ಕಡೂರು: ಕಳೆದ ಗುರುವಾರದಿಂದ ಪಂಚನಹಳ್ಳಿ, ಸಿಂಗಟಗೆರೆ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಂಚೀಹಳ್ಳ ತುಂಬಿ ಹರಿಯುತ್ತಿದ್ದು, ಅದನ್ನು ವೀಕ್ಷಿಸಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಸಿಂಗಟಗೆರೆ ಹೋಬಳಿ ಕಂಚುಗಲ್ಲು ಬಿದರೆ ಕೆರೆ ಭಾಗದಲ್ಲಿ ಬೀಳುವ ಮಳೆ ನೀರು ಸಣ್ಣ ಪ್ರಮಾಣದಲ್ಲಿ ಹರಿದು ಕೊತ್ತಿಗೆರೆ ಬಳಿ ದೊಡ್ಡ ಹಳ್ಳವಾಗಿ ಪರಿವರ್ತನೆಯಾಗುತ್ತದೆ. ಈ ಕಂಚೀಹಳ್ಳ ನಂತರ ಗುಡ್ಡೇಹಳ್ಳಿ ಮೂಲಕ 8 ಕಿ.ಮೀ. ಹಾಯ್ದು ಬೈರಗೊಂಡನಹಳ್ಳಿ ಬಳಿ ವೇದಾ ನದಿಯನ್ನು ಸೇರುತ್ತದೆ.
ಮಾಯದ ಹಳ್ಳ: ಇದೊಂದು ಮಾಯದ ಹಳ್ಳ ಎಂದು ಖ್ಯಾತಿ ಪಡೆದಿದ್ದು, ಪಂಚನಹಳ್ಳಿ, ಸಿಂಗಟಗೆರೆ ಭಾಗದಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ 50ರಿಂದ 60 ಮಿ.ಮೀ. ಮಳೆಯಾದರೆ ಈ ಹಳ್ಳ ಜೀವಕಳೆ ಪಡೆದುಕೊಳ್ಳುತ್ತದೆ.
ಜನರ ಸಂಭ್ರಮ: ಕಳೆದ ಮೂರ್‍ನಾಲ್ಕು ದಿನದಲ್ಲಿ ಈ ಭಾಗದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು, ಯಗಟಿಯಿಂದ ಉಡುಗೆರೆಗೆ ತೆರಳುವ ಮಾರ್ಗದಲ್ಲಿ ಈ ಹಳ್ಳಕ್ಕೆ ಸೇತುವೆ ಕಟ್ಟಲಾಗಿದೆ. ಸೇತುವೆ ಮೇಲೆ ಒಂದು ಅಡಿ ಎತ್ತರದಲ್ಲಿ ಶುಕ್ರವಾರ ನೀರು ಹರಿಯುತ್ತಿರುವ ದೃಶ್ಯ ಜನರ ಸಂಭ್ರಮಕ್ಕೆ ಕಾರಣವಾಗಿದೆ.
ತುಂಬಿ ಹರಿಯುವ ಹಳ್ಳ: ಕಳೆದ ವರ್ಷವೂ ಈ ಹಳ್ಳ ತುಂಬಿ ಹರಿಯುತ್ತಿತ್ತು. ಗುಡ್ಡೇಹಳ್ಳಿ ಬಳಿ ಹಳ್ಳಕ್ಕೆ ಬ್ಯಾರೇಜ್ ನಿರ್ಮಿಸಿ ಅಲ್ಲಿ ಸಂಗ್ರಹವಾಗುವ ನೀರನ್ನು ಏತ ನೀರಾವರಿ ಮೂಲಕ ಹನುಮನಹಳ್ಳಿ, ಯಗಟಿ, ಗುಡ್ಡೇಹಳ್ಳಿ ಕೆರೆಗಳನ್ನು ತುಂಬಿಸಲು ಸಾಧ್ಯವಿದೆ. ದೊಡ್ಡ ಯೋಜನೆಗಳ ಬದಲಿಗೆ ಇಂತಹ ಸಣ್ಣ ಯೋಜನೆಗಳಿಗೆ ಒತ್ತು ನೀಡಿದರೆ ಒಂದಿಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವಿದೆ ಎಂದು ಈ ಭಾಗದಲ್ಲೇ ವಾಸವಾಗಿರುವ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಗಟಿ ರವಿಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.