Advertisement
ಮಂಗಳೂರು ಸನಿಹದ ಕದ್ರಿ ಮಂಜುನಾಥನ ಮಹಿಮೆ ಬಗ್ಗೆ ಕೇಳದವರಿಲ್ಲ. ಭಕ್ತಕೋಟಿಗಳ ಇಷ್ಟಾರ್ಥ ಸಿದ್ಧಿಗೆ ಹೆಸರುವಾಸಿಯಾದ ದಿವ್ಯಕ್ಷೇತ್ರವಿದು. ಸಹ್ಯಾದ್ರಿ ಶ್ರೇಣಿಯಿಂದ 10 ಯೋಜನಾ ದೂರದಲ್ಲಿರುವ “ಕದಳಿವನ’ವು ನಂತರದಲ್ಲಿ “ಕದಲಿ’ ಆಗಿ, ಈಗ ಕದ್ರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಎನ್ನಲಾಗುತ್ತದೆ. ಇಲ್ಲಿನ ಮಂಜುನಾಥನ ದೇಗುಲವನ್ನು ವಿಶ್ವಕರ್ಮರ ನೆರವಿನಿಂದ ಕಟ್ಟಲಾಗಿದೆ ಎಂದೇ ಭಕ್ತರು ನಂಬಿದ್ದಾರೆ.
ಇಲ್ಲಿ ಪ್ರತಿನಿತ್ಯ ಸುಮಾರು 1500 ಸದ್ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಸಮೀಪದ ಶಾಲೆಗಳ ವಿದ್ಯಾರ್ಥಿಗಳಿಗೂ ಅನ್ನಪ್ರಸಾದ ಕಲ್ಪಿಸುವ ವ್ಯವಸ್ಥೆ ಇಲ್ಲಿದೆ. ವಿಶೇಷ ದಿನಗಳಂದು, ಶನಿವಾರದಂದು ಅನ್ನ ಪ್ರಸಾದ ಸ್ವೀಕರಿಸುವವರ ಸಂಖ್ಯೆ 3000 ದಾಟುತ್ತದೆ. ಜಾತ್ರೋತ್ಸವದಂದು ಪ್ರತಿದಿನ 15,000 ಭಕ್ತರು, ಭೋಜನಕ್ಕೆ ಸಾಕ್ಷಿಯಾಗುತ್ತಾರೆ.
Related Articles
ಕದ್ರಿಯ ಭೋಜನಶಾಲೆ, ಸುಸಜ್ಜಿತವಾಗಿದೆ. ಆಧುನಿಕ ಸ್ಟೀಮ್ ಕಿಚನ್, ಅಡುಗೆಮನೆಯ ಸಿಬ್ಬಂದಿಯ ಒತ್ತಡವನ್ನು ಆದಷ್ಟೂ ಕಡಿಮೆಮಾಡಿದೆ. ನೈವೇದ್ಯವನ್ನು ಮಾತ್ರ ಸಾಂಪ್ರದಾಯಿಕವಾಗಿಯೇ ತಯಾರಿಸಲಾಗುತ್ತದೆ. ಏಕಕಾಲದಲ್ಲಿ 1000 ಮಂದಿ ಕುಳಿತು, ಊಟ ಸವಿಯುವಷ್ಟು ಭೋಜನಶಾಲೆ ವಿಸ್ತಾರವಿದೆ. ರಾಮಲಕ್ಷ್ಮಣ ಹೆಸರಿನ ಕೊಪ್ಪರಿಗೆಯಲ್ಲಿ ಅನ್ನ ಬೇಯಿಸುವ ಸಂಪ್ರದಾಯ, ಹಲವಾರು ವರ್ಷಗಳಿಂದ ನಡೆದುಕೊಂಡುಬಂದಿದೆ.
Advertisement
ಭಕ್ಷ್ಯ ವಿಶೇಷಇಲ್ಲಿ ಮಂಗಳೂರು ಶೈಲಿಯಲ್ಲಿ ಅಡುಗೆ ಸಿದ್ಧಗೊಳ್ಳುತ್ತದೆ. ಅನ್ನ- ಸಾಂಬಾರು, ಪಾಯಸ, ಪಲ್ಯ ಅಥವಾ ಗೊಜ್ಜು- ನಿತ್ಯ ಅನ್ನಸಂತರ್ಪಣೆಯ ಭಕ್ಷ್ಯಗಳು. ಊಟದ ಸಮಯ
ಕದ್ರಿಯಲ್ಲಿ ಮಧ್ಯಾಹ್ನ ಮಾತ್ರ ಭೋಜನವಿರುತ್ತದೆ. ಮಧ್ಯಾಹ್ನ 1- 2.30ರ ವರೆಗೆ ಅನ್ನಸಂತರ್ಪಣೆ ನಡೆಯುತ್ತದೆ. 365 ದಿನವೂ ಊಟ
ದೇವಳದಲ್ಲಿ ಅನ್ನಸಂತರ್ಪಣೆಯು ವರ್ಷದ 365 ದಿನವೂ ನಡೆಯುತ್ತದೆ. ಏಕಾದಶಿಯಂದೂ ಭೋಜನ ವ್ಯವಸ್ಥೆ ಇರುತ್ತದೆ. 3 ಮಂದಿ ಬಾಣಸಿಗರಿಂದ ಅಡುಗೆ ತಯಾರುಗೊಳ್ಳುತ್ತದೆ. ಸಂಖ್ಯಾ ಸೋಜಿಗ
3- ಬಾಣಸಿಗರಿಂದ ಅಡುಗೆ ತಯಾರಿ
250- ಕಿಲೋ ಅಕ್ಕಿಯಿಂದ ನಿತ್ಯ ಅನ್ನ
1500- ಸದ್ಭಕ್ತರಿಗೆ ನಿತ್ಯ ಅನ್ನಪ್ರಸಾದ
1000- ಮಂದಿಗೆ ಏಕಕಾಲದಲ್ಲಿ ಭೋಜನ
15000- ಭಕ್ತರಿಗೆ ಜಾತ್ರೆ ವೇಳೆ ಊಟ ದೇವಳದಲ್ಲಿ ವರ್ಷದ 365 ದಿನವೂ ಅನ್ನಪ್ರಸಾದ ವಿತರಣೆ ಇರುತ್ತದೆ. ಸಾವಿರಾರು ಭಕ್ತರು ಶುಚಿರುಚಿಯಾದ ಅನ್ನಪ್ರಸಾದವನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತಾರೆ. ಸ್ವಚ್ಛ, ಸುಸಜ್ಜಿತ ಅಡುಗೆ ಕೋಣೆ ಇಲ್ಲಿದೆ.
– ಎಸ್. ಪ್ರದೀಪ್ ಕುಮಾರ ಕಲ್ಕೂರ, ಉಪಾಧ್ಯಕ್ಷರು, ಕದ್ರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಧನ್ಯಾ ಬಾಳೆಕಜೆ
ಚಿತ್ರಗಳು: ಸತೀಶ್ ಇರಾ