Advertisement

ಕದ್ರಿ: ಮರ ಉಳಿಸಲು ‘ವೃಕ್ಷ  ಬಂಧನ್‌’

01:40 PM Feb 12, 2018 | |

ಮಹಾನಗರ : ನಗರದ ಕದ್ರಿಯ ಸಿಟಿ ಆಸ್ಪತ್ರೆ ಮುಂಭಾಗದ ರಸ್ತೆ ಬದಿಯಲ್ಲಿರುವ ರಸ್ತೆ ವಿಸ್ತರಣೆ ಹೆಸರಿನಲ್ಲಿ ಮರಗಳನ್ನು ಕಡಿಯುವುದನ್ನು ಪ್ರತಿಭಟಿಸಿ ಹಾಗೂ ಮರಗಳನ್ನು ಉಳಿಸಬೇಕು ಎಂದ ಆಗ್ರಹಿಸಿ ಎನ್‌ಇಸಿಎಫ್‌ (ರಾಷ್ಟ್ರೀಯ ಪರಿಸರ ಸಂಕ್ಷರಣಾ ಒಕ್ಕೂಟ) ಮಂಗಳೂರು ನೇತೃತ್ವದಲ್ಲಿ ಪರಿಸರಾಸಕ್ತರು ಮತ್ತು ನಾಗರಿಕರಿಂದ ಕದ್ರಿಯಲ್ಲಿ ‘ವೃಕ್ಷ ಬಂಧನ್‌’ ಕಾರ್ಯಕ್ರಮ ನಡೆಯಿತು.

Advertisement

ಸಿಟಿ ಆಸ್ಪತ್ರೆ ರಸ್ತೆಯಲ್ಲಿರುವ ದೇವದಾರು ಹಾಗೂ ಪೆಲ್ಟಾಪಾರಂ ಮರಗಳಿಗೆ ಪ್ರತಿಭಟನಗಾರರು ಸಾಮೂಹಿಕವಾಗಿ ವಿವಿಧ ಬಣ್ಣಗಳ ರಿಬ್ಬನ್‌ಗಳನ್ನು ಕಟ್ಟಿ ವೃಕ್ಷ ಬಂಧನ್‌ ನಡೆಸಿ ಯಾವುದೇ ಕಾರಣಕ್ಕೂ ಈ ಮರಗಳನ್ನು ಕಡಿಯಲು ಬಿಡುವುದಿಲ್ಲ ಮತ್ತು ಇದನ್ನು ರಕ್ಷಿಸುತ್ತೇವೆ ಎಂದು ಎಚ್ಚರಿಸಿದರು.

ಪರಿಸರಕ್ಕೆ ಧಕ್ಕೆ
ಎನ್‌ಇಸಿಎಫ್‌ ಕಾನೂನು ಸಲಹೆಗಾರ್ತಿ ಸುಮಾ ನಾಯಕ್‌ ಅವರು ಮಾತನಾಡಿ, ಇಲ್ಲಿ ಹಲವಾರು ವರ್ಷಗಳಿಂದ ಈ ಮರಗಳು ಇವೆ. ಈ ಮರಗಳಿಂದ ರಸ್ತೆ ವಿಸ್ತರಣೆ ಅಥವಾ ಚರಂಡಿ ಕಾಮಗಾರಿಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಆದರೂ ಇಲ್ಲಿನ ಜನಪ್ರತಿನಿಧಿಗಳು ಯಾರಿಗೋ ಲಾಭ ಮಾಡಿಕೊಡುವ ಉದ್ದೇಶದಿಂದ ಅವುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಕಡಿಯಲು ಹೊರಟಿದ್ದಾರೆ ಎಂದು ಹೇಳಿದರು.

ನಾವು ಯಾರೂ ಕೂಡ ಅಭಿವೃದ್ಧಿಗೆ ವಿರೋಧಿಗಳಲ್ಲ . ಆದರೆ ಈ ರೀತಿಯಾಗಿ ಮರಗಳನ್ನು ನಾಶಮಾಡಿ ಪರಿಸರಕ್ಕೆ ಧಕ್ಕೆ ತರುವುದನ್ನು ವಿರೋಧಿಸುತ್ತೇವೆ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ನಾಶ
ಎನ್‌ಇಸಿಎಫ್‌ ಮುಖಂಡ ಶಶಿಧರ ಶೆಟ್ಟಿ ಮಾತನಾಡಿ, ಸ್ಮಾರ್ಟ್‌ ನಗರದ ಹೆಸರಿನಲ್ಲಿ ಮಂಗಳೂರನ್ನು ಸ್ಮಾರಕ
ಸಿಟಿಯಾಗಿ ಮಾಡಲು ಇಲ್ಲಿ ಆಡಳಿತ ವ್ಯವಸ್ಥೆ ಹೊರಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅನಾವಶ್ಯಕವಾಗಿ ಮರಗಳನ್ನು
ಕಡಿದು ನಾಶ ಮಾಡಲಾಗುತ್ತಿದೆ. ಈಗಾಗಲೇ ನಗರದಲ್ಲಿ ಲಕ್ಷಾಂತರ ಮರಗಳು ನಾಶವಾಗಿವೆ ಎಂದು ಹೇಳಿದರು.

Advertisement

ಮನಪಾ ಗ್ರೀನ್‌ ಸೆಸ್‌ ರೂಪದಲ್ಲಿ ಸಂಗ್ರಹಿಸುತ್ತಿರುವ ಕೋಟ್ಯಾಂತರ ರೂ. ನಗರದಲ್ಲಿ ಹಸಿರುಕರಣ ಉದ್ದೇಶಕ್ಕೆ
ಬಳಕೆ ಮಾಡದೆ ಇತರ ಉದ್ದೇಶಗಳಿಗೆ ವರ್ಗಾಯಿಸುತ್ತಿದೆ ಎಂದರು. ಇದೀಗ ಕದ್ರಿ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ
ಮರಗಳನ್ನು ಕಡಿಯಲು ಮನಪಾ ಮುಂದಾಗಿದೆ. ಇದಕ್ಕೆ ಚರಂಡಿ ಕಾಮಗಾರಿಯ ಕಾರಣ ನೀಡಲಾಗುತ್ತಿದೆ. ಚರಂಡಿ ಕಾಮಗಾರಿಯನ್ನು ಮರಗಳನ್ನು ಕಡಿಯದೆ ಕೈಗೊಳ್ಳಲು ಅವಕಾಶವಿದೆ ಎಂದರು. ಎನ್‌ಇಸಿಎಫ್‌ ಮುಖಂಡರಾದ ಡ್ಯಾನಿಯಲ್‌, ಅನಿತಾ ಭಂಡಾರ್‌ಕಾರ್‌, ರೋಹಿಣಿ, ವಂ| ವಾಟ್ಸಾನ್‌, ಜೀತು ಮಿಲಾನಿ, ಪಿಯುಸಿಎಲ್‌ನ ಪಿ.ಬಿ. ಡೇಸಾ
ಮತ್ತಿತರರು ಉಪಸ್ಥಿತರಿದ್ದರು.

ಹಮ್‌ ಲಡೇಂಗೆ.. ಹಮ್‌ ಜೀತೇಂಗೆ..
ಪ್ರತಿಭಟನಕಾರರು ‘ಉಳಿಸಿ ಉಳಿಸಿ ಮರಗಳನ್ನು ಉಳಿಸಿ.. ಹಮ್‌ ಲಡೇಂಗೆ..ಹಮ್‌ ಜೀತೇಂಗೆ…’ ಘೋಷಣೆಗಳನ್ನು ಕೂಗಿದರು. ಮರಗಳನ್ನು ಕಡಿಯಲು ಮುಂದಾಗಿರುವುದನ್ನು ಈಗಾಗಲೇ ಅರಣ್ಯ ಸಚಿವ ಬಿ. ರಮಾನಾಥ ರೈ ಅವರ ಗಮನಕ್ಕೆ ತಂದು ಈ ಮರಗಳನ್ನು ಉಳಿಸುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿರುವ ಸಚಿವರು, ಮರಗಳನ್ನು ಕಡಿಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಎನ್‌ಇಸಿಎಫ್‌ ಮುಖಂಡ ಶಶಿಧರ ಶೆಟ್ಟಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next