Advertisement

ನರೇಗಲ್ಲನಲ್ಲಿ ‘ಕಡಬಡ’ಸೋಗು ನೃತ್ಯ

11:08 AM Aug 28, 2019 | Suhan S |

ನರೇಗಲ್ಲ: ಜಿಲ್ಲೆಯಲ್ಲಿ ಎಲ್ಲೂ ಕಾಣದ ಸಾಂಪ್ರದಾಯಿಕ ಜನಪದ ಶೈಲಿಯ ಆಟ ‘ಕಡಬಡ’ ಸೋಗು ಪಟ್ಟಣದಲ್ಲಿ ಚಾಲ್ತಿಯಲ್ಲಿದೆ.

Advertisement

ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪಟ್ಟಣದ ವಿವಿಧ ಓಣಿಗಳಲ್ಲಿ ಮಾತ್ರ ಆಡುವ ವಿಶೇಷ ನೃತ್ಯವನ್ನು ಪ್ರದರ್ಶಿಸಲು ಕಲಾವಿದರು ತುದಿಗಾಲ ಮೇಲೆ ನಿಂತಿರುತ್ತಾರೆ. ಶ್ರಾವಣ ಮಾಸದ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಈ ಆಟ ಆಡಲಾಗುತ್ತಿದ್ದು, ಇಲ್ಲಿನ ಯುವಕರು ಮತ್ತು ಹಿರಿಯರು ನೂರಾರು ವರ್ಷಗಳಿಂದಲೂ ಈ ಆಟ ಆಡುತ್ತ ನಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಶ್ರಾವಣ ಮಾಸವೆಂದರೆ ಅನೇಕ ಸಾಂಕ್ರಾಮಿಕ ಮತ್ತಿತರ ರೋಗಗಳಿಂದ ಜನರು ಬಳಲುವ ಸಾಧ್ಯತೆ ಹೆಚ್ಚು. ಬಿತ್ತನೆ ಮುಗಿಸಿದ ರೈತರು ವರುಣನ ಕೃಪೆಗಾಗಿ ಕಾದು ಕುಳಿತಿರುವ ಮಾಸವೂ ಹೌದು. ಮಳೆ ಚೆನ್ನಾಗಿ ಆಗಲಿ, ಬರುವ ಎಲ್ಲ ರೋಗಗಳು ದೂರವಾಗಲಿ ಮತ್ತು ಜನತೆಗೆ ಈ ಸಮಯದಲ್ಲಿ ಮನರಂಜನೆ ನೀಡಬೇಕೆನ್ನುವ ದೃಷ್ಟಿಯಿಂದಲೂ ಈ ಕಡಬಡ ಸೋಗನ್ನು ಆಡಲಾಗುತ್ತಿದೆ.

ಆಟ ನೋಡುವುದೇ ಸೊಗಸು: ಕಡಬಡ ಸೋಗಿನ ಒಂದು ತಂಡದಲ್ಲಿ 20ರಿಂದ 40 ವೇಷಧಾರಿಗಳಿರುತ್ತಾರೆ. ದೇವಿ, ಬ್ರಹ್ಮ, ವಿಷ್ಣು, ಮಹೇಶ್ವರ, ದೇವೇಂದ್ರ, ರಂಭೆ, ಊರ್ವಶಿ, ಮೇನಕೆ, ರಾಕ್ಷಸರು (ಕಡಬಡ), ಯಮಧರ್ಮ, ಹನುಮಂತ ಹೀಗೆ ಹತ್ತು ಹಲವು ಪೌರಾಣಿಕ ಪಾತ್ರಗಳ ವೇಷಧಾರಿಗಳು ಇರುತ್ತಾರೆ. ವಾಹನ ಮುಂದೆ ದೇವಿ ಕುಣಿತವಿದ್ದರೆ ಆಕೆಯನ್ನು ಕಾಡಲು ರಾಕ್ಷಸರು ಕಾಯುತ್ತಿರುತ್ತಾರೆ. ದೇವಿ ಅವರನ್ನು ಸಂಹರಿಸಲು ಬಂದಾಗ ಆಡುವ ಆಟ ನೋಡುವುದೇ ಒಂದು ಸೊಗಸು. ನರೇಗಲ್ಲನ ಈಟಿಯವರ ಓಣಿ, ಗುಡಿ ಓಣಿ, ಪಾಯಪ್ಪಗೌಡ್ರ ಓಣಿ, ಕಟ್ಟಿ ಬಸವೇಶ್ವರ ಓಣಿ, ಹಿರೇಮಠದ ಓಣಿ, ಹಲಗೇರಿ ಓಣಿ, ಅಂಬೇಡ್ಕರ್‌ ಓಣಿ ಸೇರಿದಂತೆ ವಿವಿಧ ಓಣಿಯ ಜನರು ಶ್ರಾವಣ ಮಾಸದಲ್ಲಿ ಈ ‘ಕಡಬಡ’ ಸೋಗನ್ನು ಆಡುತ್ತಾರೆ. ಸೋಗಿನ ಪಾತ್ರ ಧರಿಸಲು ಯುವಕರು ನಾ ಮುಂದು ತಾ ಮುಂದು ಎಂದು ಧಾವಿಸುತ್ತಾರೆ. ಈ ಸೋಗಿನ ಸೊಗಸು, ವೇಷಧಾರಿಗಳ ಉತ್ಸಾಹ, ಬಣ್ಣ ಬಳಿಯವವರ ಕಲೆ ಕುರಿತು ವರ್ಣಿಸಲು ಅಸಾಧ್ಯ. ಮತ್ತೂಬ್ಬರಿಂದ ಕಥೆಯ ರೂಪದಲ್ಲಿ ಕೇಳಿದರೆ ಇದರ ಸ್ವಾರಸ್ಯ ತಿಳಿಯುವುದಿಲ್ಲ. ಇದನ್ನು ಕಣ್ಣಾರೆ ಕಂಡಾಗ ಮಾತ್ರ ಅದರಲ್ಲಿನ ನವರಸಗಳು ಅರ್ಥವಾಗುತ್ತದೆ.

 

Advertisement

•ಸಿಕಂದರ ಆರಿ

Advertisement

Udayavani is now on Telegram. Click here to join our channel and stay updated with the latest news.

Next