ಮೂಡುಬಿದಿರೆ: ಇಲ್ಲಿ ಪಾಲಡ್ಕ ಗ್ರಾಮದ ಕಡಂದಲೆಯಲ್ಲಿ ವಿವಾಹ ಸಮಾರಂಭಕ್ಕೆಂದು ಆಗಮಿಸಿ ನಾಲ್ವರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಬುಧವಾರ ಬೆಳಿಗ್ಗೆ ಮತ್ತಿಬ್ಬರ ಶವ ಪತ್ತೆಯಾಗಿದೆ.
ಮಂಗಳವಾರ ಸಂಜೆ ನಡೆದ ಘಟನೆಯಲ್ಲಿ ವಾಮಂಜೂರು ಮೂಡುಶೆಡ್ಡೆಯ ಹರ್ಷಿತಾ (20), ಆಕೆಯ ಸಹೋದರ ನಿಖೀಲ್ (18), ಸಂಬಂಧಿಕರಾದ ವೇಣೂರಿನ ಸುಭಾಸ್ (19), ಬಜಪೆ ಕೊಳಂಬೆ ಹೊಗೆಪದವು ರವಿರಾಜ್ (29) ಮೃತಪಟ್ಟಿದ್ದರು. ಇವರಲ್ಲಿ ಹರ್ಷಿತಾ ಮತ್ತು ಸುಭಾಸ್ ಮೃತದೇಹ ಮಂಗಳವಾರ ಸಂಜೆಯೇ ಪತ್ತೆಯಾಗಿತ್ತು. ಇಂದು ನಿಖೀಲ್ ಮತ್ತು ರವಿರಾಜ್ ಅವರ ಮೃತದೇಹವನ್ನು ಇಂದು ಹೊರತೆಗೆಯಲಾಗಿದೆ.
ಕಡಂದಲೆ ಬರಿಯಡ್ಕ ಶ್ರೀಧರ ಆಚಾರ್ಯ ಅವರ ಮಗನ ಮದುವೆಗೆಂದು ರವಿವಾರ ಬಂದಿದ್ದ ಹತ್ತಿರದ ಸಂಬಂಧಿಕರು ಬಟ್ಟೆ ಒಗೆಯಲೆಂದು ಕಡಂದಲೆಯ ಶಾಂಭವಿ ನದಿಯ ಉಪನದಿಯತ್ತ ತೆರಳಿದ್ದರು. ಬಳಿಕ ತುಲೆಮುಗೆರ್ ಎಂಬ ಸ್ಥಳದಲ್ಲಿ ಹಲವರು ಗುಂಪಿನಲ್ಲಿ ನೀರಿಗಿಳಿದಿದ್ದರು. ಅಲ್ಲಿ ಭಾರೀ ಆಳ ಇರುವುದು ಅವರ ಗಮನಕ್ಕೆ ಬಾರದೆ ಈ ಅವಘಡ ಸಂಭವಿಸಿದೆ.
ಮೊದಲು ನೀರಿಗೆ ಇಳಿದವರು ಮುಳುಗುತ್ತಿರುವುದನ್ನು ಕಂಡ ಬಜಪೆಯ ಕೊಳಂಬೆ ಹೊಗೆ ಪದವು ರವಿರಾಜ್ ಕೂಡಲೇ ನೀರಿಗಿಳಿದು ಈ ಮೂವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ರಕ್ಷಿಸುವಲ್ಲಿ ಯಶಸ್ವಿಯಾದರು. ಬಳಿಕ ಇನ್ನೂ ಮೂವರನ್ನು ರಕ್ಷಿಸುವ ಯತ್ನದಲ್ಲಿ ದೈಹಿಕವಾಗಿ ಬಳಲಿ ಅವರು ಕೂಡ ಮುಳುಗಿ ಮೃತಪಟ್ಟರು.
ಹರ್ಷಿತಾ ಮತ್ತು ಸುಭಾಸ್ ಅವರ ಮರಣೋತ್ತರ ಪರೀಕ್ಷೆ ಮುಗಿದ್ದು, ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ. ನಿಖೀಲ್ ಮತ್ತು ರವಿರಾಜ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ