Advertisement

ಕಡಬ: “ಕಾಡಾನೆ ಸೆರೆ’ಕಾರ್ಯಾಚರಣೆ ಸ್ಥಗಿತ…ಗ್ರಾಮಸ್ಥರ ಆಕ್ರೋಶ

11:51 PM Feb 27, 2023 | Team Udayavani |

ಕಡಬ/ಸುಬ್ರಹ್ಮಣ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಫೆ. 20ರಂದು ಕಾಡಾನೆ ಅಟ್ಟಹಾಸ ಮೆರೆದು ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಕಾಡಾನೆಗಳನ್ನು ಸೆರೆ ಹಿಡಿಯಲು ಕಡಬ ಭಾಗದಲ್ಲಿ ಆರಂಭಗೊಂಡಿದ್ದ “ಕಾಡಾನೆ ಸೆರೆ’ ಕಾರ್ಯಾಚರಣೆ ಇದೀಗ ಸ್ಥಗಿತಗೊಂಡಿದೆ ಎನ್ನಲಾಗಿದೆ.

Advertisement

ರೆಂಜಿಲಾಡಿ ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಕಾಡಾನೆಗಳ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದಿದ್ದ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ 5 ಆನೆಗಳನ್ನು ಕರೆಸಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.

ಮೂರು ದಿನಗಳ ಕಾರ್ಯಾಚರಣೆ ನಡೆದು ಫೆ. 23ರಂದು ಮಂಡೆಕರ ಬಳಿಯ ಅರಣ್ಯದಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿದು ಎರಡು ಸಾಕಾನೆಗಳ ಜತೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಉಳಿದ 3 ಆನೆಗಳು ನೆಟ್ಟಣದ ಅರಣ್ಯ ಇಲಾಖೆಯ ಡಿಪೋ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಇದೀಗ ಉಳಿದ ಮೂರು ಆನೆಗಳನ್ನು ಫೆ.26ರ ರಾತ್ರಿ ಕೊಂಡೊಯ್ಯಲಾಗಿದೆ.

ಸಾಕಾನೆಗಳು ಮಡಿಕೇರಿಗೆ
ಆನೆ ಇರುವ ಬಗ್ಗೆ ಗ್ರಾಮಸ್ಥರಿಂದ ಯಾವುದೇ ದೂರುಗಳು ಬರುತ್ತಿಲ್ಲ. ಇಲಾಖಾ ಸಿಬಂದಿ ರಾತ್ರಿ ಹಗಲು ಗಸ್ತು ತಿರುಗುತ್ತಿದ್ದಾರೆ. ಕಾರ್ಯಾಚರಣೆಗಾಗಿ ತರಲಾಗಿದ್ದ ಸಾಕಾನೆಗಳನ್ನು ಕೊಡಗಿನಲ್ಲಿ ನಡೆಯುತ್ತಿರುವ ಆಪರೇಶನ್‌ ಟೈಗರ್‌ ಕಾರ್ಯಾಚರಣೆಯಲ್ಲಿ ಬಳಸುವುದಕ್ಕಾಗಿ ಕರೆದೊಯ್ಯಲಾಗಿದೆ ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ತಿಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ
“ಕಾಡಾನೆ ಸೆರೆ’ ಕಾರ್ಯಾ ಚರಣೆಗೆಯನ್ನು ಸ್ಥಗಿತಗೊಳಿಸಿ ರುವುದಕ್ಕೆ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳು ನೂಜಿಬಾಳ್ತಿಲ, ರೆಂಜಿಲಾಡಿ, ಕೊಣಾಜೆ, ಕೊಂಬಾರು, ಸಿರಿಬಾಗಿಲು ಮುಂತಾದ ಪ್ರದೇಶದಲ್ಲಿ ರೈತರ ಜಮೀನುಗಳಿಗೆ ಬಂದು ಕೃಷಿ ನಾಶ ಮಾಡುತ್ತಲೇ ಇದೆ. ನಾವು ಜೀವ ಭಯದಿಂದಲೇ ಬದುಕುವಂತಾಗಿದೆ. ನಮ್ಮ ಅಳಲನ್ನು ಕೇಳುವವರು ಯಾರೂ ಇಲ್ಲ. ಇಲಾಖೆಯವರು ನರಹಂತಕ ಎಂದು ಒಂದು ಆನೆಯನ್ನು ಹಿಡಿದು ಸಾಗಿಸಿದ್ದಾರೆ. ಉಳಿದ ಆನೆಗಳು ಜನವಸತಿ ಪ್ರದೇಶಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಉಪಟಳ ನೀಡುವ ಆನೆಗಳನ್ನು ಹಿಡಿಯಲಾಗುವುದು ಎಂದು ಸ್ವತಃ ಜಿಲ್ಲಾಧಿಕಾರಿಗಳೇ ಹೇಳಿಕೆ ನೀಡಿದ್ದರು. ಆದರೆ ಇದೀಗ ಏಕಾಏಕಿ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ಜನರು ಆಳಲು ತೋಡಿಕೊಳ್ಳುತ್ತಿದ್ದಾರೆ.

Advertisement

ರೆಂಜಿಲಾಡಿ: ಏಳು ಕಾಡಾನೆ ಪ್ರತ್ಯಕ್ಷ !
ಸುಬ್ರಹ್ಮಣ್ಯ, ಫೆ. 27: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆ ಜಾಲು ಪ್ರದೇಶದಲ್ಲಿ ಏಳು ಕಾಡಾನೆ ಕಂಡುಬಂದ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಾಡಾನೆ ಹಿಂಡು ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನಾಲ್ಕು ದೊಡ್ಡ ಆನೆಗಳು ಹಾಗೂ ಮೂರು ಮರಿ ಆನೆಗಳು ಹಿಂಡಿನಲ್ಲಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೆಂಜಿಲಾಡಿ ಗ್ರಾಮದ ಖಂಡಿಗ ಎಂಬಲ್ಲಿಯೂ ಒಂಟಿ ಕಾಡಾನೆ ಇತ್ತು ಎಂದು ಮಾಹಿತಿ ಲಭ್ಯವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next