ಕಡೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮುಸ್ಲಿಂ ಬಾಂಧವರ ಇಸ್ತೇಮಾ ಕೆಲಿಯೇ ಎಂಬ ಎರಡು ದಿನಗಳ ಧರ್ಮ ಪ್ರವಚನ ಕಾರ್ಯಕ್ರಮ ಬುಧವಾರ ಆರಂಭವಾಯಿತು.
ಚಿಕ್ಕಮಗಳೂರು ಜಿಲ್ಲೆ ಮತ್ತು ಸುತ್ತಮುತ್ತಲ ಇತರ ತಾಲೂಕು ಕೇಂದ್ರಗಳ ಸುಮಾರು 20 ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಪ್ರವಚನದಲ್ಲಿ ಭಾಗಿಯಾಗಿದ್ದು, ಬೆಂಗಳೂರಿನಿಂದ ಬಂದಿರುವ 12 ಮಂದಿ ಧರ್ಮ ಗುರುಗಳು ಬುಧವಾರ ಮತ್ತು ಗುರುವಾರ ಬದುಕಿನ ಸಾರವನ್ನು ಅರಿತುಕೊಳ್ಳುವ ಪ್ರವಚನ ನೀಡಲಿದ್ದಾರೆ.
ಬುಧವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪ್ರವಚನ ಕಾರ್ಯಕ್ರಮ ರಾತ್ರಿ 10 ಗಂಟೆಗೆ ಮುಗಿಯಲಿದ್ದು, ಗುರುವಾರ ಬೆಳಗ್ಗೆ 5 ಗಂಟೆಗೆ ಪ್ರವಚನ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ 10 ಗಂಟೆಗೆ ಮುಕ್ತಾಯವಾಗಲಿದೆ. ಪ್ರವಚನದ ಮಧ್ಯೆ 5 ಬಾರಿ ನಮಾಜ್ ಕಾರ್ಯಕ್ರಮವೂ ಅಲ್ಲಿಯೇ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.
ಕಾರ್ಯಕ್ರಮಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಡೂರು ಮುಸ್ಲಿಂ ಬಾಂಧವರು ಸ್ವತ್ಛತೆ, ನೀರು ಮತ್ತಿತರ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಬೀರೂರು ಮತ್ತು ತರೀಕೆರೆ ಬಾಂಧವರು ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಬಾಣವಾರ ಮತ್ತು ಚಿಕ್ಕಮಗಳೂರು ಮುಸ್ಲಿಂ ಬಾಂಧವರು ಟೀ ಮತ್ತು ಬಿಸ್ಕತ್ ವ್ಯವಸ್ಥೆ ಮಾಡಿದ್ದಾರೆ.
ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಆಗಮಿಸುವ ಎಲ್ಲಾ ಬಾಂಧವರಿಗೆ ಕಲ್ಲಂಗಡಿ, ತಂಪು ಪಾನೀಯ, ಮಜ್ಜಿಗೆ ಉಚಿತವಾಗಿ ನೀಡಲಾಗುತ್ತಿದೆ. ಸಮಾರಂಭ ಸ್ಥಳದಲ್ಲಿ ಅಲ್ಲಲ್ಲಿ ನೂರಕ್ಕೂ ಹೆಚ್ಚು ಕುಡಿಯುವ ನೀರಿನ ಕ್ಯಾನ್‌ಗಳನ್ನು ಇರಿಸಲಾಗಿದೆ. ಪ್ರವಚನ ಮುಗಿದ ಬಳಿಕ ಊಟ ಸೇವಿಸಿ ಕಾರ್ಯಕ್ರಮದ ಸ್ಥಳದಲ್ಲಿಯೇ ಮಲಗುವ ವ್ಯವಸ್ಥೆ ಮಾಡಲಾಗಿದೆ.
ಸುಮಾರು 150ಕ್ಕೂ ಹೆಚ್ಚು ಪೇದೆಗಳು, 6 ಪಿಎಸ್‌ಐ, 2 ಸಿಪಿಐ ಹಾಗೂ ಓರ್ವ ಡಿವೈಎಸ್‌ಪಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಆವರಣದ ಎರಡೂ ಬದಿಯ ಗೇಟ್ ತೆರೆದು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಡೂರು ಪಿಎಸ್‌ಐ ವಿಶ್ವನಾಥ್ ಮಾಹಿತಿ ನೀಡಿದರು.