ಪರಶುರಾಂಪುರ: ಕಾಡುಗೊಲ್ಲ-ಮ್ಯಾಸಬೇಡ ಬುಡಕಟ್ಟು ಜನರು ತಮ್ಮದೇ ಆಚಾರ ವಿಚಾರ ಹಾಗೂ ಶ್ರೀಮಂತಸಂಸ್ಕೃತಿ ಹೊಂದಿದ್ದಾರೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.
ಗ್ರಾಮದ ಬಸ್ ನಿಲ್ದಾಣ ಬಳಿಯ ಕರಡೇರಗೊಲ್ಲರಹಟ್ಟಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಜನರ ತವರೂರು. ಬುಡಕಟ್ಟು ಜನರು ವರ್ಷ, ಐದು ವರ್ಷಕ್ಕೊಮ್ಮೆ ತಮ್ಮ ಕುಲದೇವರುಗಳ ಉತ್ಸವ ನೆರವೇರಿಸುತ್ತಿರುವುದು ಉತ್ತಮ ಪರಂಪರೆ. ಕೇವಲ ಉತ್ಸವ ಆಚರಿಸಿದರೆ ಸಾಲದು, ಅನಾದಿ ಕಾಲದ ಸಾಂಸ್ಕೃತಿಕ ವೀರರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜನವಸತಿ ಪ್ರದೇಶದ ಶಾಲಾ-ಕಾಲೇಜುಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ದೇವಸ್ಥಾನ ಸಮಿತಿ ಪದಾಧಿಕಾರಿ ಕೆ. ಓಬಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಚಳ್ಳಕೆರೆ ಕ್ಷೇತ್ರದ ಶಾಸಕರು ಗೊಲ್ಲರಹಟ್ಟಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಈ ಮೂಲಕ ನಮ್ಮ ಐತಿಹಾಸಿಕ ನೆಲೆಗಳು ಮತ್ತು ಸಾಸ್ಕೃತಿಕ ವೀರರ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ನೆರವು ನೀಡಬೇಕು ಎಂದರು.
ಗ್ರಾಪಂ ಸದಸ್ಯ ದೊಡ್ಡಗೊಲ್ಲರಹಟ್ಟಿ ಕೃಷ್ಣಪ್ಪ ಮಾತನಾಡಿ, ಕರಡೇರ ಗೊಲ್ಲರ ಗುಡಿಕಟ್ಟೆಯ ಅಣ್ಣ ತಮ್ಮಂದಿರ ಮತ್ತು ನೆಂಟರಿಷ್ಟರ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗಲು ಗ್ರಾಮದ ದೇವಸ್ಥಾನ ಹಾಗೂ ಕರಿಯಣ್ಣನ ಮರಡಿಗೆ ಸುತ್ತಲೂ ಕಾಂಪೌಂಡ್, ಮೂಲ ಸೌಕರ್ಯ ಒದಗಿಸಿಕೊಡಬೇಕು. ಹೋಬಳಿ ಕೇಂದ್ರದಲ್ಲಿ ಎರಡು ಎಕರೆ ಸರ್ಕಾರಿ ಭೂಮಿಯನ್ನು ಗೊಲ್ಲರಿಗೆ ನೀಡಬೇಕು. ಗೊಲ್ಲ ಸಮುದಾಯದವರಿಗೆ ಕಲ್ಯಾಣಮಂಟಪ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದರು.
ಕರ್ನಾಟಕ ಹಾಗೂ ಆಂಧ್ರಪ್ರದೇಶದಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಉಂಡೆ ಮಂಡೆ, ಕಾಣಿಕೆ, ಧನ ಕನಕಗಳನ್ನು ದೇವರಿಗೆ ಅರ್ಪಿಸಿದರು. ಹರಕೆ ಹೊತ್ತ ಭಕ್ತರು ಕರಿಕಂಬಳಿ ಹಾಸಿ ಬಾಳೆಹಣ್ಣು, ಸಕ್ಕರೆ, ತುಪ್ಪದ ಮಿಶ್ರಣ ಮಾಡಿ ಮಣೇವು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಟ್ಟಿಗೌಡ ಬೋರಪ್ಪ, ಯಜಮಾನ ಈರಣ್ಣ, ಗ್ರಾಪಂ ಅಧ್ಯಕ್ಷರಾದ ಚೌಳೂರು ಚಿಕ್ಕಣ್ಣ, ಅನಿತಾ ವೆಂಕಟೇಶ, ಜಿಪಂ ಮಾಜಿ ಸದಸ್ಯ ಆರ್. ರಂಗಸ್ವಾಮಿ, ಎಸ್. ಚನ್ನಕೇಶವ, ರುದ್ರೇಶ, ಚಿತ್ತಪ್ಪ, ಗ್ರಾಪಂ ಸದಸ್ಯರಾದ ಕೃಷ್ಣಪ್ಪ, ಸರೋಜಾ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.