ಕಾರವಾರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಕೂಡ ಕರಾವಳಿಯಲ್ಲಿ ಮುಂದುವರಿದಿದೆ. ಕದ್ರಾ ಜಲಾಶಯ ಭರ್ತಿಯಾಗಿದ್ದ ಜಲಾಶಯದ ಆರು ಕ್ರೈಸ್ಟ್ ಗೇಟ್ ತೆಗೆದು ನೀರು ಹೊರ ಬಿಡಲಾಗಿದೆ.ಕದ್ರಾ ಅಣೆಕಟ್ಟು ಸಮೀಪದ ಜನರನ್ನು ಸ್ಥಳಾಂತರಿಸಲಾಗಿದೆ. ನದಿ ದಂಡೆಯ ಜನರಿಗೆ ಎಚ್ಚರಿಕೆ ಯಿಂದ ಇರಲು ಮೈಕ್ ನಲ್ಲಿ ಕೆಪಿಸಿ ಅಧಿಕಾರಿಗಳು, ಪಿಡಿಓ ಪ್ರಚಾರ ಮಾಡಿದ್ದಾರೆ. ಇನ್ನೊಂದೆಡೆ ಗಂಗಾವಳಿ ನದಿ ತುಂಬಿ ಸುಂಕಸಾಳ ಬಳಿ ರಸ್ತೆಯಲ್ಲಿ ನೀರು ಹರಿದಿದೆ. ರಾ.ಹೆ.63 ವಾಹನ ಸಂಚಾರ ರದ್ದಾಗಿದೆ. ವಾಹನಗಳನ್ನು ಯಲ್ಲಾಪುರ, ಶಿರಸಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಬುಧುವಾರ ಸಂಜೆಯಾದರೂ ಮಳೆ ಸುರಿಯುತ್ತಲೇ ಇದೆ. ಪ್ರವಾಹದ ಸನ್ನಿವೇಶ ಸೃಷ್ಟಿಯಾಗಿದೆ.
ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕಾರವಾರದಲ್ಲಿ ಬೆಳಿಗ್ಗೆ ಬೀಸಿದ ಭಾರೀ ಗಾಳಿಗೆ ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಮುರಿದು ಬಿದ್ದಿವೆ .
ಆ.8ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಿದೆ. ಭಾರೀ ಅಲೆಗಳ ಅಬ್ಬರದಿಂದ ಕಡಲತೀರಗಳಲ್ಲಿ ಕೊರೆತ ಉಂಟಾಗಿದ್ದು, ದಡಗಳಲ್ಲಿ ಹಾಗೂ ಬಂದರುಗಳಲ್ಲಿ ನಿಲ್ಲಿಸಿದ್ದ ಬೋಟುಗಳು ಅಲೆಗಳ ಹೊಡೆತಕ್ಕೆ ಹಾನಿಯಾಗಿವೆ. ಸದ್ಯ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕೆ ಇಲಾಖೆ ಸೂಚನೆ ನೀಡಿದೆ.
ಬುಧುವಾರ ಬೆಳಗಿನ ಜಾವ ಕಾರವಾರ ಸಮುದ್ರ ತೀರದಲ್ಲಿ 3 ರಿಂದ 3.6 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದ್ದು ಸಮುದ್ರದ ಹತ್ತಿರ ವಾಸಿಸುವ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.
ಎಡಬಿಡದೆ ಗಾಳಿ ಸಹಿತ ಮಳೆ ಮುಂದುವರಿದ ಕಾರಣ ಬಹುತೇಕ ನದಿಗಳು ತುಂಬಿ ಹರಿಯತೊಡಗಿವೆ. ಕದ್ರಾ ಜಲಾಶಯದಲ್ಲಿ ಕೂಡ 32 ಮೀಟರ್ ನೀರು ಭರ್ತಿಯಾಗಿದ್ದು ಗರಿಷ್ಠ ಮಟ್ಟ ತಲುಪಲು ಇನ್ನು 2.35 ಮೀಟರ್ ಬಾಕಿ ಇದೆ.
ಕಳೆದ ವರ್ಷದಂತೆ ಈ ಭಾರಿ ಕೂಡ ಭಾರೀ ಪ್ರಮಾಣದಲ್ಲಿ ಮಳೆಯಾಗುತಿದ್ದು, ಮತ್ತು ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿರುವುದು ನದಿ ತೀರದ ಜನರ ಆತಂಕಕ್ಕೆ ಕಾರಣವಾಗಿದೆ.