Advertisement

ಪಾಳು ಬಿದ್ದ ಕದ್ರಿ ಸ್ಕೇಟಿಂಗ್‌ ರಿಂಕ್‌ !

05:20 PM Feb 11, 2022 | Team Udayavani |

ನಂತೂರು: ಪ್ರವೇಶ ದ್ವಾರದಲ್ಲಿ ಪೈಪ್‌ಗ್ಳ ರಾಶಿ, ಸದಾ ತೆರೆದ ಕಬ್ಬಿಣದ ಗೇಟ್‌, ಒಳ ಪ್ರವೇಶಿಸಿದರೆ ದುರ್ನಾತ, ಕಟಾವು ಮಾಡದೇ ಇರುವ ಹುಲ್ಲು, ಬಿಯರ್‌, ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಸುತ್ತಲೂ ಗಿಡ ಗಂಟಿ-ತೆರಿಗೆ ಹಣ ಖರ್ಚು ಮಾಡಿ ಕೆಲವು ವರ್ಷಗಳ ಹಿಂದೆ ನಂತೂರು ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿರ್ಮಾಣಗೊಂಡ ಕದ್ರಿ ಸ್ಕೇಟಿಂಗ್‌ ರಿಂಕ್‌ ಪ್ರದೇಶದ ಸದ್ಯದ ಸ್ಥಿತಿ.

Advertisement

ಮಕ್ಕಳ ಸ್ಕೇಟಿಂಗ್‌ಗಾಗಿ ನಿರ್ಮಿ ಸಿದ ಸ್ಕೇಟಿಂಗ್‌ ರಿಂಕ್‌ ಪ್ರದೇಶದ ಅಭಿವೃದ್ಧಿಯತ್ತ ಯಾವುದೇ ಜನ ಪ್ರತಿನಿಧಿಗಳು, ಇಲಾಖೆಗಳು ಮನಸ್ಸು ಮಾಡಿಲ್ಲ. ಪರಿಣಾಮ ಈ ಪ್ರದೇಶವೀಗ ಪಾಳು ಬಿದ್ದಿದೆ. ಸ್ಕೇಟಿಂಗ್‌ ರಿಂಕ್‌ ಪ್ರವೇಶಕ್ಕೆ ಇರುವಂತ ಗೇಟ್‌ ಹಲವು ತಿಂಗಳುಗಳಿಂದ ತೆರೆದ ಸ್ಥಿತಿಯಲ್ಲಿದೆ. ಮಾಹಿತಿ ಫಲಕವೂ ಕಾಣೆಯಾಗಿದ್ದು ಅದನ್ನು ಜೋಡಿಸುವ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ವಿದ್ಯುತ್‌ ಕಂಬದ ಬಾಕ್ಸ್‌ ತೆರೆದ ಸ್ಥಿತಿಯಲ್ಲಿದ್ದು, ತಂತಿಗಳು ನೇತಾಡುತ್ತಿವೆ. ಆಸನಗಳೂ ಹಾಳಾಗಿವೆ. ಸುತ್ತಲೂ ಗಿಡಗಂಟಿ ಬೆಳೆದಿದೆ.

ಮಂಗಳೂರಿನಲ್ಲಿ ಸ್ಕೇಟಿಂಗ್‌ ತರಬೇತಿಗೆ ಸುಸಜ್ಜಿತ ರಿಂಕ್‌ ಆವಶ್ಯಕತೆ ಇದೆ ಎಂದು ರೋಲರ್‌ ಸ್ಕೇಟಿಂಗ್‌ ಕ್ಲಬ್‌ನ ಮಹೇಶ್‌ ಕುಮಾರ್‌ ನೇತೃತ್ವದಲ್ಲಿ 2007ರಲ್ಲಿ ತೋಟಗಾರಿಕೆ ಇಲಾಖೆಗೆ ಮನವಿ ಮಾಡಲಾಗಿತ್ತು. 2008ರ ಬಳಿಕ ಕಾಮಗಾರಿ ಆರಂಭವಾಗಿ, ಕುಂಟುತ್ತಾ ಸಾಗಿದ ಕಾಮಗಾರಿ 2011ರಲ್ಲಿ ಪೂರ್ಣಗೊಂಡಿತ್ತು. ಮೆಸ್ಕಾಂ ಸಹಾಯದಿಂದ 12 ಲಕ್ಷ ರೂ., ಕ್ಲಬ್‌ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ರಿಂಕ್‌ ನಿರ್ಮಿಸಲಾಗಿತ್ತು. ಇಲ್ಲಿ ಈಗಾಗಲೇ ಜಿಲ್ಲಾ ಮಟ್ಟದ, ಶಾಲಾ ವಲಯದ ಅನೇಕ ಸ್ಕೇಟಿಂಗ್‌ ಪಂದ್ಯಾಟಗಳು ನಡೆದಿವೆ. ಆದರೆ ಸದ್ಯ ರಿಂಕ್‌ ಪ್ರದೇಶಕ್ಕೆ ಕಲ್ಲಿನ ಚಪ್ಪಡಿ ಹಾಕಲಾಗಿದೆ.

ತುಂಡಾದ ಗೇಟಿಗೆ ಭಧ್ರವಾದ ಬೀಗ !
ಪ್ರವೇಶ ದ್ವಾರದಲ್ಲಿನ ದೊಡ್ಡ ಗೇಟ್‌ ತುಕ್ಕು ಹಿಡಿದಿದೆ. ವಿಶೇಷವೆಂದರೆ, ತುಂಡಾದ ಗೇಟ್‌ಗೆ ಬೀಗ ಜಡಿಯಲಾಗಿದೆ. ಹಾಗಾಗಿ ದಿನದ 24 ಗಂಟೆಯೂ ಗೇಟು ತೆರೆದೇ ಇರುತ್ತದೆ. ಕೆಲವು ಸಮಯ ಹಿಂದೆ ರಿಂಕ್‌ ಪ್ರವೇಶಕ್ಕೆ ಗೇಟ್‌ ಇರಲಿಲ್ಲ. ಸಚಿವರಾಗಿದ್ದ ಸಿ.ಪಿ. ಯೋಗೇಶ್ವರ್‌ ಅವರು ಪರಿಶೀಲನೆಗೆ ಆಗಮಿಸುವ ವೇಳೆ ತರಾತುರಿಯಲ್ಲಿ ಕೆಲವೊಂದು ಮೂಲ ಸೌಕರ್ಯ ಒದಗಿಸಲಾಗಿತ್ತು. ಆದರೆ ಆ ಬಳಿಕ ಇಲ್ಲಿನ ಅಭಿವೃದ್ಧಿಗೆ ಯಾರೂ ಮುಂದಾಗಿಲ್ಲ.

ಭರವಸೆ ಈಡೇರಿಲ್ಲ
ಈ ಪ್ರದೇಶ ಸುಮಾರು 3 ಎಕರೆಗೂ ಹೆಚ್ಚಿದೆ. ಒಂದು ಮಗ್ಗುಲಲ್ಲಿ ಸ್ಕೇಟಿಂಗ್‌ ರಿಂಕ್‌ ಇದ್ದು, ಉಳಿದ ಪ್ರದೇಶ ಪೊದೆ, ಹುಲ್ಲು, ಗಿಡ-ಬಳ್ಳಿಗಳಿಂದ ಕೂಡಿದೆ. ಇದರ ಅಭಿವೃದ್ಧಿಗೆ ಹಲವು ಭರವಸೆಗಳು ಬಂದರೂ ಯಾವುದೂ ಕಾರ್ಯಗತ ಗೊಂಡಿಲ್ಲ. ಇದೇ ಪ್ರದೇಶದಲ್ಲಿ ಹೆಲಿಪ್ಯಾಡ್‌ ನಿರ್ಮಾಣದ ಪ್ರಸ್ತಾವನೆ ಇತ್ತು. ಅಂದಿನ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ. ಯೋಗೇಶ್ವರ್‌ ಸ್ಥಳ ಪರಿಶೀಲಿಸಿದ್ದರು. ಆದರೆ ಪಕ್ಕದ ಮೇರಿಹಿಲ್‌ನಲ್ಲಿ ಹೆಲಿಪ್ಯಾಡ್‌ ಇರುವ ಕಾರಣ ಈ ಪ್ರಸ್ತಾವ ಕೈಬಿಡಲಾಯಿತು. ಬಳಿಕ ಈ ಮಕ್ಕಳ ಆಟ, ಹಿರಿಯರ ವಾಕಿಂಗ್‌, ವಿಶ್ರಾಂತಿಗೆಂದು ಸಣ್ಣ ಪಾರ್ಕ್‌ ಮಾಡುವ ಉದ್ದೇಶ ಇತ್ತಾದರೂ ಸಾಕಾರಗೊಂಡಿಲ್ಲ. ಇದೀಗ ಸುತ್ತಲಿನ ಎರಡೂ ಪಾರ್ಕ್‌ (ಕದ್ರಿ) ಸೇರಿ ಸ್ಕೇಟಿಂಗ್‌ ರಿಂಕ್‌ ಪ್ರದೇಶದ ಅಭಿವೃದ್ಧಿಗೆ ಮುಡಾ ತಯಾರಿ ನಡೆಸುತ್ತಿದೆ. ಇನ್ನೂ ಅಂತಿಮಗೊಂಡಿಲ್ಲ.

Advertisement

ಅಭಿವೃದ್ಧಿಗೆ ಕ್ರಮ
ಸ್ಕೇಟಿಂಗ್‌ ಕ್ರೀಡಾಂಗಣವನ್ನು ಸದ್ಬಳಕೆ ಮಾಡಲು ಮೂರು ಬಾರಿ ಟೆಂಡರ್‌ ಕರೆಯಲಾಗಿದೆ. ಯಾರೂ ಮುಂದೆ ಬಂದಿಲ್ಲ. ಇದರ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಲಿದೆ.
– ಜಾನಕಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next