Advertisement

Kadaba: ಪ್ರಸ್ತಾವನೆಯಲ್ಲಿಯೇ ಉಳಿದ ಪಾರ್ಕಿಂಗ್‌ ವ್ಯವಸ್ಥೆ

02:41 PM Dec 01, 2023 | Team Udayavani |

ಕಡಬ: ತಾಲೂಕು ಕೇಂದ್ರವಾಗಿರುವ ಕಡಬ ಪೇಟೆಯಲ್ಲಿ ಮೂಲ ಸೌಕರ್ಯಗಳು ಮಾತ್ರ ಮರೀಚಿಕೆಯಾ ಗಿಯೇ ಉಳಿದಿವೆ. ಪೇಟೆಯಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ ಸಮರ್ಪಕ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾರ್ವಜನಿಕರು ಸದಾ ಕಿರಿಕಿರಿ ಅನುಭವಿಸುವಂತಾಗಿದೆ.

Advertisement

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾದು ಹೋಗುವ ಕಡಬ ಪೇಟೆ ವಾಣಿಜ್ಯ ನಗರವಾಗಿ ದಿನದಿಂದ ದಿನಕ್ಕೆ ಅಭಿವೃದ್ಧಿ
ಯಾಗುತ್ತಿದೆ. ಬೃಹತ್‌ ಕಟ್ಟಡಗಳು, ವ್ಯಾಪಾರ ವ್ಯವಹಾರ ಮಳಿಗೆಗಳು ಹೆಚ್ಚಾಗುತ್ತಲೇ ಇವೆ. ಅದಕ್ಕನುಗುಣವಾಗಿ ಪೇಟೆಯಲ್ಲಿ
ವಾಹನ ಹಾಗೂ ಜನಸಂದಣಿ ವೃದ್ಧಿಸುತ್ತಿದೆ.

ಸುಸಜ್ಜಿತವಾದ ಬಸ್‌ ನಿಲ್ದಾಣವೂ ಇಲ್ಲದೇ ಇರುವುದರಿಂದ ಸರಕಾರಿ ಬಸ್‌ಗಳು ಕೂಡ ಮಾರ್ಗದಲ್ಲಿಯೇ ನಿಂತು ಜನರನ್ನು
ಹತ್ತಿಸುವುದು ಮತ್ತು ಇಳಿಸುವುದು ಅನಿವಾರ್ಯವಾಗಿದೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆಗಾಲದಲ್ಲಿ ಮಳೆನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಈ ಎಲ್ಲಾ ಮೂಲ ಸೌಕರ್ಯಗಳ ಕೊರತೆಯ ಮಧ್ಯೆ ಇಲ್ಲಿ ಜನತೆಗೆ ದಿನನಿತ್ಯ ಕಾಡು
ವುದು ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ.

ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲ 
ಕಡಬ ಪೇಟೆಗೆ ನೆರೆಯ ಗ್ರಾಮಗಳಿಂದ ಜನರನ್ನು ಕರೆತರುವ ಟೂರಿಸ್ಟ್‌ ಜೀಪುಗಳು, ಟ್ಯಾಕ್ಸಿಗಳು, ಪಿಕಪ್‌ ಜೀಪುಗಳು ಹಾಗೂ
ಮಿನಿಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ರಸ್ತೆ ಬದಿಯೇ ನಿಲುಗಡೆ ಯಾಗುತ್ತಿದೆ. 350 ಕ್ಕೂ ಹೆಚ್ಚು ಇರುವ ಅಟೋ ರಿಕ್ಷಾಗಳಿಗೆ ಪಂಜ ರಸ್ತೆಯ ಪಕ್ಕ ಹಾಗೂ ಅಂಚೆ ಕಚೇರಿ ಬಳಿಯ ದೈವಗಳ  ಮಾಡದ ಪಕ್ಕದಲ್ಲಿ ಅಧಿಕೃತ ಆಟೋ ನಿಲ್ದಾಣಗಳಿದ್ದರೂ ಅದು ಸಾಲುತ್ತಿಲ್ಲ. ಪೇಟೆಯಲ್ಲಿ ಜಾಗ ಇರುವ ಕಡೆ ಅಟೋಗಳು ನಿಲುಗಡೆಯಾಗುತ್ತಿವೆ. ಇದೆಲ್ಲದರ ನಡುವೆ
ತಾಲೂಕಿನ 42 ಗ್ರಾಮಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಕಡಬ ಪೇಟೆಗೆ ಬರುವ ಜನರು ತಮ್ಮ ವಾಹನಗಳನ್ನು ಪಾರ್ಕಿಂಗ್‌
ಮಾಡಲು ಜಾಗ ಹುಡುಕುವುದರಲ್ಲಿಯೇ ಸುಸ್ತಾಗುತ್ತಾರೆ.

ಪ್ರಸ್ತಾವನೆಗೆ ಸೀಮಿತ
ಕಡಬದಲ್ಲಿ ಶುಲ್ಕ ಸಹಿತ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಗೆ 10 ವರ್ಷಗಳ ಹಿಂದೆಯೇ ಆಗಿನ ಗ್ರಾ.ಪಂ. ಆಡಳಿತ ಮುಂದಾಗಿತ್ತು.
ಗ್ರಾ.ಪಂ.ನ ಅಪೇಕ್ಷೆಗೆ ಜಿಲ್ಲಾಧಿಕಾರಿಗಳು ಪೂರಕವಾಗಿ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯಿಂದ ವರದಿ ಕೇಳಿದ್ದರು. ಅದರಂತೆ ಕಡಬ ಆರಕ್ಷಕ ಉಪನಿರೀಕ್ಷಕರು ಉದ್ದೇಶಿತ ಸ್ಥಳದ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಅಂದಿನ ಗ್ರಾ.ಪಂ. ಅಧ್ಯಕ್ಷ ಕೆ.ಎಂ.ಹನೀಫ್‌ ಅವರು ವರ್ತಕರು, ವಾಹನ ಚಾಲಕ-ಮಾಲಕರು, ಜನಪ್ರತಿನಿಧಿಗಳು, ಕಂದಾಯ ಹಾಗೂ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬಂದು ಸೈಂಟ್‌ ಜೋಕಿಮ್ಸ್‌ ಚರ್ಚ್‌ ಮುಂಭಾಗದಲ್ಲಿ ರಸ್ತೆಯ ಪಕ್ಕ 2 ಕಡೆ ಹಾಗೂ ದೈವಗಳ ಮಾಡದ ಬಳಿ ರಸ್ತೆಯ ಪಕ್ಕದ ಮಣ್ಣಿನ ದಿಣ್ಣೆಯನ್ನು ಸಮತಟ್ಟುಗೊಳಿಸಲಾಗಿತ್ತು.

Advertisement

ಸುಸಜ್ಜಿತ ಪಾರ್ಕಿಂಗ್‌, ಶೌಚಾಲಯ, ಕುಡಿಯುವ ನೀರು, ಸಣ್ಣ ಕೈತೋಟ ಹೀಗೆ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಸಂಸದರು, ಶಾಸಕರು, ಜಿ.ಪಂ.ಹಾಗೂ ತಾ.ಪಂ. ಅನುದಾನವನ್ನು ಕ್ರೂಢೀಕರಿಸಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ
ಮಾತುಕತೆ ನಡೆದಿತ್ತು. ಆದರೆ ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ವ್ಯವಸ್ಥೆ ಅನುಷ್ಠಾನಗೊಂಡರೆ ಒಳ್ಳೆಯದು
ಪೇಟೆಯಲ್ಲಿ ಸಮರ್ಪಕ ವಾಹನ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ನಮಗೂ ಪಾರ್ಕಿಂಗ್‌ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ವಾಹನ ಪಾರ್ಕಿಂಗ್‌ಗಾಗಿ ಗುರುತಿಸಲ್ಪಟ್ಟ ಜಾಗಗಳ ಬಗ್ಗೆ ಜಿಲ್ಲಾಧಿಕಾರಿಯವರು ವರದಿ ಕೇಳಿದ್ದ ಹಿನ್ನೆಲೆಯಲ್ಲಿ ಆಗಿನ ಉಪನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಉದ್ದೇಶಿತ ಪಾರ್ಕಿಂಗ್‌ ವ್ಯವಸ್ಥೆ ಶೀಘ್ರ ಅನುಷ್ಠಾನಗೊಂಡರೆ ಒಳ್ಳೆಯದು.
ಅಭಿನಂದನ್‌, ಕಡಬ ಆರಕ್ಷಕ ಉಪನಿರೀಕ್ಷಕರು

*ನಾಗರಾಜ್‌ ಎನ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next