Advertisement

ಕದ್ರಿ ಗೋಪಾಲನಾಥ್‌ ಪಾರ್ಥಿವ ಶರೀರದ ಅಂತಿಮ ದರ್ಶನ

10:33 PM Oct 14, 2019 | mahesh |

ಮಹಾನಗರ: ಶುಕ್ರವಾರ ನಿಧನರಾದ ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್‌ ಕಲಾವಿದ ಕದ್ರಿ ಗೋಪಾ ಲನಾಥ್‌ ಅವರ ಪಾರ್ಥಿವ ಶರೀರವನ್ನು ಸೋಮವಾರ ನಗರದ ಪುರಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದಾಗ ಸಾವಿರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಜನಪ್ರತಿನಿಧಿಗಳು, ಕಲಾಭಿಮಾನಿಗಳು, ಕದ್ರಿ ಗೋಪಾಲನಾಥ್‌ ಅವರ ಸಹ ಕಲಾವಿದರು, ಶಿಷ್ಯಂದಿರು, ಅಪಾರ ಅಭಿಮಾನಿಗಳು, ಹಿತೈಷಿಗಳು, ಸಂಗೀತ ಕಲಾ ವಿದರು, ಸ್ನೇಹಿತರು, ಸರಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಬಂದು ಕಂಬನಿ ಮಿಡಿದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ, ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಬಿ., ನಾಗರಾಜ ಶೆಟ್ಟಿ, ಬಿ.ಎ. ಮೊದಿನ್‌ ಬಾವಾ, ಎನ್‌. ಯೋಗೀಶ್‌ ಭಟ್‌, ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌., ಅಸಿಸ್ಟೆಂಟ್‌ ಕಮಿಷನರ್‌ ರವಿಚಂದ್ರ ನಾಯಕ್‌, ತಹಸೀಲ್ದಾರ್‌ ಗುರು ಪ್ರಸಾದ್‌, ಮನಪಾ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಅವರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಮಾಜಿ ಮೇಯರ್‌ಗಳಾದ ಭಾಸ್ಕರ ಮೊಲಿ, ಎಂ. ಶಶಿಧರ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ರಾಜೇಶ್‌, ಡಿ.ಕೆ. ಅಶೋಕ್‌ ಕುಮಾರ್‌, ದೀಪಕ್‌ ಪೂಜಾರಿ, ಉದಯ ಕುಮಾರ್‌ ಶೆಟ್ಟಿ, ನಿತಿನ್‌ ಕುಮಾರ್‌, ರವಿ ಶಂಕರ್‌ ಮಿಜಾರ್‌, ಕಿಶೋರ್‌ ಡಿ. ಶೆಟ್ಟಿ ಶ್ರದ್ಧಾಂಜಲಿ ಅರ್ಪಿಸಿದರು.

ಕಲಾವಿದರಿಂದ ಅಂತಿಮ ಗೌರವ
ಕದ್ರಿ ಗೋಪಾಲನಾಥ್‌ ಅವರ ಸ್ಯಾಕ್ಸೋಫೋನ್‌ ವಾದನ ಕಛೇರಿಗಳಲ್ಲಿ ಸಾಥ್‌ ನೀಡುತ್ತಿದ್ದ ನಾಲ್ವರು ಕಲಾವಿದರ ಪೈಕಿ ರಾಜೇಂದ್ರ ನಾಕೋಡ್‌ (ತಬಲಾ) ಮತ್ತು ಬಿ. ರಾಜಶೇಖರ್‌ (ಮೋರ್ಸಿಂಗ್‌) ಅವರು ಉಪಸ್ಥಿತರಿದ್ದು ತಮ್ಮ ಗುರುಗಳಿಗೆ ಅಂತಿಮ ಪ್ರಣಾಮ ಸಲ್ಲಿಸಿದರು. ಅಂತಾರಾಷ್ಟ್ರೀಯ ಕ್ಲಾರಿಯೊನೆಟ್‌ ವಾದಕ ನರಸಿಂಹಲು ವಡ ವಾಟಿ ಅವರೂ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಆಕಾಶವಾಣಿ ಕಲಾವಿದರಾದ ರಫೀಕ್‌ ಖಾನ್‌, ತಿರುಚ್ಚಿ ಕೆ.ಆರ್‌. ಕುಮಾರ್‌, ಕೆ.ಎಚ್‌. ರವಿಕುಮಾರ್‌, ಕಲಾವಿದರಾದ ನಾಗೇಶ್‌ ಬಪ್ಪನಾಡು, ಅರ್ಜುನ್‌ ಕಾಪಿಕಾಡ್‌, ಶರ್ಮಿಳಾ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ತಮಿಳು ಚಿತ್ರ ನಟ ಜಾನ್‌ ವಿಜಯ್‌, ಸಂಗೀತ ಕಲಾವಿದರಾದ ಚಂದ್ರಹಾಸ ಉಳ್ಳಾಲ್‌, ಮಚ್ಚೇಂದ್ರನಾಥ್‌, ಸುಕೇಶ್‌ ಕುಮಾರ್‌, ವೇಣುಗೋಪಾಲ್‌, ದಾಮೋದರ್‌, ನಿತ್ಯಾನಂದ, ಪಿ. ಮುರುಗಾನಂದ ಸುಬ್ರಹ್ಮಣ್ಯ, ರಘುನಾಥ ಮೂಡುಬಿದಿರೆ, ಸುರೇಶ್‌ ಮೂಡುಬಿದಿರೆ, ಗಣೇಶ್‌, ಸಿ.ಕೆ. ದಾಮೋದರ್‌, ಚಂದ್ರಶೇಖರ ಪೊಳಲಿ ಅಂತಿಮ ನಮನ ಸಲ್ಲಿಸಿದರು.

ಕಸಾಪ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಡಾ| ಮೋಹನ್‌ ಆಳ್ವ, ನರೇಂದ್ರ ನಾಯಕ್‌, ಮಂಗಳಾದೇವಿ ದೇಗುಲದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್‌, ಹನೀಫ್‌ ಹಾಜಿ ಹಾಗೂ ಪದಾಧಿಕಾರಿಗಳು, ಯುಎಇ ಎಕ್ಸ್‌ ಚೇಂಜ್‌ನ ನಿವೃತ್ತ ಜನರಲ್‌ ಮ್ಯಾನೇಜರ್‌ ಸುಧೀರ್‌ ಕುಮಾರ್‌ ಶೆಟ್ಟಿ , ನಾಗೇಶ್‌ ಎನ್‌.ಜೆ. ಮತ್ತಿತತರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಮೋರ್ಸಿಂಗ್‌ ನುಡಿಸುವವರು ಯಾರೂ ಇಲ್ಲ, ಬನ್ನಿ …
ಚಿನ್ನದ ಕೆಲಸ (ಗೋಲ್ಡ್‌ ಸ್ಮಿತ್‌) ಮಾಡುವವರು ಬೇಕಾದಷ್ಟು ಜನ ಇದ್ದಾರೆ; ಮೋರ್ಸಿಂಗ್‌ ನುಡಿಸುವವರು ಯಾರೂ ಇಲ್ಲ, ಬನ್ನಿ ನನ್ನ ಜತೆ ಎಂದು ನನ್ನನ್ನು ಆಹ್ವಾನಿಸಿ ಪ್ರೋತ್ಸಾಹಿಸಿದವರು ಕದ್ರಿ ಗೋಪಾಲನಾಥ್‌ ಎಂದು 30 ವರ್ಷಗಳಿಂದ ಗೋಪಾಲನಾಥ್‌ ಜತೆ ಮೋರ್ಸಿಂಗ್‌ನಲ್ಲಿ ಸಾಥ್‌ ನೀಡುತ್ತಿದ್ದ ಬೆಂಗಳೂರಿನ ಬಿ. ರಾಜಶೇಖರ್‌ ನೆನಪಿಸಿದರು.

1989 ಜುಲೈ ತಿಂಗಳಲ್ಲಿ ಕೇರಳದ ತ್ರಿಶೂರ್‌ನಲ್ಲಿ ತ್ಯಾಗರಾಜ ಉತ್ಸವದಲ್ಲಿ ನಾನು ಕಾರ್ಯಕ್ರಮ ನೀಡಲು ಹೋಗಿದ್ದೆ. ಕದ್ರಿ ಗೋಪಾಲನಾಥ್‌ ಅವರೂ ಬಂದಿದ್ದರು. ಅಲ್ಲಿ ನನಗೆ ಅವರ ಪರಿಚಯವಾಯಿತು. ನಾನು ಚಿನ್ನದ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದಾಗ, ಚಿನ್ನದ ಕೆಲಸ ಬಿಟ್ಟು ನನಗೆ ಮೋರ್ಸಿಂಗ್‌ನಲ್ಲಿ ಸಾಥ್‌ ನೀಡಲು ಬನ್ನಿ ಎಂದು ಕರೆದರು ಎಂದು ಅವರು ನೆನಪಿಸಿದರು.

ಇಂಡಿಯನ್‌ ಮೈಕಲ್‌ ಜಾಕ್ಸನ್‌
ಪಾಶ್ಚಾತ್ಯ ಸಂಗೀತದಲ್ಲಿ ಮೈಕಲ್‌ ಜಾಕ್ಸನ್‌ ಪಾಪ್‌ ತಾರೆ ಆಗಿದ್ದರೆ ಸ್ಯಾಕ್ಸೋಫೋನ್‌ ವಾದನದಲ್ಲಿ ಕದ್ರಿ ಗೋಪಾಲನಾಥ್‌ ಅವರು ಇಂಡಿಯನ್‌ ಮೈಕಲ್‌ ಜಾಕ್ಸನ್‌ ಆಗಿದ್ದಾರೆ ಎಂದು ತಮಿಳು ಚಿತ್ರ ನಟ ಜಾನ್‌ ವಿಜಯ್‌ ಬಣ್ಣಿಸಿದರು. ಚೆನ್ನೈನಿಂದ ಮಂಗಳೂರಿಗೆ ಆಗಮಿಸಿದ್ದ ಜಾನ್‌ ವಿಜಯ್‌ ಕದ್ರಿ ಗೋಪಾಲನಾಥ್‌ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ ಬಳಿಕ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ನನಗೂ ಕದ್ರಿ ಗೋಪಾಲನಾಥ್‌ ಅವರಿಗೂ 20 ವರ್ಷಗಳಿಂದ ಪರಿಚಯ. ನನ್ನ ಹಲವು ಸಿನೆಮಾಗಳಿಗೆ ಗೋಪಾಲನಾಥ್‌ ಅವರು ಸಂಗೀತ ಒದಗಿಸಿದ್ದರು. ಸಂಗೀತವೇ ಅವರ ಜೀವಾಳ. ಅವರದು ಸದಾ ನಗುಮುಖ. ಜೋಕುಗಳನ್ನು ಹೇಳಿ ನಮ್ಮನ್ನು ನಗಿಸುತ್ತಿದ್ದರು ಎಂದು ಜಾನ್‌ ವಿಜಯ್‌ ನುಡಿದರು.

ತಾಳ್ಮೆಯಿಂದ ಕಲಿಸುತ್ತಿದ್ದರು
ಕದ್ರಿ ಗೋಪಾಲನಾಥ್‌ ಸದಾ ಬ್ಯುಸಿಯಾಗಿ ಇರುತ್ತಿದ್ದರು. ಆದರು ಈ ಬ್ಯುಸಿಯ ನಡುವೆಯೂ ನನಗೆ ತಾಳ್ಮೆಯಿಂದ ಸ್ಯಾಕ್ಸೋಫೋನ್‌ ವಾದನ ಕಲಿಸುತ್ತಿದ್ದರು ಎಂದು ಗೋಪಾಲನಾಥ್‌ ಅವರ ಶಿಷ್ಯೆ ಸುಬ್ಬಲಕ್ಷ್ಮೀ ಅವರು ಸ್ಮರಿಸಿದರು.

ಸುಬ್ಬಲಕ್ಷ್ಮೀ (ಸ್ಯಾಕ್ಸೋಫೋನ್‌), ಲಕ್ಷ್ಮಣ ಗುರುಪುರ (ತಬ್ಲಿ) ಮತ್ತು ಚಂದ್ರಶೇಖರ ಕಣಂತೂರು (ಕದ್ರಿ ಗೋಪಾಲನಾಥ್‌ ಅವರ ಅಳಿಯ) ಅವರು ಕದ್ರಿ ಗೋಪಾಲನಾಥ್‌ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನೀಡಿದರು.

“ಹುರಿದುಂಬಿಸುತ್ತಿದ್ದರು’
ಸ್ಯಾಕ್ಸೋಫೋನ್‌ ವಾದನ ಕಛೇರಿಗಳಿಗೆ ನಿಗದಿತ ಸಮಯಕ್ಕಿಂತ ಮೊದಲೇ ಹಾಜರಿರುತ್ತಿದ್ದರು. ಅವರು ನಗು ನಗುತ್ತಲೇ ನಮ್ಮನ್ನು ಹುರಿದುಂಬಿಸುತ್ತಿದ್ದರು. ಜತೆಗೆ ಎಲ್ಲರನ್ನೂ ಖುಷಿ ಪಡಿಸುತ್ತಿದ್ದರು ಎಂದು ಕದ್ರಿ ಗೋಪಾಲ್‌ನಾಥ್‌ ಅವರಿಗೆ ತಬಲಾ ಸಾಥ್‌ ನೀಡುತ್ತಿದ್ದ ರಾಜೇಂದ್ರ ನಾಕೋಡ್‌ ನೆನಪಿಸಿದರು.

ಕದ್ರಿ ಗೋಪಾಲನಾಥ್‌ ಸಂಗೀತ ಲೋಕದ ಆದರ್ಶ
ಖ್ಯಾತ ನಾದಸ್ವರ ವಾದಕ ನಾಗೇಶ್‌ ಬಪ್ಪನಾಡು ಉದಯವಾಣಿ ಸುದಿನ ಜತೆ ಮಾತನಾಡಿ, ಸ್ಯಾಕ್ಸೋಫೋನ್‌ ಮೂಲಕ ಕದ್ರಿ ಗೋಪಾಲ್‌ನಾಥ್‌ ಅವರು ರಾಷ್ಟ್ರ-ಅಂತಾರಾಷ್ಟ್ರೀಯ ಲಕ್ಷಾಂತರ ಅಭಿಮಾನಿಗಳನ್ನು ಹಾಗೂ ಸಹಸ್ರಾರು ಶಿಷ್ಯವೃಂದವನ್ನು ಸೃಷ್ಟಿಸಿದ ಮಹಾನ್‌ ಸಾಧಕ. ತನಗಿಂತ ಕಿರಿಯ ಶ್ರೇಣಿಯ ಎಲ್ಲ ಕಲಾವಿದರನ್ನೂ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಿದ್ದ ಕದ್ರಿ ಅವರ ಗುಣ ಎಲ್ಲ ಕಲಾವಿದರಿಗೂ ಆದರ್ಶ. ಸಂಗೀತವೇ ಉಸಿರು ಎಂಬ ಸಾಧನೆಯ ಶಿಖರವೇರಿದ್ದ ಕದ್ರಿ ಗೋಪಾಲ್‌ನಾಥ್‌ ಅವರಿಗೆ ಸರಿಸಾಟಿ ಇನ್ನೊಬ್ಬರಿಲ್ಲ. ಹೀಗಾಗಿ ಕದ್ರಿ ಗೋಪಾಲ್‌ನಾಥ್‌ ಅವರ ಅಗಲುವಿಕೆ ಸ್ಯಾಕ್ಸೋಫೋನ್‌ ಲೋಕಕ್ಕೆ ತುಂಬಲಾರದ ನಷ್ಟ ಎಂದರು.
– ನಾಗೇಶ್‌ ಬಪ್ಪನಾಡು

ಕದ್ರಿ ಗೋಪಾಲನಾಥ್‌ ಸ್ಯಾಕ್ಸೋಫೋನ್‌ ನಿಧಿ
ಕದ್ರಿ ಗೋಪಾಲನಾಥ್‌ ಸ್ಯಾಕ್ಸೋಫೋನ್‌ ನಿಧಿ; ಇಂತಹ ಕಲಾವಿದರು ಮತ್ತೂಮ್ಮೆ ಹುಟ್ಟಿ ಬರುವುದು ಕಷ್ಟ ಎಂದು ಅಂತಾರಾಷ್ಟ್ರೀಯ ಕ್ಲಾರಿಯೋನೆಟ್‌ ವಾದಕ ನರಸಿಂಹ ವಡಿವಾಟಿಹೇಳಿದರು. “ನಮ್ಮದು 30 ವರ್ಷಗಳ ಒಡನಾಟ. ಅವರು (ಕದ್ರಿ ಗೋಪಾಲನಾಥ್‌) ಸ್ಯಾಕ್ಸೋಫೋನ್‌ನಲ್ಲಿ ಕರ್ನಾಟಕ ಸಂಗೀತವನ್ನು ನುಡಿಸುತ್ತಿದ್ದರೆ ನಾನು ಕ್ಲಾರಿಯೋನೆಟ್‌ನಲ್ಲಿ ಹಿಂದೂಸ್ಥಾನಿ ಸಂಗೀತವನ್ನು ನುಡಿಸುತ್ತಿದ್ದೆ. ಸ್ವಭಾವದಲ್ಲಿ ನಮ್ಮಿಬ್ಬರಿಗೂ ಹೊಂದಾಣಿಕೆ ಇದ್ದು, ಇಬ್ಬರದೂ ಗಾಯನ ಶೈಲಿಯ ವಾದನ. ದೇಶ ವಿದೇಶಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಾವು ಜತೆಯಾಗಿ ಪ್ರಸ್ತುತ ಪಡಿಸಿದ್ದೇವೆ’ ಎಂದರು. “ನನ್ನ ಊರು ರಾಯಚೂರು; ಅವರ ಊರು ಮಂಗಳೂರು. ಅವರು (ಗೋಪಾಲ್‌ನಾಥ್‌) ಸ್ಯಾಕ್ಸೋಫೋನ್‌ನಲ್ಲಿದ್ದ ಕರ್ಕಶ ಧ್ವನಿಯನ್ನು ತೆಗೆದು ಸುನಾದವನ್ನು ತಂದರು. ಅವರಿಂದ ಪ್ರೇರಿತನಾಗಿ ನಾನು ಕ್ಲಾರಿಯೋನೆಟ್‌ನಲ್ಲಿದ್ದ ಕರ್ಕಶ ಧ್ವನಿಯನ್ನು ಅಳಿಸಿ ಸುಲಲಿತ ನಾದವನ್ನು ತಂದಿದ್ದೇನೆ ಎಂದರು.
– ನರಸಿಂಹಲು ವಡಿವಾಟಿ

Advertisement

Udayavani is now on Telegram. Click here to join our channel and stay updated with the latest news.

Next