Advertisement

Kadaba: ನಾಪತ್ತೆಯಾಗಿದ್ದ ಸಂದೀಪ್‌ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

08:23 AM Dec 03, 2024 | Team Udayavani |

ಕಡಬ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ| ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್‌ ಗೌಡ (29) ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದಿಂದ ಸುಮಾರು 1.5 ಕಿ.ಮೀ. ದೂರ ನಾರಡ್ಕ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.

Advertisement

ಆತನನ್ನು ಸ್ನೇಹಿತ, ನೆಟ್ಟಣ ನಿವಾಸಿ ಪ್ರತೀಕ್‌ ಎಂಬಾತನು ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ನೆಟ್ಟಣ ರೈಲು ನಿಲ್ದಾಣದ ಬಳಿಯ ಗುಡ್ಡದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ತನಿಖೆಯಿಂದ ಬಯಲಾಗಿದೆ.

ಘಟನೆಯ ವಿವರ
ಸಂದೀಪ್‌ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು, ನ. 27 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ನಾಪತ್ತೆಯಾಗಿದ್ದ. ಆತ ಕೆಲಸ ಮುಗಿಸಿ ಪ್ರತೀಕ್‌ ಜತೆಗೆ ಕಾರಿನಲ್ಲಿ ಹೋಗಿರುವುದಾಗಿ ತಾಯಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕ್‌ ಹಾಗೂ ಇನ್ನೋರ್ವನನ್ನು ಪೊಲೀಸರು ನ. 1ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಸಾರ್ವಜನಿಕರ ಆಕ್ರೋಶ
ಆರೋಪಿಯನ್ನು ನಮ್ಮ ವಶಕ್ಕೆ ನೀಡಿ ಎಂದು ಸ್ಥಳೀಯರು ಪೊಲೀಸ್‌ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕೊಲೆಗೈದು ಮೃತದೇಹ‌ವನ್ನು ಕಾಡಿಗೆ ಸಾಗಿಸಲು ಒಬ್ಬನೇ ವ್ಯಕ್ತಿಗೆ ಸಾಧ್ಯವಿಲ್ಲ. ಕೃತ್ಯದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಎಲ್ಲರನ್ನೂ ಕೂಡಲೇ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

ಠಾಣೆ ಮುಂದೆ
ಜಮಾಯಿಸಿದ ಜನರು
ಮೃತದೇಹ ಪತ್ತೆಯಾಗುವ ಮೊದಲು ಸೋಮವಾರ ಬೆಳಗ್ಗೆ ಕಡಬ ಪೊಲೀಸ್‌ ಠಾಣೆಗೆ ಆಗಮಿಸಿದ ಸಂದೀಪ್‌ನ ತಾಯಿ, ಸಂಬಂಧಿಕರು ಹಾಗೂ ಊರವರು ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶವ್ಯಕ್ತಪಡಿಸಿದರು. ಸಂದೀಪ್‌ನನ್ನು ಕೊಲೆ ಮಾಡಿದ್ದಾನೆ ಎಂದು ಸಂಶಯಿಸಲಾಗಿದ್ದ ಆರೋಪಿ ಪ್ರತೀಕ್‌ನನ್ನು ಠಾಣೆಯಲ್ಲೇ ಇಟ್ಟುಕೊಂಡು ಪೊಲೀಸರು ವಿನಾ ಕಾರಣ ಕಾಲಹರಣ ಮಾಡುತ್ತಿದ್ದಾರೆ.

Advertisement

ಆರಂಭದಲ್ಲಿ ನಾಪತ್ತೆ ದೂರು ನೀಡಲು ಠಾಣೆಗೆ ಬಂದಾಗಲೂ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರು. ಬಳಿಕ ಎಂಎಲ್‌ಸಿ ಕಿಶೋರ್‌ ಕುಮಾರ್‌ ದೂರವಾಣಿ ಕರೆ ಮಾಡಿದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯು ಪೊಲೀಸರ ವಶ ದಲ್ಲಿದ್ದರೂ ಆತ ಸಂದೀಪ್‌ನ ಮೃತದೇಹವನ್ನು ಎಲ್ಲಿ ಬಚ್ಚಿಟ್ಟಿದ್ದಾನೆ ಎನ್ನುವುದನ್ನು ಕಂಡು ಹಿಡಿಯಲು ಪೊಲೀಸರು ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು, ದೂರು ನೀಡಲು ಬಂದವರನ್ನೇ ಗದರಿಸಿದ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಕಿಶೋರ್‌ಕುಮಾರ್‌ ಭೇಟಿ
ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಅವರು ಠಾಣೆಗೆ ಆಗಮಿಸಿ ಸಂದೀಪ್‌ನ ತಾಯಿ ಹಾಗೂ ಸಂಬಂಧಿಕರನ್ನು ಸಂತೈಸಿ ಎಡಿಷನಲ್‌ ಎಸ್ಪಿ ರಾಜೇಂದ್ರ ಡಿ.ಎಸ್‌., ಡಿವೈಎಸ್ಪಿ ಅರುಣ್‌ ನಾಗೇಗೌಡ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ರವಿ ಜಿ.ಎಸ್‌ ಅವರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಕುರಿತು ನಿಷ್ಪಕ್ಷ ತನಿಖೆ ನಡೆಸುವಂತೆ ಸೂಚಿಸಿದರು.

ಆರೋಪಿಯನ್ನು ಕಾಂಗ್ರೆಸ್‌ ಮುಖಂಡರೊಬ್ಬರು ರಕ್ಷಿಸಲು ಮುಂದಾಗಿದ್ದಾರೆ ಎಂಬ ಗುಮಾನಿ ಇದೆ ಎಂದು ಬಿಜೆಪಿ ಮುಖಂಡ ವೆಂಕಟ್‌ ವಳಲಂಬೆ ಹಾಗೂ ಕೃಷ್ಣ ಶೆಟ್ಟಿ ಕಡಬ ಆರೋಪಿಸಿದರು.

ಶವವನ್ನು ಕಾರಿನಲ್ಲೇ ಇರಿಸಿಕೊಂಡಿದ್ದನೇ?
ವಿಲೇವಾರಿ ಮಾಡಲು ಸಾಧ್ಯವಾಗದೆ ಪ್ರತೀಕ್‌ ಒಂದು ದಿನ ಶವವನ್ನು ಕಾರಿನಲ್ಲೇ ಇರಿಸಿಕೊಂಡು ಮರುದಿನ ನಾರಡ್ಕ ಕಾಡಿಗೆ ಸಾಗಿಸಿ ಶವನ್ನು ಸುಟ್ಟುಹಾಕಲು ಯತ್ನಿಸಿದ್ದ ಎನ್ನಲಾಗಿದೆ. ಪೊಲೀಸರು ವಶಕ್ಕೆ ಪಡೆಯುವ ಮೊದಲು ಅಮಾಯಕನಂತೆ ಸೋಗು ಹಾಕಿಕೊಂಡಿದ್ದ ಆರೋಪಿ, ನಾನು ಸಂದೀಪ್‌ನನ್ನು ಮರ್ದಾಳದಿಂದ ಕಾರಿನಲ್ಲಿ ಕರೆದುಕೊಂಡು ಬಂದು ನೆಟ್ಟಣದಲ್ಲಿ ಇಳಿಸಿದ್ದೆ. ಅವನು ನಾಪತ್ತೆಯಾಗಿರುವುದರಿಂದ ನನ್ನ ಮೇಲೆ ವಿನಾಕಾರಣ ಆತನ ಮನೆಯವರು ಮತ್ತು ಪೊಲೀಸರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಪರಿಚಿತರ ಮುಂದೆ ನಾಟಕವಾಡಿದ್ದ .

Advertisement

Udayavani is now on Telegram. Click here to join our channel and stay updated with the latest news.

Next