ಕಡೂರು: ಬುಧವಾರ ನಡೆದ ಕಡೂರು ಪುರಸಭೆ ಚುನಾವಣೆಯಲ್ಲಿ 23 ವಾರ್ಡ್‌ಗಳಲ್ಲಿ ಶೇ 71.28 ಮತದಾನ ನಡೆದಿದ್ದು, 89 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದಾನೆ.
ಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ವಿವಿಧ ವಾರ್ಡ್‌ಗಳ ಅಭ್ಯರ್ಥಿಗಳು ಮಳೆ ಬಂದರೆ ಶೇಕಡವಾರು ಮತದಾನ ಕುಸಿದರೆ ಹೇಗೆ ಎಂಬ ಆತಂಕದಲ್ಲಿದ್ದರು. ಅದರೆ ಸುಮಾರು 9 ಗಂಟೆಯ ವೇಳೆಗೆ ಬಿಸಿಲು ಏರಿ ಮಳೆಮೋಡ ಕರಗಿ ಅಭ್ಯರ್ಥಿಗಳ ಆತಂಕವನ್ನು ದೂರ ಮಾಡಿತು.
23 ವಾರ್ಡ್‌ಗಳಲ್ಲಿಯೂ ಬೆಳಗ್ಗೆ 7 ಗಂಟೆಯಿಂದಲೇ ಮಂದಗತಿಯಲ್ಲಿ ಆರಂಭವಾದ ಮತದಾನ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಯ ವೇಳೆಗೆ ಕೆಲವು ವಾರ್ಡ್‌ಗಳಲ್ಲಿ ಶೇ.40ರಷ್ಟು ಮತದಾನ ನಡೆದಿದ್ದರೆ, ಇನ್ನು ಕೆಲವು ವಾರ್ಡ್‌ಗಳಲ್ಲಿ ಶೇ.20ನ್ನು ದಾಟಿರಲಿಲ್ಲ. ಬಿರು ಬಿಸಿಲನ್ನು ಲೆಕ್ಕಿಸದೆ ಜನರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದರು.
ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವ ಚಟುವಟಿಕೆಯೂ ಇರಬಾರದು ಎಂಬ ನಿಯಮವಿದ್ದರೂ ಅನೇಕ ಮತಗಟ್ಟೆಗಳ ಸನಿಹದಲ್ಲೇ ಅಭ್ಯರ್ಥಿಗಳ ಬೂತ್ ಏಜೆಂಟರು ಟೇಬಲ್, ಕುರ್ಚಿ ಹಾಕಿಕೊಂಡು ಮತದಾರರಿಗೆ ಮತಚೀಟಿ ಬರೆದುಕೊಡುವ ಕಾಯಕದಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿಷ್ಠಿತ ವಾರ್ಡ್‌ಗಳಾದ 1, 3, 5, 7, 11, 12, 16, 19 ಮತ್ತು 21 ರಲ್ಲಿ ವಿವಿಧ ಪಕ್ಷ ಮತ್ತು ಪಕ್ಷೇತರಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರನ್ನು ಮನವೊಲಿಕೆ ಮಾಡುವ ಕಸರತ್ತು ನಡೆಸುತ್ತಿದ್ದರು. ಅವರ ಹಿಂಬಾಲಕರು ಮತ್ತು ಅಭಿಮಾನಿಗಳ ಮಧ್ಯೆ ಅಲ್ಲಲ್ಲಿ ಮಾತಿನ ಚಕಮಕಿ ನಡೆಯುತ್ತಿತ್ತು.
ವಾರ್ಡ್ ಸಂಖ್ಯೆ 2ರಲ್ಲಿ ರಹಮತ್ ನಗರದ ಒಳಗೆ ಇರುವ ಉರ್ದು ಪ್ರಾಥಮಿಕ ಶಾಲೆಯನ್ನು ಮತಗಟ್ಟೆಯಾಗಿ ಪರಿವರ್ತಿಸಿದ್ದು ಈ ಮತಗಟ್ಟೆ ಕನಿಷ್ಠ ಸೌಲಭ್ಯದಿಂದ ವಂಚಿತವಾಗಿದ್ದರೆ, ವಾರ್ಡ್ ಸಂಖ್ಯೆ 4ರಲ್ಲಿ ಕನಕಭವನವನ್ನು ಮತಗಟ್ಟಯಾಗಿ ಪರಿವರ್ತಿಸಿದ್ದರಿಂದ ಪೊಲೀಸರು ನೂಕು-ನುಗ್ಗಲು ತಪ್ಪಿಸಲು ಪರದಾಡಬೇಕಾಯಿತು.
ಒಟ್ಟಾರೆ 23 ವಾರ್ಡ್‌ಗಳಲ್ಲಿಯೂ ಶಾಂತಿಯುತ ಮತದಾನ ನಡೆದಿದ್ದು, ಇವಿಎಂ ಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಬರೆಯಲಾಗಿದೆ. ಇನ್ನೆರಡು ದಿನಗಳ ಕಾಲ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಹೆಚ್ಚಗಲಿದ್ದು, ಮೇ.31 ರಂದು ಫಲಿತಾಂಶದೊಂದಿಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.