Advertisement

BJP: ಯತ್ನಾಳ್‌ ತಂಡಕ್ಕೆ ಕಡಿವಾಣ: ವಿಜಯೇಂದ್ರ ಬಣ ಪಟ್ಟು

12:30 AM Nov 21, 2024 | Team Udayavani |

ಬೆಂಗಳೂರು: ವಕ್ಫ್ ಬೋರ್ಡ್‌ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣ ನಡೆಸಲು ಉದ್ದೇಶಿಸಿರುವ ಜನ ಜಾಗೃತಿ ಅಭಿಯಾನಕ್ಕೆ ಬಿಜೆಪಿ ಹೈಕಮಾಂಡ್‌ ತತ್‌ಕ್ಷಣ ಕಡಿವಾಣ ಹಾಕಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಪಟ್ಟು ಹಿಡಿದಿದೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸುಮಾರು 17ಕ್ಕೂ ಹೆಚ್ಚು ಬಿಜೆಪಿ ಮಾಜಿ ಶಾಸಕರು ಸಭೆ ಸೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.

Advertisement

ವಿಜಯೇಂದ್ರ ಅವರ ಸಾರಥ್ಯದಲ್ಲಿ ನಡೆಸಲು ಉದ್ದೇಶಿಸಿರುವ “ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು. ಪ್ರತ್ಯೇಕ ಅಭಿಯಾನ ನಡೆಸದಂತೆ ಸೂಚಿಸಬೇಕು ಎಂದು ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭಿನ್ನಮತೀಯ ನಾಯಕರಿಗೆ ತತ್‌ಕ್ಷಣ ವರಿಷ್ಠರು ಈ ಸೂಚನೆ ನೀಡಬೇಕು. ಅಗತ್ಯಬಿದ್ದರೆ ದಿಲ್ಲಿ ನಾಯಕರ ಭೇಟಿಗೆ ಸಮಯ ಕೋರೋಣ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ರೂಪಾಲಿ ನಾಯಕ, ಸುನೀಲ್‌ ನಾಯ್ಕ…, ಸುನೀಲ್‌ ಹೆಗಡೆ, ವೈ.ಸಂಪಂಗಿ, ಎಸ್‌.ಕೆ.ಬೆಳ್ಳುಬ್ಬಿ , ರಾಮ ಚಂದ್ರಪ್ಪ, ಮಾಡಾಳ್‌ ವಿರೂಪಾಕ್ಷಪ್ಪ, ವೆಂಕಟ ಮುನಿಯಪ್ಪ, ನಾಗೇಂದ್ರ, ನಿರಂಜನ್‌ಕುಮಾರ್‌ ಸೇರಿದಂತೆ ಹಲವರು ಈ ಸಭೆಯಲ್ಲಿ ಹಾಜರಿದ್ದರು.

ಸುಮಾರು 3 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಮಾಜಿ ಶಾಸಕರು, ವಿಜಯೇಂದ್ರ ನೇತೃತ್ವದಲ್ಲೇ ಅಭಿಯಾನ ನಡೆಯಬೇಕು. ಯಾವುದೇ ಕಾರಣಕ್ಕೂ ಯತ್ನಾಳ್‌ ಸಾರಥ್ಯಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ರಾಜ್ಯಾಧ್ಯಕ್ಷರು ಹೋರಾಟ, ಪ್ರತಿಭಟನೆಯ ಸಾರಥ್ಯವನ್ನು ವಹಿಸುವುದು ಸಂಪ್ರದಾಯವಾಗಿದೆ. ವಿಜಯೇಂದ್ರ ಹೊರಗಿಟ್ಟು ಯತ್ನಾಳ್‌, ಜಾರಕಿಹೊಳಿ, ಕುಮಾರ್‌ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರುನಡೆಸಲು ಉದ್ದೇಶಿಸಿರುವ ಅಭಿಯಾನವನ್ನು ತಡೆಯದಿದ್ದರೆ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಶಿಸ್ತು ಕ್ರಮಕ್ಕೆ ತೀರ್ಮಾನ
ಅಗತ್ಯಬಿದ್ದರೆ ದಿಲ್ಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಬೇಕೆಂಬ ಒತ್ತಾಯ ವ್ಯಕ್ತವಾಗಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ನಾಯಕತ್ವದ ವಿರುದ್ಧ ಅಪಸ್ವರ ಎತ್ತುತ್ತಿರುವವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು ಎಂಬ ನಿರ್ಣಯಕ್ಕೆ ಬರಲಾಗಿದೆ.

ಯಡಿಯೂರಪ್ಪ ಪಕ್ಷ ಕಟ್ಟುವಾಗ ಕೆಲವರು ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅಂತಹವರ ಬಗ್ಗೆ ಲಘುವಾಗಿ ಮಾತನಾಡುವವರ ಬಾಯಿಗೆ ಬೀಗ ಹಾಕಬೇಕು. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಸಂಘಟನೆ ಬಲಿಷ್ಠವಾಗುತ್ತಿದೆ. ಈಗ ಅವರ ಬಗ್ಗೆಯೇ ಹಗುರವಾಗಿ ಕೆಲವರು ಮಾತನಾಡುತ್ತಾರೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಕೋಲಾರದಿಂದ ರಾಜ್ಯ ಪ್ರವಾಸ

ನ. 29ರಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕುರುಡುಮಲೆಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದಲೇ ರಾಜ್ಯ ಪ್ರವಾಸ ಆರಂಭಿಸಲು ಸಭೆ ತೀರ್ಮಾನ ತೆಗೆದುಕೊಂಡಿದೆ.

ಅನಂತರ ಡಿ. 1ರಂದು ಮೈಸೂರಿನಲ್ಲಿರುವ ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಬಳಿಕ ಗೋಕರ್ಣಕ್ಕೆ ತೆರಳಲು ಸಭೆ ನಿರ್ಧರಿಸಿದೆ. ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಸರಕಾರದ ಜನ ವಿರೋಧಿ ನೀತಿಯ ವಿರುದ್ಧ ಹೋರಾಟದ ಬಗ್ಗೆಯೂ ಚರ್ಚೆ ನಡೆದಿದೆ. ವಿಜಯೇಂದ್ರ ಅವರು ವಕ್ಫ್ ವಿರುದ್ಧ ಹೋರಾಟ ನಡೆಸಲು ತಂಡ ರಚಿಸುತ್ತಾರೆ ಎಂಬ ಸುದ್ದಿಯನ್ನು ಗ್ರಹಿಸಿದವರು, ಅದಕ್ಕೆ ಪರ್ಯಾಯವಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ. ವಾಸ್ತವವಾಗಿ ಇದನ್ನು ಹೈಜಾಕ್‌ ಮಾಡಿದವರೇ ಯತ್ನಾಳ್‌ ಮತ್ತು ಅವರ ತಂಡ ಎಂದು ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.

4ನೇ ತಂಡಕ್ಕೆ ಬೇಡ ಅವಕಾಶ: ರೇಣುಕಾಚಾರ್ಯ
ಮೊದಲ ಹಂತದಲ್ಲಿ 15 ಜನ ಸೇರಿದ್ದೇವೆ. ಬಿಜೆಪಿ ಬಲಿಷ್ಠವಾಗಿದೆ. ಈಗಾಗಲೇ 3 ತಂಡದಿಂದ ಪ್ರವಾಸ ನಡೆಯಲಿದೆ. ಯಾವುದೇ ಕಾರಣಕ್ಕೂ ನಾಲ್ಕನೇ ತಂಡಕ್ಕೆ ಅವಕಾಶ ಕೊಡಬಾರದು. ನಾವೆಲ್ಲರೂ ರಾಜ್ಯಾಧ್ಯಕ್ಷರ ಬೆಂಬಲಕ್ಕೆ ನಿಂತು ಕೆಲಸ ಮಾಡುತ್ತೇವೆ. ಈಗಾಗಲೇ 3 ತಂಡ ರಚನೆ ಮಾಡಲಾಗಿದೆ. ವಕ್ಫ್ ವಿಚಾರದಲ್ಲಿ ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪಕ್ಷದ ಜತೆಗೆ ನಾವು ಇದ್ದೇವೆ ಎಂದು ರೇಣುಕಾಚಾರ್ಯ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next