Advertisement

ಕಡಬ: ಸರಸ್ವತಿ ವಿದ್ಯಾಲಯದಲ್ಲಿ ಕೃಷಿ ಸಂಸ್ಕೃತಿ ಪಾಠ

12:53 AM Jul 20, 2019 | mahesh |

ಕಡಬ: ಕೃಷಿ ಸಂಸ್ಕೃತಿಯಿಂದ ಯುವ ಸಮುದಾಯ ದೂರ ಸರಿಯುತ್ತಿರುವ ಕಾಲಘಟ್ಟದಲ್ಲಿ ಕಡಬದ ಸರಸ್ವತಿ ವಿದ್ಯಾಲಯ ಸಮೂಹ ಶಿಕ್ಷಣ ಸಂಸ್ಥೆಯು ಭತ್ತದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ.

Advertisement

ಇದು ಕೇವಲ ನೇಜಿ ನೆಡುವ ಕೆಲಸದ ಪ್ರಾತ್ಯಕ್ಷಿಕೆಗೆ ಸೀಮಿತವಾಗಿರದೆ ನೇಜಿ ನಾಟಿಯಿಂದ ಹಿಡಿದು ಭತ್ತದ ಕೊೖಲಿನ ತನಕ ಕೃಷಿಯ ಪೂರ್ಣ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ.

ನಮ್ಮ ಅನ್ನಕ್ಕೆ ನಮ್ಮದೇ ದುಡಿಮೆಯ ಅಕ್ಕಿ
‘ಸಂಸ್ಕಾರದೊಂದಿಗೆ ಶಿಕ್ಷಣ’ ಎನ್ನುವ ಧ್ಯೇಯದೊಂದಿಗೆ ಆರಂಭ ಗೊಂಡಿರುವ ಕಡಬದ ಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆ ಕಡಬದ ಪಂಜ ರಸ್ತೆಯಲ್ಲಿರುವ ವಿದ್ಯಾನಗರ ಹಾಗೂ ಕೇವಳದ ಹನುಮಾನ್‌ ನಗರದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾನಗರದಲ್ಲಿ ಪ್ರಾಥಮಿಕ ಶಾಲೆ, ಶಿಶುಮಂದಿರ ಹಾಗೂ ಹನುಮಾನ್‌ ನಗರದಲ್ಲಿ ಪ್ರೌಢಶಾಲೆ ಮತ್ತು ಪ.ಪೂ. ವಿದ್ಯಾಲಯವಿದೆ. ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಂಸ್ಥೆಯಲ್ಲಿ ಈ ವರ್ಷದಿಂದ ತಮ್ಮ ಮಧ್ಯಾಹ್ನದ ಬಿಸಿಯೂಟಕ್ಕೆ ತಾವೇ ಉತ್ತು, ಬಿತ್ತಿ, ಬೆಳೆ ತೆಗೆದು ಅಕ್ಕಿ ತಯಾರಿಸುವ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿ ಗಳಲ್ಲಿ ಕೃಷಿಯತ್ತ ಒಲವು ಮೂಡಿಸುವುದು, ರೈತರ ಕಷ್ಟದ ಬಗ್ಗೆ ಅರಿವು ಮೂಡಿಸುವುದು, ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ನಾಣ್ಣುಡಿಯನ್ನು ಅರ್ಥೈಸುವ ಉದ್ದೇಶ ಈ ಯೋಜನೆಯಲ್ಲಿ ಅಡಕವಾಗಿದೆ.

ಎಲ್ಲ ಕೆಲಸಗಳೂ ವಿದ್ಯಾರ್ಥಿಗಳಿಂದಲೇ
ವಿದ್ಯಾಲಯದ ಆಯ್ದ 200ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ನೇಜಿ ನಾಟಿ ಮಾಡುವ ಕಾರ್ಯದಲ್ಲಿ ತೊಡಗಿ, ಮುಂದೆ ಭತ್ತದ ಪೈರು ಕಟಾವು ಸಹಿತ ಎಲ್ಲ ಕೆಲಸಗಳನ್ನು ತಾವೇ ನಿರ್ವಹಿಸಲು ಸರ್ವ ಸನ್ನದ್ಧರಾಗಿದ್ದಾರೆ. ಹಿಂದೆ ಗದ್ದೆಗಳಲ್ಲಿ ಇಂಗುತ್ತಿದ್ದ ಮಳೆ ನೀರು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪೂರಕವಾಗಿತ್ತು. ಆದರೆ ಈಗ ಗದ್ದೆ ಕೃಷಿಯೇ ನೇಪಥ್ಯಕ್ಕೆ ಸರಿದಿದೆ. ಈ ಕಾಲಘಟ್ಟದಲ್ಲಿ ಗದ್ದೆಗಳಲ್ಲಿ ನೀರಿಂಗುವುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ವಿದ್ಯಾಲಯವು ಭತ್ತದ ಕೃಷಿ ಮಾಡಲು ಆಯ್ಕೆ ಮಾಡಿಕೊಂಡಿರುವ ಗದ್ದೆ ಹಡಿಲು ಬಿದ್ದ ಭೂಮಿ.

ಭತ್ತದ ಬೇಸಾಯವನ್ನು ಸಾವಯವ ಗೊಬ್ಬರ ಬಳಸಿಯೇ ಮಾಡಲು ನಿರ್ಧರಿ ಸಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಮನೆಯಿಂದ ಸಗಣಿ ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಸಂಸ್ಥೆಯಲ್ಲಿ ಅಡುಗೆಗೆ ಬಳಸುವ ಕಟ್ಟಿಗೆಯಿಂದ ಸಿಗುವ ಬೂದಿಯನ್ನೂ ಬಳಸಿಕೊಳ್ಳಲು ಚಿಂತನೆ ನಡೆದಿದೆ.

Advertisement

300 ಸೂಡಿ ನೇಜಿ ನಾಟಿ
ಆರಂಭದಲ್ಲಿ ಭೂಮಿಯ ಒಡೆಯ ನಾಗದೇವರಿಗೆ ಪೂಜೆ ನೆರವೇರಿಸಿ ನೇಜಿ ನಾಟಿ ಕಾರ್ಯ ಮಾಡಲಾಯಿತು. ಸಂಸ್ಥೆಯ ಪ್ರೌಢಶಾಲೆ ಹಾಗೂ ಪ.ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನದ ತನಕ ಸುಮಾರು 300 ಸೂಡಿ ನೇಜಿ ನಾಟಿ ಮಾಡಿ ನಾವು ಯಾವುದೇ ಹಳ್ಳಿ ರೈತರಿಗೆ ಕಡಿಮೆ ಯಿಲ್ಲ ಎಂದು ತೋರಿಸಿಕೊಟ್ಟರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ, ಪ್ರಗತಿಪರ ಭತ್ತ ಕೃಷಿಕ ಉಮೇಶ್‌ ಶೆಟ್ಟಿ ಸಾಯಿರಾಂ ಹಾಗೂ ಸ್ಥಳೀಯ ಕೃಷಿಕ ಮಹಿಳೆಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿದರು. ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್‌, ಸದಸ್ಯೆ ಪ್ರಮೀಳಾ ಲೋಕೇಶ್‌, ಗದ್ದೆಯ ಮಾಲಕ ನಾರಾಯಣ ಗೌಡ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಮಹೇಶ್‌ ನಿಟಿಲಾಪುರ, ಪ್ರೌಢಶಾಲಾ ಮುಖ್ಯಶಿಕ್ಷಕಿ ಶೈಲಶ್ರೀ ರೈ ,ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಥ್‌ ನೀಡಿದರು.

ಹನುಮಾನ್‌ ನಗರದ (ಕೇವಳ) ಸರಸ್ವತಿ ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿರುವ ಈ ಭತ್ತದ ಗದ್ದೆ ಸಂಕೇಶ ನಾರಾಯಣ ಗೌಡ ಅವರಿಗೆ ಸೇರಿದ್ದು. 60 ಸೆಂಟ್ಸ್‌ ವಿಸ್ತೀರ್ಣವಿರುವ ಈ ಗದ್ದೆಯನ್ನು ಶಾಲೆಗಾಗಿ ಕೃಷಿ ಮಾಡಲು ಗೌಡರು ಬಿಟ್ಟು ಕೊಟ್ಟಿದ್ದಾರೆ. ಗದ್ದೆಯಲ್ಲಿ ನೇಜಿ ನಾಟಿಗಾಗಿ ನಾರಾಯಣ ಗೌಡರೇ ಭತ್ತ ಬೀಜ ಹಾಕಿದ್ದರು. ಇದೀಗ ಟಿಲ್ಲರ್‌ನಿಂದ ಉಳುಮೆ ಮಾಡಿದ ಬಳಿಕ ವಿದ್ಯಾರ್ಥಿಗಳೇ ನೇಜಿ ಕಿತ್ತು, ನಾಟಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡರು.

ಗದ್ದೆಯಲ್ಲೇ ಕೃಷಿ ಪಾಠ
ಹನುಮಾನ್‌ ನಗರದ (ಕೇವಳ) ಸರಸ್ವತಿ ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿರುವ ಈ ಭತ್ತದ ಗದ್ದೆ ಸಂಕೇಶ ನಾರಾಯಣ ಗೌಡ ಅವರಿಗೆ ಸೇರಿದ್ದು. 60 ಸೆಂಟ್ಸ್‌ ವಿಸ್ತೀರ್ಣವಿರುವ ಈ ಗದ್ದೆಯನ್ನು ಶಾಲೆಗಾಗಿ ಕೃಷಿ ಮಾಡಲು ಗೌಡರು ಬಿಟ್ಟು ಕೊಟ್ಟಿದ್ದಾರೆ. ಗದ್ದೆಯಲ್ಲಿ ನೇಜಿ ನಾಟಿಗಾಗಿ ನಾರಾಯಣ ಗೌಡರೇ ಭತ್ತ ಬೀಜ ಹಾಕಿದ್ದರು. ಇದೀಗ ಟಿಲ್ಲರ್‌ನಿಂದ ಉಳುಮೆ ಮಾಡಿದ ಬಳಿಕ ವಿದ್ಯಾರ್ಥಿಗಳೇ ನೇಜಿ ಕಿತ್ತು, ನಾಟಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡರು.

ಸ್ವಾವಲಂಬಿ ಬದುಕಿಗೆ ಕೃಷಿ ಸಹಕಾರಿ

ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕೃಷಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಭತ್ತದ ಕೃಷಿಯ ಬಗ್ಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಲಾಗಿದೆ. ಇದಲ್ಲದೆ ಬೇರೆ ಗದ್ದೆಯನ್ನೂ ಪಡೆದು ಭತ್ತದ ಕೃಷಿ ಮಾಡುವ ಯೋಜನೆ ಯಿದೆ. ಆ ಮೂಲಕ ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವುದು ಮತ್ತು ಶಾಲೆಯ ಅಕ್ಷರ ದಾಸೋಹಕ್ಕೆ ಅಕ್ಕಿ ಕ್ರೋಡೀಕರಿಸುವ ಉದ್ದೇಶವಿದೆ.
– ವೆಂಕಟ್ರಮಣ ರಾವ್‌ ಮಂಕುಡೆ, ಸಂಚಾಲಕರು, ಸರಸ್ವತಿ ವಿದ್ಯಾಲಯ

ಕೃಷಿ ಸಂಸ್ಕೃತಿಯ ಅರಿವು

ನಗರ ಪ್ರದೇಶದ ಮಕ್ಕಳಿಗೆ ಕೃಷಿಯ ಕುರಿತು ಒಂದಿನಿತೂ ಮಾಹಿತಿ ಇಲ್ಲ. ಇಂದು ಗ್ರಾಮೀಣ ಭಾಗದ ಮಕ್ಕಳಿಗೂ ಅಕ್ಕಿ ಎಲ್ಲಿ ಬೆಳೆಯುತ್ತಾರೆ ಎನ್ನುವ ಅರಿವು ಇಲ್ಲದಿರುವುದು ದುರಂತ. ವಿದ್ಯಾರ್ಥಿಗಳಿಗೆ ಈ ಮಣ್ಣಿನ ಕೃಷಿ ಸಂಸ್ಕೃತಿಯ ಅರಿವು ಮೂಡಿಸುವುದರೊಂದಿಗೆ ಭತ್ತದ ಕೃಷಿ ಉಳಿಸಿ ಬೆಳೆಸುವಲ್ಲಿ ಪ್ರೇರಣೆ ನೀಡುವ ಕೆಲಸ ಈ ಮೂಲಕ ನಡೆಯುತ್ತಿದೆ.
– ಉಮೇಶ್‌ ಶೆಟ್ಟಿ ಸಾಯಿರಾಂ,ಪ್ರಗತಿಪರ ಭತ್ತದ ಕೃಷಿಕ
Advertisement

Udayavani is now on Telegram. Click here to join our channel and stay updated with the latest news.

Next