Advertisement
ಹೇಮಗಿರಿ ಬೆಟ್ಟ ಪ್ರಾಕೃತಿಕ ಸೌಂದರ್ಯಕ್ಕೆ ಹೊಂದಿಕೊಂಡಿರುವ ಕಾಡುಮಲ್ಲೇಶ್ವರ ಬೆಟ್ಟ ಕೇವಲ ಭಕ್ತರನ್ನಷ್ಟೇ ಅಲ್ಲ. ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರಿಗೆ ಹೇಳಿ ಮಾಡಿದ ತಾಣವೂ ಹೌದು. ಬೆಟ್ಟ ಹತ್ತಿ ನಿಂತು ಎತ್ತ ನೋಡಿದರೂ ಸುತ್ತಲೂ ಹಸಿರು ಪ್ರಕೃತಿ ಒದ್ದು ಮಲಗಿದಂತೆ ಭಾಸವಾಗುತ್ತದೆ. ಸಾಲು ಸಾಲು ಬೆಟ್ಟಗಳು, ಕೆರೆಕಟ್ಟೆಗಳ ಸುಂದರ ನೋಟ, ಹಚ್ಚ ಹಸಿರಿನ ಹೊದಿಕೆಯಿಂದ ಕಂಗೊಳಿಸುವ ಪಾಕೃತಿಕ ಸೌಂದರ್ಯ, ತಣ್ಣಗೆ ಬೀಸುವ ಗಾಳಿ ನಡುವೆ ಬೆಟ್ಟದ ಮೇಲೆ ತ್ರಿಮೂರ್ತಿಗಳ ದೇವರ ದರ್ಶನ ಪಡೆಯುವುದೇ ಪುಣ್ಯ.
Related Articles
Advertisement
ಬೆಟ್ಟ ಹತ್ತಿ ಮಲ್ಲೇಶ್ವರ ಸ್ವಾಮಿ ದೇವರ ದರ್ಶನ ಪಡೆದರೆ ಮದುವೆಯಾಗದಿದ್ದವರಿಗೆ ಕಂಕಣ ಭಾಗ್ಯ ಹಾಗೂ ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಪ್ರಾಪ್ತ ವಾಗಲಿದೆ ಎಂಬುದು ಇಲ್ಲಿಗೆ ಬರುವ ಭಕ್ತರ ಅಚಲ ನಂಬಿಕೆಯಾಗಿದೆ. ಇದರಿಂದ ಈ ನಿಟ್ಟಿನಲ್ಲಿ ಎಲ್ಲ ವರ್ಗದ ಜನ ಇಲ್ಲಿಗೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ. ಮಲ್ಲೇಶ್ವರ ದೇವರ ದರ್ಶನ ಜೊತೆಗೆ ಬೆಟ್ಟದ ತಪ್ಪಲಿನಲ್ಲಿರುವ ಹೇಮಗಿರಿ ವರದರಾಜಸ್ವಾಮಿ ಹಾಗೂ ಇನ್ನೊಂದು ಭಾಗದಲ್ಲಿರುವ ಒಡೆ ಬೈರವೇಶ್ವರ ಸ್ವಾಮಿ ದರ್ಶನವನ್ನೂ ಮಾಡಬಹುದು.
ಹೋಗುವ ಮಾರ್ಗ: ಕುಣಿಗಲ್‌ನಿಂದ 22 ಕಿ.ಮೀ ಹುಲಿಯೂರು ದುರ್ಗ ಅಲ್ಲಿಂದ ಕೇವಲ 4 ಕಿ.ಮೀ ದೂರ ಹೇಮಗಿರಿ ಬೆಟ್ಟ ತಲುಪಬಹುದು. ಬೆಟ್ಟಕ್ಕೆ ಭಕ್ತರು ಸರಾಗವಾಗಿ ಹತ್ತಲು ಹಾಗೂ ಬೆಟ್ಟದ ಮೇಲೆ ಮೂಲಸೌಕರ್ಯ ಸರ್ಕಾರ ಕಲ್ಪಿಸಿದರೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬಂದು ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ.
ಹೇಮಗಿರಿ ಬೆಟ್ಟದಲ್ಲಿರುವ ಮಲ್ಲೇಶ್ವರಸ್ವಾಮಿ ಬೆಟ್ಟದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಗೆ 4 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ನಾಡಪ್ರಭು ಕೆಂಪೇಗೌಡ ಅಳ್ವಿಕೆಯ ಕೋಟಿ ಹಾಗೂ ರಹಸ್ಯ ಸುರಂಗ ಮಾರ್ಗಗಳೂ ಇವೆ. –ಗಿರಿಗೌಡ, ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಣಿಗಲ್
– ಕೆ.ಎನ್.ಲೋಕೇಶ್