ತುಮಕೂರು: ಸಾಮಾಜಿಕ, ಆರ್ಥಿಕ, ಶೈಕ್ಷಣಿವಾಗಿ ಅತಿ ಹಿಂದುಳಿದ ಸಮುದಾಯವಾಗಿರುವ ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿರುವ ಸಿಎಂ ಬಿಎಸ್‌ವೈ ಈ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎನ್ನುವುದು ಎಲ್ಲರ ಒತ್ತಾಯವಾಗಿದೆ, ಅದು ಸರ್ಕಾರದ ಚಿಂತನೆಯಲ್ಲಿದೆ ಎಂದು ಬಿಜಿಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಹೇಳಿದರು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಬುಧವಾರ ರಾಜ್ಯ ಕಾಡು ಗೊಲ್ಲ ಯುವಸೇನೆ, ಗೊಲ್ಲ ಸಮುದಾಯದ ಮುಖಂಡರಿಂದ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರಕ್ಕ ಹಾಲಿನ ಅಭಿಷೇಕ ಸಮಾರಂಭದಲ್ಲಿ ಮಾತನಾಡಿದರು.
ಸಮುದಾಯಕ್ಕೆ ವಿಶೇಷ ಸೌಲಭ್ಯ ನೀಡಿ: ಈ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಾಡಿರುವ ಮುಖ್ಯಮಂತ್ರಿಯವರಿಗೆ ಸಮಸ್ತ ಕರ್ನಾಟಕ ಕಾಡುಗೊಲ್ಲರ ಪರವಾಗಿಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಕಾಡುಗೊಲ್ಲರು ಸಮುದಾಯವನ್ನು ಎಸ್.ಟಿಗೆ ಸೇರಿಸಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡುವಂತೆ ಹಾಗೆ ಸಮುದಾಯಕ್ಕೆ ವಿಶೇಷ ಸೌಲಭ್ಯ ನೀಡುವಂತೆ ಬಹುದಿನದ ಒತ್ತಾಯ ಮಾಡಿಕೊಂಡು ಬಂದಿದ್ದರು, ಕಾಡುಗೊಲ್ಲರ ಧ್ವನಿಯನ್ನು ಮನಗಂಡ ಸಿಎಂ ಬಿ.ಎಸ್.ಯಡಿಯೂರಪ್ಪರವರು ನಿನ್ನೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಮಾಡಿ, ನಿಗಮಕ್ಕೆ 50 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕೊಟ್ಟ ಮಾತು ಉಳಿಸಿಕೊಂಡ ಸಿಎಂ: ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ಕಾಡುಗೊಲ್ಲ ಸಮುದಾಯದವರು ಹಾಗೂ ಸಂಘದವರು ಬಹಳ ದಿನಗಳಿಂದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡುವಂತೆ ಒತ್ತಾಯ ಮಾಡಲಾಗುತ್ತಿತ್ತು, ಕಾಡುಗೊಲ್ಲರ ಮನವಿಯನ್ನು ಮನಗಂಡು ಬಿ.ಎಸ್.ವೈ ಚಿತ್ರದುರ್ಗದ ಹೊಳಲ್ಕೆರೆ ಕ್ಷೇತ್ರದಲ್ಲಿ ಪರಿವರ್ತನ ಯಾತ್ರೆ ಮಾಡುವಾಗ ಕಾಡುಗೊಲ್ಲ ಜನಾಂಗಕ್ಕೆ ಅಭಿವೃದ್ಧಿ ನಿಗಮ ಮಾಡುವುದಾಗಿ ಭರವಸೆಕೊಟ್ಟಿದ್ದರು, ಅದರಂತೆ ಮಂಗಳವಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡುವ ಮೂಲಕ ಸಮುದಾಯಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಹಿರಿಯರಲ್ಲಿ ಮನವಿ: ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯ ಪ್ರಯುಕ್ತ ಜಿಲ್ಲಾಧ್ಯಕ್ಷ ಬಿ. ಸುರೇಶ್‌ಗೌಡ ಹಾಗೂ ಹಿಂದುಳಿದ ಮೋರ್ಚಾದ ರವಿಕುಮಾರ್‌ಜೀ ಅವರ ಜೊತೆಗೆ ಶಿರಾ ತಾಲೂಕಿನ ಪ್ರತಿಯೊಂದು ಹಳ್ಳಿ, ಹಳ್ಳಿಗೂ ಹೋಗಿ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಕಾಡುಗೊಲ್ಲರಿಗೂ ಒಂದು ಅವಕಾಶ ಕೊಡಿ ಎಂದು ಪಕ್ಷದ ಹಿರಿಯರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರ ತೀರ್ಮಾನದಂತೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಮುದಾಯವನ್ನು ಎಸ್ಟಿಗೆ ಸೇರಿಸಿ: ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ, ಚಿತ್ರ ದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು ಸೇರಿದಂತೆ ಹಲವು ಕಡೆ ಕಾಡುಗೊಲ್ಲ ಸಮುದಾಯದವರು ಹೆಚ್ಚು ಸಂಖ್ಯೆಯಲ್ಲಿದ್ದು ಕುರಿ ಹಾಗೂ ಪಶುಗಳನ್ನು ಸಾಕಿಕೊಂಡು ಬದುಕು ನಡೆಸುತ್ತಿದ್ದೇವೆ, ನಮ್ಮ ಸಮುದಾಯದ ಸಂಕಷ್ಟ ಅರಿತಿರುವ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪರವರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡುವ ಮೂಲಕ ಸಮುದಾಯ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್.ಟಿಗೆ ಸೇರಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಹಾಗೂ ಸಂಸದ ಜಿ.ಎಸ್ ಬಸವರಾಜುರವನ್ನು ಅಭಿನಂದಿಸಲಾಯಿತು.
ಸಮುದಾಯದ ಮುಖಂಡ ಡಾ.ಶಿವಕುಮಾರಸ್ವಾಮಿ, ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಚಂದ್ರಶೇಖರ್, ರಾಜ್ಯ ಕಾಡುಗೊಲ್ಲ ಯುವಸೇನೆಯ ರಾಜ್ಯಧ್ಯಕ್ಷ ರಮೇಶ್, ಜಿಲ್ಲಾಧ್ಯಕ್ಷ ಜಯಕೃಷ್ಣ, ಎಪಿಎಂಸಿಉಪಾಧ್ಯಕ್ಷ ಶಿವರಾಜು, ಶಿರಾಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಬಿಜೆಪಿ ಮುಖಂಡ ಎಸ್.ಆರ್ ಗೌಡ, ಜಿಪಂ ಸದಸ್ಯೆ ಯಶೋಧಮ್ಮ, ಜೆ.ಜಗದೀಶ್ ಡಾ.ಶಿವಕುಮಾರ ಸ್ವಾಮಿ ಇತರರು ಇದ್ದರು.