ಕಡೂರು: ಸೃಜನಶೀಲತೆ ಎಂಬುದು ಸ್ವತಂತ್ರ ಮನಸ್ಸಿನ ಅಭಿವ್ಯಕ್ತಿ. ಆ ಸ್ವತಂತ್ರ ಮನೋಭಾವವೇ ಕುವೆಂಪು ಅವರನ್ನು ಸೃಷ್ಟಿಸಿತು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಎಲ್.ಎಂ.ಮುಕುಂದರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಭಾರತ್ ಸ್ಕೌಟ್ಸ್, ರೇಂಜರ್ ಮತ್ತು ರೋವರ್ ಘಟಕದ ವತಿಯಿಂದ ಶನಿವಾರ ಏರ್ಪಡಿಸಿದ್ದ ಯುವಜನತೆ ಮತ್ತು ವಿಶ್ವಮಾನವ ತತ್ವ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ಮಹಾಕಾವ್ಯಗಳು ನಮ್ಮ ಇತಿಹಾಸದ ಅಕರಗಳೆಂದರೆ ತಪ್ಪಲ್ಲ. ಅವುಗಳಲ್ಲಿ ಸೂಕ್ಷ್ಮ ಸತ್ಯಗಳ ಅನಾವರಣವಿದೆ. ಕುವೆಂಪು ಅವರ ರಾಮಾಯಣದಲ್ಲಿ ಮಹಿಳಾ ಪ್ರಾಧಾನ್ಯತೆಯನ್ನು ಕಾಣಬಹುದು. ರಾವಣ ತನ್ನ ಆಡಳಿತದಲ್ಲಿ ಸಮುದ್ರ ಸೇನೆಗೆ ಸಿಂಹಿಣಿ, ಗಡಿ ಭದ್ರತೆಗೆ ಲಂಕಿಣಿ, ಮುಜರಾಯಿ ವ್ಯವಹಾರಕ್ಕೆ ಲಂಕಾರತ್ನೆ ಮುಂತಾದವರನ್ನು ನಿಯೋಜಿಸಿದ್ದ.
ಅಂದರೆ, ಮಹಿಳೆಯರೂ ಪುರುಷ ಸಮಾನರಾಗಿ ಜವಾಬ್ದಾರಿ ಹೊರುತ್ತಿದ್ದರೆಂಬ ಕಲ್ಪನೆಯೇ ಕುವೆಂಪು ವೈಚಾರಿಕತೆಯನ್ನು ಬಿಂಬಿಸುತ್ತದೆ ಎಂಬುದನ್ನು ಗಮನಿಸಬೇಕು ಎಂದರು. ಕುವೆಂಪು ಧರ್ಮ ವಿರೋಧಿ ಯಲ್ಲ. ನಾಸ್ತಿಕರೂ ಅಲ್ಲ. ಅವರದ್ದು ಶೂದ್ರರಿಗೆ ನಿಯಾಗುವ, ಮಹಿಳಾ ಸಬಲೀಕರಣದ ಪರವಾದ ಧ್ವನಿ. ಜಾತಿ-ಧರ್ಮಗಳ ಹಂಗಿಲ್ಲದ ಮನುಷ್ಯ. ಜಾತಿ ಮತ್ತು ಮಾನವ ಪ್ರಜ್ಞೆ, ವಿಶ್ವ ಭಾತೃತ್ವದ ಪ್ರಜ್ಞೆ ಮೂಡಿಸಲು ಶ್ರಮಿಸಿದರು. ಅವರ ರಚನೆಗಳಲ್ಲಿ ವಿಶ್ವಮಾನವ ಪ್ರಜ್ಞೆ ಮೂಡಬೇಕೆಂಬ ಕಳಕಳಿ ಎದ್ದು ಕಾಣುತ್ತದೆ ಎಂದರು.
ಶೂದ್ರರಿಗೆ ಸಾಹಿತ್ಯ ರಚನಾ ಪಾಂಡಿತ್ಯವಿತ್ತು ಎಂಬುದಕ್ಕೆ ರಾಮಾಯಣ, ಮಹಾಭಾರತ ಕಾವ್ಯಗಳೇ ಸಾಕ್ಷಿ. ಕಾಳಿದಾಸನಂತಹ ಮಹೋನ್ನತ ಕವಿಯೂ ಶೂದ್ರನೇ. ಆದರೆ, ಮಹಾಕಾವ್ಯ ರಚನಾ ಸಾಮರ್ಥ್ಯ ಹೊಂದಿದ್ದ. ಆದ್ದರಿಂದಲೇ ವಾಲ್ಮೀಕಿ, ವ್ಯಾಸರು ಇಂದಿಗೂ ಜೀವಂತವಿದ್ದಾರೆ. ಕುವೆಂಪು ಅವರನ್ನು ಚಿಂತನಕಾರರೆಂದು ಬಣ್ಣಿಸುವ ಆತುರದಲ್ಲಿ ಜನರಿಂದ ದೂರ ಮಾಡಿದ್ದೇವೆಂಬ ಆತಂಕ ಕಾಡುತ್ತಿದೆ. ಇಂದಿನ ಪರ್ವ ಕಾಲದಲ್ಲಿ ಯುವಜನತೆಗೆ ಸಾಮಾಜಿಕ ಚಿಂತನೆ ನಡೆಸಲು ಬಹಳಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಕುವೆಂಪು ಚಿಂತನೆಗಳನ್ನು ಅರ್ಥೈಸಿಕೊಂಡು ಒಂದಿಷ್ಟು ಅಳವಡಿಸಿಕೊಂಡರೆ ನಾವೂ ವಿಶ್ವಮಾನವರಾಗಬಹುದು ಎಂದು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ|
ದೊರೇಶ್ ಬಿಳಿಕೆರೆ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಓದಿದರೆ ತಾರಣ್ಯ ಮರುಕಳಿಸುತ್ತದೆ ಎಂಬ ಮಾತಿದೆ. ಕುವೆಂಪು ಸಾಹಿತ್ಯ ಓದಿದರೆ ಎಂತಹವರೂ ವಿಶ್ವಮಾನವರಾಗಬಲ್ಲ ಅವಕಾಶವಿದೆ. ಯುವಜನತೆ ಇದರತ್ತ ಗಮನ ಹರಿಸಬೇಕೆಂದರು. ವಿಚಾರ ಸಂಕಿರಣದಲ್ಲಿ ರಂಗಕರ್ಮಿ ಸಂಸ ಸುರೇಶ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.