Advertisement

ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ: ಮಂಜುನಾಥ

05:43 PM Dec 16, 2019 | Naveen |

ಕಡೂರು: ಗ್ರಾಮೀಣ ಹಳ್ಳಿಗಳ ಅಭಿವೃದ್ಧಿಯೇ ದೇಶದ ಪ್ರಗತಿಗೆ ಹಿಡಿದ ಕೈಗನ್ನಡಿ ಎಂಬ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಬೇಕಾದರೆ ಪ್ರತಿ ಹಳ್ಳಿಗಳಲ್ಲಿಯೂ ಮೂಲ ಸೌಕರ್ಯ ದೊರೆಯುವಂತಾಗಬೇಕು ಎಂದು ತಾಪಂ ಸದಸ್ಯ ಜಿಗಣೆಹಳ್ಳಿ ಮಂಜುನಾಥ್‌ ಹೇಳಿದರು.

Advertisement

ತಾಲೂಕಿನ ಇಂಗ್ಲಾರನಹಳ್ಳಿ ಮತ್ತು ದೋಗೆಹಳ್ಳಿ ಗ್ರಾಮದಲ್ಲಿ ಒಟ್ಟು 30ಲಕ್ಷ ರೂ. ವೆಚ್ಚದ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಸಕ ಬೆಳ್ಳಿಪ್ರಕಾಶ್‌ ತಾಲೂಕಿನಲ್ಲಿ ಹಿಂದುಳಿದ ತೆಲುಗುಗೌಡ ಸಮಾಜದ ಅಭಿವೃದ್ಧಿಗಾಗಿ 1.80 ಕೋಟಿ ಅನುದಾನ ನೀಡಿದ್ದಾರೆ ಎಂದರು.

ಕ್ಷೇತ್ರದ ಹಳ್ಳಿಗಳು ಮೂಲ ಸೌಕರ್ಯ ವಂಚಿತವಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕ ಬೆಳ್ಳಿ ಪ್ರಕಾಶ್‌ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪ್ರತಿ ಹಳ್ಳಿಗಳ ರಸ್ತೆ ಅಭಿವೃದ್ಧಿಗಾಗಿ ತಮ್ಮ ಅನುದಾನದಲ್ಲಿ ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಪ್ರಚಾರದ ಗೀಳಿಲ್ಲದೆ ಕಾರ್ಯಕರ್ತರೆ ಚಾಲನೆ ನೀಡುವಂತೆ ಸೂಚಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಇಂಗ್ಲಾರನಹಳ್ಳಿ ಗ್ರಾಮಕ್ಕೆ ಮುಂದಿನ ದಿನಗಳಲ್ಲಿ ಇನ್ನು 10 ಲಕ್ಷ ರೂ. ಬಿಡುಗಡೆಗೊಳಿಸಿ ಇನ್ನುಳಿದ ರಸ್ತೆ ಪೂರ್ಣಗೊಳಿಸುವುದಾಗಿ ತಿಳಿಸಿದರು. ಶಿಕ್ಷಕ ರೇವಣಪ್ಪ ಮಾತನಾಡಿ, ಶಾಲೆಯ ಸುತ್ತಲೂ ಕಾಂಪೌಂಡ್‌ ಅವಶ್ಯವಿದೆ. ಶಾಲೆಯ ಹಿಂಭಾಗದಲ್ಲಿ ಚರಂಡಿಯಲ್ಲಿ ಹೂಳು ತುಂಬಿದೆ.

ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ವಾಸಸ್ಥಾನವಾಗಿ ಮಕ್ಕಳಿಗೆ ರೋಗ ಹರಡುವ ಸಂಭವವಿದೆ. ಜೋಡಿ ತಿಮ್ಮಾಪುರ ಗ್ರಾಮದ ಪಿಡಿಒಗೆ ಹಲವು ಬಾರಿ ದೂರು ನೀಡಿದ್ದರು ಸಮಸ್ಯೆ ಬಗೆಹರಿಸುತ್ತಿಲ್ಲ ಎಂಬ ಮನವಿಗೆ ಸ್ಪಂದಿಸಿದ ತಾಪಂ ಸದಸ್ಯ ಮಂಜುನಾಥ ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

Advertisement

ದೋಗೆಹಳ್ಳಿಯಲ್ಲಿ 15 ಲಕ್ಷ ರೂ. ಕಾಂಕ್ರೀಟ್‌ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಬಳ್ಳಿಗನೂರು ಕ್ಷೇತ್ರದ ತಾ.ಪಂ ಸದಸ್ಯ ಬ್ಯಾಗಡೇಹಳ್ಳಿ ಬಸವರಾಜ್‌, ಶಾಸಕರು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ. ಅದರ ಜತೆಯಲ್ಲಿಯೇ ಕಾಂಕ್ರೀಟ್‌ ರಸ್ತೆ ಜತೆ ಬಾಕ್ಸ್‌ ಚರಂಡಿ ನಿರ್ಮಾಣ ಮಾಡಿದ್ದರೆ ಒಳಿತಾಗುತ್ತಿತ್ತು. ಹಳ್ಳಿಗಳಲ್ಲಿ ಚರಂಡಿಗಳದ್ದೆ ಸಮಸ್ಯೆಯಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂನವರು ಚರಂಡಿ ಮಾಡಿಸಲು ಮುಂದಾದರೆ ಗುತ್ತಿಗೆದಾರರು ಒಪ್ಪುತ್ತಿಲ್ಲ. ಶಾಸಕರು ಮುಂದಿನ ದಿನಗಳಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಇನ್ನು ಹೆಚ್ಚಿನ ಕಾಳಜಿ ವಹಿಸಲಿ ಎಂದರು.

ದೋಗೆಹಳ್ಳಿ ತಿಮ್ಮೇಗೌಡ ಮಾತನಾಡಿ, ದೋಗೆಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ರೈತಾಪಿ ವರ್ಗದ ಜನರೇ ಜಾಸ್ತಿ ಇದ್ದು, ಕೃಷಿಗೆ ಜಾನುವಾರುಗಳನ್ನೆ ಅತಿ ಹೆಚ್ಚು ಅವಲಂಬಿಸಿದ್ದು, ಅವುಗಳಿಗೆ ರೋಗ ತಗುಲಿದರೆ ಪಕ್ಕದ ಬೀರೂರಿಗೆ ತೆರಳಬೇಕು. ಶಾಸಕರು ಮನಸ್ಸು ಮಾಡಿ ಈ ಊರಿಗೆ ಪಶು ವೈದ್ಯ ಆಸ್ಪತ್ರೆ ಮಂಜೂರು ಮಾಡಿಸಿ ದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಬಿಜೆಪಿ ಮುಖಂಡ ಕುರುಬಗೆರೆ ಮಹೇಶ್‌, ಹುಲ್ಲೇಹಳ್ಳಿ ಗ್ರಾಪಂ ಸದಸ್ಯರಾದ ಕೃಷ್ಣಮೂರ್ತಿ, ನಾಗರಾಜ್‌, ದೋಗೆಹಳ್ಳಿ ಕೃಷ್ಣಮೂರ್ತಿ, ಜೋಗಿಹಟ್ಟಿ ಸುರೇಶ್‌, ಗುತ್ತಿಗೆದಾರ ಗಿರೀಶ್‌ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next