ಕಡೂರು: ಕಳೆದ 22 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ನೇತೃತ್ವದಲ್ಲಿ ದತ್ತ ಪೀಠದಲ್ಲಿ ನಡೆಯುತ್ತಿರುವ ದತ್ತ ಜಯಂತಿ, ದತ್ತಮಾಲಾ ಕಾರ್ಯಕ್ರಮದಲ್ಲಿ ಕಡೂರು ತಾಲೂಕಿನ ಭಕ್ತರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ದತ್ತಮಾಲಾ ಅಭಿಯಾನದ ಜಿಲ್ಲಾ ಪ್ರಮುಖ್ ಕಡೂರು ಎ.ಮಣಿ ತಿಳಿಸಿದರು.
ಐತಿಹಾಸಿಕ ಮದಗದಕೆರೆ ಕೆಂಚಮ್ಮನ ಸನ್ನಿಧಿಯಲ್ಲಿ ಮಂಗಳವಾರ ಸಂಪತ್‌ಕುಮಾರ್ ಗುರುಗಳಿಂದ ದತ್ತಮಾಲೆ ಧರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ದತ್ತಪೀಠದ ಗುಹೆಯಲ್ಲಿ ತ್ರಿಕಾಲ ಪೂಜೆ ನಡೆಯಬೇಕು, ಪ್ರತಿನಿತ್ಯ ಪೀಠಕ್ಕೆ ಬರುವ ಭಕ್ತರಿಗೆ ದತ್ತಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಪೀಠದಲ್ಲಿ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.
ದತ್ತಪೀಠದ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳು ಸರ್ಕಾರದ ಬಳಿಯಿದ್ದು, ಅದನ್ನು ಬಗೆಹರಿಸಿ ಶೀಘ್ರ ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು. ಪ್ರತಿ ವರ್ಷದಂತೆ ದತ್ತ ಜಯಂತಿಯಲ್ಲಿ ಪ್ರಸಾದ ವಿನಿಯೋಗ ಹಾಗೂ ಪೂಜೆ, ಧಾರ್ಮಿಕ ಕಾರ್ಯಗಳಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು ಎಂದರು.
ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ನಾವು ಜಯಂತಿ-
ಧಾರ್ಮಿಕ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಭಜ ರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶಾಂತಿ ಪ್ರಿಯರು ಹಾಗಾಗಿ, ಶಾಂತಿಯುತವಾಗಿ ದತ್ತ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು. ಡಿ.12 ರಂದು ನಡೆಯಲಿರುವ ದತ್ತ ಜಯಂತಿ ಮತ್ತು ದತ್ತಮಾಲೆ ಕಾರ್ಯಕ್ರಮಕ್ಕೆ ಕಡೂರು ತಾಲೂಕಿನಿಂದ ಸುಮಾರು 1500 ರಿಂದ 2000 ದತ್ತ ಭಕ್ತರು ದತ್ತಪೀಠಕ್ಕೆ ತೆರಳಿದ್ದಾರೆ. ಅಂದು ಪಟ್ಟಣದ ಬಸವೇಶ್ವರ ವೃತ್ತದಿಂದ ಮಾಲಾಧಾರಿಗಳು ಪೀಠಕ್ಕೆ ತೆರಳಲಿದ್ದು, ಬಸವೇಶ್ವರ ವೃತ್ತಕ್ಕೆ ಬರಲು ಮನವಿ ಮಾಡಿದರು.
ದತ್ತಪೀಠದಲ್ಲಿ ಮಂಗಳವಾರ ನಡೆದ ಅನುಸೂಯಾ ಜಯಂತಿಯಲ್ಲಿ ತಾಲೂಕಿನಿಂದ ಸುಮಾರು 500 ಮಹಿಳೆಯರು ಭಾಗವಹಿಸಿದ್ದರು ಎಂದರು. ಸಿದ್ದರಹಳ್ಳಿಯ ಮೈಲಾರಪ್ಪ, ಕಡೂರು ಆಟೋ ಸಂಘದ ಅಧ್ಯಕ್ಷ ಅಶೋಕ, ಮಿಟ್ರಿಕುಮಾರ್, ರವಿ, ಹುಲ್ಲೇಹಳ್ಳಿ ಲಕ್ಷ್ಮಣ್, ಯಗಟಿ ಹೋಬಳಿಯ ಚಿನ್ನದೇವರಾಜ್, ಕಿರಣ್, ಬೀರೂರುನ ವಿಕ್ಕಿ, ಸುಪ್ರೀತ್, ಹೊಸಹಳ್ಳಿಯ ವಿಶ್ವ, ಸಿಂಗಟಗೆರೆಯ ಶಿವರಾಜ್, ನಾಗರಾಜ್, ಅಂತರಘಟ್ಟೆ ಸಂಕ್ಲಾಪುರದ ಪ್ರಭು, ಯಳ್ಳಂಬಳಸೆಯ ಮಹೇಶ್, ಬಳ್ಳೆಕೆರೆಯ ಶಶಿ, ಜಿಗಣೆಹಳ್ಳಿಯ ಮಂಜುನಾಥ್, ಕುರುಬಗೆರೆಯ ಮಹೇಶ್, ಕೆಜ್ಜ ಮಾಲೆ ಧರಿಸಿದರು.