Advertisement

ಬೀರೂರು ಪುರಸಭೆ ಅತಂರ

04:54 PM Nov 15, 2019 | |

ಕಡೂರು: ಬೀರೂರು ಪುರಸಭೆ ಚುನಾವಣೆ ಮತ ಎಣಿಕೆ ಗುರುವಾರ ನಡೆದಿದ್ದು, ಈ ಬಾರಿಯೂ ಮತದಾರರು ಅತಂತ್ರ ಪುರಸಭೆಗೆ ಆಶೀರ್ವಾದ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಯಥಾಸ್ಥಿತಿ ಕಾಪಾಡಿಕೊಂಡಿರುವುದು ವಿಶೇಷವಾಗಿದೆ.

Advertisement

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರಕ್ಕೆ ಬರಲು ಇನ್ನೂ 2 ಸ್ಥಾನಗಳ ಅವಶ್ಯಕತೆ ಇದೆ. ಕಾಂಗ್ರೆಸ್‌ಗೆ ಮೂರು ಸ್ಥಾನಗಳ ಅಗತ್ಯವಿದೆ. ಒಟ್ಟು 23 ವಾರ್ಡ್‌ಗಳಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್‌ 9 ಸ್ಥಾನ, ಜೆಡಿಎಸ್‌ 2 ಸ್ಥಾನ ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಸ್ಥಾನ ಗಳಿಕೆತಿರುವು ಮುರುವು ಆಗಿರುವುದಷ್ಟೇ ಸಾಧನೆ ಎನ್ನಲಾಗುತ್ತಿದೆ.

ಕಳೆದ ಬಾರಿ ಬಿಜೆಪಿ 9 ಸ್ಥಾನಗಳಲ್ಲಿ ಕಾಂಗ್ರೆಸ್‌ 10 ಸ್ಥಾನದಲ್ಲಿ, ಜೆಡಿಎಸ್‌ 2 ಸ್ಥಾನದಲ್ಲಿ ಹಾಗೂ ಓರ್ವ ಪಕ್ಷೇತರ ಮತ್ತು ಓರ್ವ ಕೆಜೆಪಿ ಸದಸ್ಯರು ಪುರಸಭೆಗೆ ಪ್ರವೇಶ ಪಡೆದಿದ್ದರು. ಈ ಬಾರಿ
ಬಿಜೆಪಿ 10 ಸ್ಥಾನ ಗಳಿಸಿ ಅತೀ ಹೆಚ್ಚಿನ ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 9 ಸ್ಥಾನ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಜೆಡಿಎಸ್‌ ಕಳೆದ ಬಾರಿಯ ಹಾಗೆಯೇ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎಲ್ಲ 23 ವಾರ್ಡ್‌ಗಳಲ್ಲೂ ತನ್ನಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ, ಒಟ್ಟಾರೆ 5,867 ಮತಗಳನ್ನು ಗಳಿಸುವ ಮೂಲಕ ಅತೀ ಹೆಚ್ಚು ಮತ ಪಡೆದ ಪಕ್ಷವಾಗಿದೆ.

21ವಾರ್ಡ್‌ ಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ 4,856 ಮತ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್‌ 13 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ 1,493 ಮತ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 1ನೇ ವಾರ್ಡ್‌ನ ಬಿಜೆಪಿಯ ಎಂ.ಪಿ.ಸುದರ್ಶನ್‌ ಹಾಗೂ 4ನೇ
ವಾರ್ಡ್‌ ನ ಕಾಂಗ್ರೆಸ್‌ ಪಕ್ಷದ ಲೋಕೇಶಪ್ಪ, 8ನೇ ವಾರ್ಡ್‌ನ ಶಶಿಧರ್‌ ಮತ್ತು 22ನೇ ವಾರ್ಡ್‌ನ ರವಿಕುಮಾರ್‌(ಎಲೆ)ಅವರು ಮರು ಆಯ್ಕೆಯಾದ ಸದಸ್ಯರಾಗಿದ್ದಾರೆ.

ಮತ ಎಣಿಕೆ ನಡೆದ ಕಡೂರು ತಾಲೂಕು ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್‌ ಪಹರೆ ಹಾಕಲಾಗಿತ್ತು. ಬೆಳಗ್ಗೆ 8 ಗಂಟೆಗೆ ಆರಂಭವಾಗಬೇಕಾಗಿದ್ದ ಮತ ಎಣಿಕೆ ಕಾರ್ಯ ಪೂರ್ವ ಸಿದ್ಧತೆ ಕೊರತೆಯಿಂದ 8.45ಕ್ಕೆ ಆರಂಭವಾಯಿತು. ಆದರೂ, 9.45ರ ವೇಳೆಗೆ 22 ವಾರ್ಡ್‌ಗಳ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಿಸುವಲ್ಲಿ ಚುನಾವಣಾ ಶಾಖೆ ಯಶಸ್ವಿಯಾಯಿತು. ವಿಜೇತ ಅಭ್ಯರ್ಥಿಗಳನ್ನು ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಎಣಿಕಾ ಕೇಂದ್ರದ ಮುಂದೆ ಶಿಳ್ಳೆ ಹಾಕುತ್ತಾ, ಹೆಗಲ ಮೇಲೆ ಹೊತ್ತುಕೊಂಡು ಕುಣಿಯುತ್ತಾ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂತು. ಅನೇಕ ಹೊಸಬರು ಮೊದಲ ಬಾರಿಗೆ ಪುರಸಭೆಗೆ ಪ್ರವೇಶ ಪಡೆದಿದ್ದು, ಅವರ ಗೆಳೆಯರು ಹಾಗೂ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಸಿಹಿ ಹಂಚಿ ಸಂತಸಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next