸ್ಪರ್ಧಿಸಲು ಅವಕಾಶ ಸಿಗದಿರುವ ಮತ್ತು ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಅನೇಕರಿಗೆ ಅವಕಾಶದ ಬಾಗಿಲು ತೆರೆದಿದೆ ಎಂಬ ಮಾತು ಕೇಳಿಬರುತ್ತಿದೆ. ಯುವಕರಿಗೆ ಮೂರು ಪಕ್ಷಗಳು ಹೆಚ್ಚಿನ ಅವಕಾಶ ನೀಡಲಿದ್ದು, ಅಷ್ಟೇ ಪ್ರಮಾಣದಲ್ಲಿ ಪಕ್ಷೇತರರ ಸಂಖ್ಯೆಯು ಹೆಚ್ಚುವ ನೀರೀಕ್ಷೆ ಇದೆ.

ಮೀಸಲಾತಿ ವಿವರ
ವಾರ್ಡ್‌ 1-ಸಾಮಾನ್ಯ, 2-ಪರಿಶಿಷ್ಟ ಪಂಗಡ, 3- ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಹಿಂದುಳಿದ ವರ್ಗ ಬಿ, 6-ಪರಿಶಿಷ್ಟ ಜಾತಿ ಮಹಿಳೆ, 7-ಸಾಮಾನ್ಯ ಮಹಿಳೆ, 8-ಹಿಂದುಳಿದ ವರ್ಗ ಎ, 9-ಪರಿಶಿಷ್ಟ ಜಾತಿ ಮಹಿಳೆ, 10-ಹಿಂದುಳಿದ ವರ್ಗ ಎ ಮಹಿಳೆ, 11-ಸಾಮಾನ್ಯ, 12-ಸಾಮಾನ್ಯ ಮಹಿಳೆ, 13-ಸಾಮಾನ್ಯ ಮಹಿಳೆ, 14-ಪರಿಶಿಷ್ಟ ಜಾತಿ, 15-ಸಾಮಾನ್ಯ ಮಹಿಳೆ, 16-ಸಾಮಾನ್ಯ, 17-ಹಿಂದುಳಿದ ವರ್ಗ ಎ, 18- ಸಾಮಾನ್ಯ, 19-ಹಿಂದುಳಿದ ವರ್ಗ ಎ ಮಹಿಳೆ, 20-ಹಿಂದುಳಿದ ವರ್ಗ ಎ, 21-ಸಾಮಾನ್ಯ ಮಹಿಳೆ, 22-ಸಾಮಾನ್ಯ, 23- ಪರಿಶಿಷ್ಟ ಜಾತಿ ಮೀಸಲಾಗಿದೆ.
ಎ.ಜೆ.ಪ್ರಕಾಶಮೂರ್ತಿ ಕಡೂರು
Advertisement

Udayavani is now on Telegram. Click here to join our channel and stay updated with the latest news.

Next