ಕಾರವಾರ: ಕರಾವಳಿಯಲ್ಲಿ ಸತತ ಮಳೆ ಬೀಳುತ್ತಿದೆ. ಕದ್ರಾ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಅಣೆಕಟ್ಟು ಭರ್ತಿಯಾಗುವ ಹಂತ ತಲುಪಿದ್ದು, ಪ್ರವಾಹ ತಪ್ಪಿಸಲು ಕದ್ರಾ ಅಣೆಕಟ್ಟಿನ ಮೂರು ಕ್ರಸ್ಟಗೇಟ್ ತೆರೆದು 16627 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.
ಇದರಿಂದ ನದಿ ದಂಡೆಯ ಜನರು ಸ್ಥಳಾಂತರ ತಪ್ಪಿದೆ. ಅಲ್ಲದೆ ಅಣೆಕಟ್ಟಿನಲ್ಲಿ 32.50 ಮೀಟರ್ ನೀರಿನ ಸಂಗ್ರಹ ಮಟ್ಟ ದಾಟದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ನಿಂಗಣ್ಣ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಕದ್ರಾ ಜಲಾಶಯ 34.5 ಮೀಟರ್ ಎತ್ತರವಿದೆ. ಸಹಾಯಕ ಕಮಿಷನರ್ ವಿದ್ಯಾಶ್ರೀ ಚಂದರಗಿ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಕಾರವಾರ ತಹಶೀಲ್ದಾರ್ ನರೋನ್ಹಾ ಕದ್ರಾದಲ್ಲಿ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ:ಮಳೆಯಿಂದಾಗುವ ಅನಾಹುತ ತಪ್ಪಿಸಲು ಡಿಸಿ, ಜಿಲ್ಲಾ ಉಸ್ತುವಾರಿಗಳ ಜೊತೆ ಸಿಎಂ ಸಭೆ
ಕೊಡಸಳ್ಳಿ ಜಲಾಶಯ 69 ಮೀಟರ್ ಎತ್ತರವಿದ್ದು, ನೀರಿನ ಸಂಗ್ರಹ 62 ಮೀಟರ್ ತಲುಪಿದೆ. ಸುಪಾ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಸಹ ಉತ್ತಮ ಮಳೆಯಾಗುತ್ತಿದೆ. ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.