Advertisement

Kadri-Mangalore; ಕದ್ರಿಯ ಸ್ಮಾರ್ಟ್‌ ರಸ್ತೆಯಲ್ಲಿ ಫುಡ್‌ ಕೋರ್ಟ್‌ ಖಾಲಿ ಖಾಲಿ!

04:52 PM Aug 10, 2023 | Team Udayavani |

ಮಹಾನಗರ: ಮಂಗಳೂರು ಸ್ಮಾರ್ಟ್‌ ಸಿಟಿ ವತಿಯಿಂದ ನಗರದ ಕದ್ರಿ ಉದ್ಯಾನವನ ರಸ್ತೆ ಹಾಗೂ ಉದ್ಯಾವನದ ಆವರಣದ ಹೊರಗೆ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆದು ಮಾರ್ಚ್‌ ತಿಂಗಳಲ್ಲಿ ಉದ್ಘಾಟನೆಯಾಗಿದೆ. ಆದರೆ ಯೋಜನೆಯಡಿ ನಿರ್ಮಿಸಲಾದ ಫುಡ್‌ ಕೋರ್ಟ್‌ ಆಂಗಡಿಗಳು ಮಾತ್ರ ಇನ್ನೂ ಉಪಯೋಗಕ್ಕೆ ಸಿಗದೆ ಖಾಲಿ ಬಿದ್ದಿವೆ.

Advertisement

ಕದ್ರಿಪಾರ್ಕ್‌ ಆವರಣದ ಚಿತ್ರಣ ಬದಲಾಗಿ ರಸ್ತೆ, ಪರಿಸರಕ್ಕೆ ಸ್ಮಾರ್ಟ್‌ ಲುಕ್‌ ಸಿಕ್ಕಿದೆ. ಆದರೆ ಅವರಣದಲ್ಲಿನ ಅವ್ಯವಸ್ಥೆಗಳು ಮಾತ್ರ ಇನ್ನೂ ಹಿಂದೆ ಇದ್ದಂತೆ ಇದೆ. ರಸ್ತೆ ಬದಿಯಲ್ಲೇ ವಾಹನಗಳ ಪಾರ್ಕಿಂಗ್‌, ತಿಂಡಿ ತಿನಸುಗಳ ಮಾರಾಟ ನಡೆಯುತ್ತಿವೆ. ಇದರಿಂದ ಸ್ಮಾರ್ಟ್‌ ಕಾಮಗಾರಿ ನಡೆದರೂ ಪ್ರಯೋಜನ  ಇಲ್ಲದಂತಾಗಿದೆ. ಸ್ವಚ್ಛತೆಗೂ ಆದ್ಯತೆ ನೀಡಬೇಕಾಗಿದ್ದು, ಮರಗಳು ಹೆಚ್ಚಿರುವುದರಿಂದ ಸಾಕಷ್ಟು ತರಗೆಲೆಗಳು ಬೀಳುತ್ತಿದ್ದು, ಅದನ್ನು ಆಗಿಂದಾಗ್ಗೆ ತೆರವುಗೊಳಿಸಬೇಕಾಗಿದೆ.

ವಹಿವಾಟು ಆರಂಭವಾಗಿಲ್ಲ ರಸ್ತೆ ಅಭಿವೃದ್ಧಿ ಯೋಜನೆ ಯಡಿ 38 ಫುಡ್‌ ಕೋರ್ಟ್‌ ಅಂಗಡಿಗಳು ನಿರ್ಮಿಸಲಾಗಿದೆ. ಈ ಅಂಗಡಿಗಳು ಮಾತ್ರ ಇನ್ನೂ ಹಾಗೇ ಇದ್ದು, ವಹಿವಾಟು ಆರಂಭವಾಗಿಲ್ಲ. ಇದರಿಂದಾಗಿ ಫುಟ್‌ ಪಾತ್‌ ಬದಿಯಲ್ಲಿ ಆಹಾರ ವಸ್ತುಗಳನ್ನು ಮಾರಾಟ ಮಾಡುವುದು ಮುಂದುವರಿದಿದೆ. ಸ್ಮಾರ್ಟ್‌ ಸಿಟಿ ವತಿಯಿಂದ ಈ ಅಂಗಡಿ ಕೋಣೆಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಕೇವಲ ಓರ್ವ ಬಿಡ್ಡುದಾರ ಬಂದ ಹಿನ್ನೆಲೆಯಲ್ಲಿ ಟೆಂಡರ್‌ ರದ್ದುಗೊಂಡಿತ್ತು. ಮರು ಟೆಂಡರ್‌ ಪ್ರಕ್ರಿಯೆ ಒಂದು ತಿಂಗಳೊಳಗೆ ಅಂತಿಮವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಕರಕುಶಲ ವಸ್ತುಗಳ ಮಾರಾಟಕ್ಕೆ ಅವಕಾಶ:
ಫುಡ್‌ಕೋರ್ಟ್‌ ಅಂಗಡಿ ಕೋಣೆಗಳು ಕೇವಲ ತಿಂಡಿ-ತಿನಿಸು, ಆಹಾರ ಖಾದ್ಯಗಳ ಮಾರಾಟಕ್ಕೆ ಸೀಮಿತವಾಗಿರದೆ, ಸ್ಥಳೀಯವಾಗಿರುವ .ತುಳುನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಕರಕುಶಲ ವಸ್ತುಗಳ ಮಾರಾಟಕ್ಕೂ
ಅವಕಾಶವಿದೆ. ಹೊರ ಜಿಲ್ಲೆ, ರಾಜ್ಯಗಳ  ಪ್ರವಾಸಿಗರು ಬರುವಾಗ ಅವರಿಗೆ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ
ಹೊಂದಲಾಗಿದೆ. ಸದ್ಯ ಕದ್ರಿ ಪಾರ್ಕ್‌ ಬಳಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಅಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಕೆಲವರಿಗೆ ಅಂಗಡಿ ಕೋಣೆ ದೊರೆಯಲಿದೆ.

ಏನೆಲ್ಲ ಕಾಮಗಾರಿಗಳು ನಡೆದಿವೆ?
ಕದ್ರಿ ಪಾರ್ಕ್‌ ಉದ್ಯಾನವನ ರಸ್ತೆ ಮತ್ತು ಹೊರ ಆವರಣದ ಸಮಗ್ರ ಅಭಿವೃದ್ಧಿಯನ್ನು ಸುಮಾರು 16 ಕೋ.ಟಿ. ರೂ. ವೆಚ್ಚದಲ್ಲಿ ನಡೆದಿದೆ. 850 ಮೀ. ಉದ್ದದ ಕಾಂಕೀಟ್‌ ರಸ್ತೆ ಎರಡೂ ಬದಿಗಳಲ್ಲಿ ಫುಟ್‌ಪಾತ್‌, ಪಾದಚಾರಿ ಸ್ನೇಹಿ ಕಾಲುದಾರಿಗಳು, ಪರ್ಗೋಲಗಳು, 38 ಫುಡ್‌ ಕೋರ್ಟ್‌ ಅಂಗಡಿಗಳು, ದ್ವಿಚಕ್ರ, ನಾಲ್ಕು ಚಕ್ರವಾಹನ, ಬಸ್‌ಗಳಿಗೆ ಪಾರ್ಕಿಂಗ್‌ ಸ್ಥಳ ಮೊದಲ ಹಂತದಲ್ಲಿ ಕಾಮಗಾರಿಯಲ್ಲಿ ನಡೆದಿವೆ. ಲ್ಯಾಂಡ್‌ ಸ್ಕೇಪಿಂಗ್‌, ನೀರಿನ ವ್ಯವಸ್ಥೆ, ಬೀದಿ ದೀಪ, ಪೋಸ್ಟ್‌ ಟಾಪ್ಸ್‌, ಫÉಡ್‌ ಲೈಟ್ಸ್‌, ಹೈ ಮಾಸ್ಟ್‌ ವ್ಯವಸ್ಥೆ, ಗ್ರಾನೈಟ್‌ ಪರ್ಗೋಲ ಮತ್ತು ಆಸನ ವಸ್ಥೆಗಳನ್ನು ಅಳವಡಿಸುವ ಕಾಮಗಾರಿ ಎರಡನೇ ಹಂತದಲ್ಲಿ ನಡೆದಿವೆ.

Advertisement

ಪ್ರಕ್ರಿಯೆ ನಡೆಯುತ್ತಿದೆ
ಕದ್ರಿ ಪಾರ್ಕ್‌ ಸ್ಮಾರ್ಟ್‌ ರಸ್ತೆಯ ಅಭಿವೃದ್ಧಿ ಕಾಮಗಾರಿ ಈಗಾಗಲೇ ಪೂರ್ಣಗೊಂಡು ಲೋಕಾರ್ಪಣೆಯಾಗಿದೆ. ಇಲ್ಲಿನ ಫುಡ್‌ ಕೋರ್ಟ್‌ಗೆ ಸಂಬಂಧಿಸಿ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಅಂತಿಮವಾಗಲಿದೆ. ಬಳಿಕ ಫುಡ್‌ಕೋರ್ಟ್‌ಗಳಲ್ಲಿ ಮಾತ್ರ ತಿಂಡಿ-ತಿನಸುಗಳ ಮಾರಾಟಕ್ಕೆ ಅವಕಾಶ ಇರಲಿದೆ. ವಾಹನ ಪಾರ್ಕಿಂಗ್‌ ವಿಚಾರವಾಗಿಯೂ
ನಿಯಮ ಬಿಗಿಗೊಳ್ಳಲಿದೆ.

– ಅರುಣ್‌ ಪ್ರಭಾ, ಜನರಲ್‌ ಮ್ಯಾನೇಜರ್‌, ಮಂಗಳೂರು ಸ್ಮಾರ್ಟ್‌ ಸಿಟಿ

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next