Advertisement

ಕಡೆಮನೆ ಕಟ್ಟೆ ಆಯ್ತು ಯಕ್ಷಗಾನದ ಕಟ್ಟೆ! ಹಳೆಬೇರು ಹೊಸ ಚಿಗುರಿಗೆ ಸಾಕ್ಷಿಯಾದ ಯಕ್ಷಗಾನ ಶಿಬಿರ

05:08 PM Apr 24, 2023 | Team Udayavani |

ಶಿರಸಿ: ಯಕ್ಷಗಾನದ ಆಸಕ್ತಿ, ಯಕ್ಷಗಾನದಿಂದ ಮಳೆ ಬೆಳೆ ಎಂಬ ನಂಬಿಕೆಯಿಂದ ತಾಲೂಕಿನ ವಾನಳ್ಳಿ ಸಮೀಪದ ಕಡೆಮನೆಕಟ್ಟೆ ಈಗ ಯಕ್ಷಗಾನದ ಕಟ್ಟೆಯಾಗಿ ಪರಿವರ್ತನೆಗೊಂಡಿದೆ. ಹಳೆಬೇರು ಹೊಸ ಚಿಗುರಿಗೆ ಇದು ಸಾಕ್ಷಿಯಾಗಿದೆ.
ಪ್ರತೀ ವರ್ಷ ಯಕ್ಷಗಾನ ಶಿಬಿರ ಹಾಗೂ ಕಲಿತ‌ ಮಕ್ಕಳಿಂದ ಪ್ರದರ್ಶನದ ಇಲ್ಲಿನ ವಿಶೇಷವಾಗಿದೆ.

Advertisement

ತಾತಯ್ಯತ:
ಜೂನ್ ದಿಂದ ಏಪ್ರೀಲ್ ತನಕ ಶೈಕ್ಷಣಿಕ ತರಗತಿಗಳು ಕಡೆಮನೆಕಟ್ಟೆ ಶಾಲೆಯಲ್ಲಿ ನಡೆದರೆ, ಬೇಸಗೆಯ‌ ರಜೆ ಆರಂಭವಾಗುತ್ತಿದ್ದಂತೆ ತಾತಯ್ಯತ ಎನ್ನುತ್ತ ಯಕ್ಷಗಾನ ಶಿಕ್ಷಣ‌ ಆರಂಭವಾಗುತ್ತಿದೆ.

ಚಂಡೆ ಮದ್ದಲೆ, ಭಾಗವತಿಕೆಯ ಝೇಂಕಾರದ ಮಧ್ಯೆ‌ ಆಸಕ್ತಿಯಿಂದ ಮಕ್ಕಳು ಕಲಿಯಲು ಬರುತ್ತಾರೆ. ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಆಸಕ್ತರಿಗೆ ಬೇಸಗೆ ಶಿಬಿರ 15 ದಿನಗಳ‌ ಕಾಲ ನಡೆಯುತ್ತಿದೆ. ಹೊಸ್ತೋಟ ಮಂಜುನಾಥ ಭಾಗವತರು, ಪ್ರೋ.ಎಂ.ಎ.ಹೆಗಡೆ ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರೂ ಇಲ್ಲಿಗೆ ಬಂದು ಶಿಬಿರ ನೋಡಿ‌ ಮಾರ್ಗದರ್ಶನ ಮಾಡಿದ್ದಿದೆ. ಸತೀಶ ಉಪಾಧ್ಯಾಯ, ಅಶ್ವಿನಿ ಕೊಂಡದಕುಳಿ, ಗಣಪತಿ ಮುದ್ದಿನಪಾಲು, ರಮಾನಂದ ಹಲ್ಲೆಕೊಪ್ಪ, ಪ್ರವೀಣ ತಟ್ಟಿಸರ ಹಾಗೂ ಪ್ರಸ್ತುತ ನರೇಂದ್ರ ಅತ್ತಿಮುರಡು ರಂಗ ನಿರ್ದೇಶಕರಾಗಿದ್ದಾರೆ. ಮುಂಜಾನೆ 9.30ರಿಂದ ಸಂಜೆ  5ರ ತನಕ ತರಬೇತಿ‌ ನೀಡಲಾಗುತ್ತಿದೆ.

ಸಾಧಕರು ಕುಣಿದ ನೆಲ: ಕಡೆಮನೆ‌ಕಟ್ಟೆಯಲ್ಲಿ‌ ಪ್ರತೀ ವರ್ಷ ಯಕ್ಷಗಾನ ಆಗುವ ಸಂಪ್ರದಾಯ ಇದೆ. ಅಡಿಕೆ ದರ ಕುಸಿತ ಕಂಡಾಗಲೂ ಈ ಭಾಗದ ಜನರು ಚಂಡೆ‌ ಮದ್ದಲೆ ಶಬ್ಧ ಕೇಳಿಸಿದ್ದಾರೆ.
ನಾರ್ಣಪ್ಪ ಉಪ್ಪೂರು, ಕಾಳಂಗನಾವುಡರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ ಅವರಿಂದ ಈಗಿನ‌ ಹಳೆ ಹಾಗೂ ಹೊಸ ತಲೆಮಾರಿನ ಎಲ್ಲರೂ ಕುಣಿದಿದ್ದಾರೆ, ಕುಣಿಸಿದ್ದಾರೆ. ಯಾವಾಗಲೂ ಯಕ್ಷಗಾನ ಆಗುವ ನೆಲವಿದು. ಇಷ್ಟು ಯಕ್ಷೈತಿಹಾಸ ಇರುವ ಕಡೆಮನೆ ಕಟ್ಟೆಯಲ್ಲಿ ಯಕ್ಷಗಾನ‌ ಕಲಿಕೆಗೆ ಎಳೆಯರಿಂದ ಪ್ರೌಢ, ಕಾಲೇಜು ಹೋಗುವವರ ತನಕ ಎಲ್ಲರೂ ಆಸಕ್ತಿಯಿಂದ ಶಿಬಿರಕ್ಕೆ ಬರುತ್ತಿರುವದು ವಿಶೇಷವಾಗಿದೆ.

ಇಂದು ಸಮಾರೋಪ:
‌ಮೆಣಸಿಯ ಯಕ್ಷಸಿರಿ ಮತ್ತು ಸಾಂಸ್ಕೃತಿಕ ವೇದಿಕೆಯು ಪ್ರತೀ ವರ್ಷ ನಡೆಸುವ ಈ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ‌ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಏ.25 ರಂದು ಸಂಜೆ 6.30 ರಿಂದ ಶಾಲಾ ಆವಾರದಲ್ಲಿ ನಡೆಯಲಿದೆ.

Advertisement

ಸಮಾರಂಭದ ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ, ಬಿಇಓ ಎಂ.ಎಸ್.ಹೆಗಡೆ, ಪತ್ರಕರ್ತ ಕಿರಣ್ ಮೆಣಸಿ, ಯಕ್ಷಾಭಿಮಾನಿ ಗಿರಿಧರ ಕಬ್ನಳ್ಳಿ, ಬಾಲ ಕಲಾವಿದೆ ತುಳಸಿ ಹೆಗಡೆ ಶಿರಸಿ ಪಾಲ್ಗೊಳ್ಳುವರು. ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಹರಿಹರ ಗಣಪತಿ ಭಟ್ಟ ಭೂಸನಕೇರಿ ಅಧ್ಯಕ್ಷತೆವಹಿಸಿಕೊಳ್ಳುವರು.

ಬಳಿಕ ಗಜಾನನ ಭಟ್ಟ ತುಳಗೇರಿ ಮಾರ್ಗದರ್ಶನ, ನರೇಂದ್ರ ಅತ್ತಿಮುರಡು ನಿರ್ದೇಶನದಲ್ಲಿ ದ್ರೌಪತಿ ಪ್ರತಾಪ ಯಕ್ಷಗಾನ ಪ್ರದರ್ಶನ ಕಾಣಲಿದೆ.

ಹಿಮ್ಮೇಳದಲ್ಲಿ ಗಜಾನನ ಭಾಗವತ್, ಮಂಜುನಾಥ ಗುಡ್ಡೆದಿಂಬ, ಬಾಲ ಕಲಾವಿದ ಶ್ರೀವತ್ಸ‌ ಗುಡ್ಡೆದಿಂಬ ಸಹಕಾರ ನೀಡುವರು. ವಿನಯ ಭಟ್ಟ ಕೋಳಿಗಾರ ವೇಷಭೂಷಣ ಸಹಕಾರ‌ ನೀಡುವರು. ಈ ಬಾರಿ ನಲ್ವತ್ತೆರಡು ಶಿಬಿರಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದು, ಸರ್ವರ ಸಹಕಾರದಿಂದ ಶಿಬಿರ‌ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಮಕ್ಕಳಿಗೆ ಬಿಡುವು ಇದ್ದಾಗ ತಾಳಮದ್ದಲೆ ತರಬೇತಿ‌ ನೀಡಲಾಗುತ್ತಿದೆ. ವೇದಿಕೆಯ ಹಾಗೂ ಸ್ಥಳೀಯರ ಎಲ್ಲರ‌ ಸಹಕಾರದಿಂದ ಒಂದು ಶ್ರದ್ದೆಯ ಕಾರ್ಯ ನಡೆಸುತ್ತಿದ್ದೇವೆ ಎನ್ನುತ್ತಾರೆ ವೇದಿಕೆಯ ಪ್ರಮುಖರು.

ಕಡೆಮನೆ ಕಟ್ಟೆಯ ಯಕ್ಷಗಾನ ಪ್ರದರ್ಶನಗಳಿಗೆ ಇತಿಹಾಸವಿದೆ. ಇಂಥ ನೆಲದಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸುವಲ್ಲಿ ನಮಗೆ ಖುಷಿಯಿದೆ.
-ಗಜಾನನ ಭಾಗವತ್ ತುಳಗೇರಿ, ಶಿಬಿರ‌ ಮಾರ್ಗದರ್ಶಕ

ಕಳೆದ ಹನ್ನೊಂದು ವರ್ಷದಿಂದ ಶಿಬಿರ ನಡೆಸುತ್ತಿದ್ದೇವೆ. ಈ ಬಾರಿ ೪೨ ಮಕ್ಕಳು ಯಕ್ಷಗಾನದ ತರಬೇತಿ ಪಡೆಯುತ್ತಿರುವದು ವಿಶೇಷವಾಗಿದೆ. ವೇದಿಕೆ ಸದಸ್ಯರ, ಗ್ರಾಮಸ್ಥರ ಸಹಕಾರ ಈ ಯಶಸ್ಸಿಗೆ ಕಾರಣ.
-ಗಣಪತಿ ಹೆಗಡೆ ಕಡೆಮನೆ, ವೇದಿಕೆ ಅಧ್ಯಕ್ಷ

ಇದನ್ನೂ ಓದಿ: ನನ್ನ ಕಣ್ಣೀರಿಗೆ ಕಾರಣರಾದವರಿಗೆ ಕಣ್ಣೀರನ್ನೆ ಕೊಟ್ಟು ನನ್ನ ಆತ್ಮಕ್ಕೆ ಶಾಂತಿ ನೀಡಿ ;ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.