ಕಡಬ: ಕಾಲೇಜು ಆವರಣದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಅಪರಿಚಿತ ವ್ಯಕ್ತಿಯಿಂದ ಆ್ಯಸಿಡ್ ದಾಳಿಯಾಗಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಮುಸುಕು ಧರಿಸಿದ್ದು, ಓರ್ವ ಆರೋಪಿಯನ್ನು ವಿದ್ಯಾರ್ಥಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.
ದಾಳಿಗೊಳಗಾದ ವಿದ್ಯಾರ್ಥಿನಿಯರನ್ನು ಅಲಿನ ಸಿಬಿ, ಅರ್ಚನಾ, ಅಮೃತ ಎಂದು ಗುರುತಿಸಲಾಗಿದೆ.
ಕೇರಳ ಮೂಲದ ವ್ಯಕ್ತಿಯ ಬಂಧನ:
ಘಟನೆಗೆ ಸಂಬಂಧಿಸಿ ಕೇರಳ ಮೂಲದ ಆರೋಪಿ ಅಬೀನ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಅಬೀನ್ ಕೇರಳದವನಾಗಿದ್ದು, 23 ವರ್ಷದ ಈತ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ. 17 ವರ್ಷದ ವಿದ್ಯಾರ್ಥಿನಿಯ ಮೇಲೆ ದಾಳಿ ನಡೆಸಿದ್ದಾನೆ. ಆಕೆ ಕಡಬ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿಯಾಗಿದ್ದು, ಆಕೆಯ ತಾಯಿಯ ಮನೆ ಕೇರಳದಲ್ಲಿದೆ ಎನ್ನಲಾಗಿದೆ. ಆಕೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಒಟ್ಟಿಗೆ ಕುಳಿತಿದ್ದ ಮತ್ತಿಬ್ಬರು ಹುಡುಗಿಯರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಆರೋಪಿ ಈ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.